ಪುತ್ತೂರು: ಕಾರಣಿಕದ ಕ್ಷೇತ್ರವಾಗಿರುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಭಕ್ತರ ಇಷ್ಟಾರ್ಥಗಳು ಈಡೇರಿಕೆಯಾದ ಸಂದರ್ಭ ಹರಕೆ ರೂಪದಲ್ಲಿ ದೈವಕ್ಕೆ ನೀಡುವ ವಿವಿಧ ಸೇವೆಗಳಲ್ಲಿ ಹರಕೆ ನೇಮವೂ ಒಂದಾಗಿದ್ದು, ವರ್ಷದಿಂದ ವರ್ಷಕ್ಕೆ ಹರಕೆ ನೇಮ ಹೆಚ್ಚಳವಾಗುತ್ತಿದೆ. ಈ ಬಾರಿ 6 ಹರಕೆ ನೇಮ ನಡೆಯಲಿದೆ.
ಜ.24ರಂದು ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ನೇಮೋತ್ಸವ ನಡೆದ ಬಳಿಕ ಜ.26ರಂದು ರಾತ್ರಿ ನಗರಸಭೆ ನಿಟಕಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ರಾಜಾರಾಮ ಪ್ರಭು ಅವರ ಎರಡು ಹರಕೆಯ ನೇಮ ನಡೆಯಿತು. ಜ.28ರಂದು ಪ್ರೇಮಕುಮಾರಿ ಮತ್ತು ಲಕ್ಷ್ಮೀಶ ಪವಿತ್ರಾ ಎಂಬವರ ಎರಡು ಹರಕೆ ನೇಮ ಹಾಗೂ ಜ.30ಕ್ಕೆ ವಿಜಿತ್ ಮಾಲಶ್ರೀ ಮತ್ತು ಚೆನ್ನಮ್ಮ ಎಂಬವರ ಪ್ರತ್ಯೇಕ ಎರಡು ನೇಮ ನಡೆಯಲಿದೆ. ಒಟ್ಟು 6 ಹರಕೆ ನೇಮ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ. ಕಲ್ಲೇಗ ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕಲ್ಲೇಗ, ಕಲ್ಲೇಗ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಹರಕೆಯ ನೇಮವಲ್ಲದೆ, ಸಂಕಲ್ಪಿಸಿದ ಕಾರ್ಯ ಯಶಸ್ವಿಯಾದ ಹಿನ್ನೆಲೆಯಲ್ಲಿ ಹಲವು ಭಕ್ತರು ಕಲ್ಲುರ್ಟಿ ದೈವಕ್ಕೆ ಪಟ್ಟೆ ಸೀರೆ, ಹೂವಿನ ಹಾರ ಸಹಿತ ಹಲವಾರು ಸೇವೆಗಳನ್ನು ನೀಡಿದರು.