ಸಂಟ್ಯಾರ್: ಅಪಾಯಕಾರಿ ರಸ್ತೆ ಸರಿಪಡಿಸಲು ಇಲಾಖೆಗೆ ಸೂಚನೆ ನೀಡಿದ ಶಾಸಕರು

0

ಪುತ್ತೂರು: ಸಂಟ್ಯಾರ್‌ನಿಂದ ಪಾಣಾಜೆಗೆ ತೆರಳುವ ಬಳಕ್ಕ ಎಂಬಲ್ಲಿ ರಸ್ತೆಯು ಅಪಾಯಕಾರಿಯಾಗಿದ್ದು ಇಲ್ಲಿ ಪದೇ ಪದೇ ಅಪಘಾತ ಉಂಟಾಗುತ್ತಿದೆ. ರಸ್ತೆ ನಿರ್ಮಾಣದ ವೇಳೆ ಇಲ್ಲಿರುವ ಅಪಾಯವನ್ನು ತೆರವು ಮಾಡದೇ ಇರುವ ಕಾರಣ, ಅನೇಕ ಜೀವಗಳು ಬಲಿಯಾಗಿದ್ದು ಮೂರು ದಿನದೊಳಗೆ ರಸ್ತೆಯ ಅಪಾಯಕಾರಿ ಸನ್ನಿವೇಶವನ್ನು ತೆರವು ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆಯನ್ನು ನೀಡಿದ್ದಾರೆ.


ಬಳಕ್ಕದಲ್ಲಿ ಕಳೆದ ವರ್ಷ ನಡೆದ ಅಪಘಾತದಲ್ಲಿ ನಿಡ್ಪಳ್ಳಿ ಗ್ರಾಪಂ ಸದಸ್ಯರೋರ್ವರು ಮೃತಪಟ್ಟಿದ್ದರು. ಜ.27ರ ರಾತ್ರಿ ರಿಕ್ಷಾವೊಂದು ಇದೇ ಸ್ಥಳದಲ್ಲಿ ಪಲ್ಟಿಯಾಗಿ ಚಾಲಕ ಪಾಣಾಜೆ ನಿವಾಸಿಯೋರ್ವರು ಮೃತಪಟ್ಟಿದ್ದಾರೆ. ರಸ್ತೆಯ ಮಧ್ಯ ಭಾಗ ಎತ್ತರವಾಗಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಶಾಸಕರಲ್ಲಿ ದೂರು ನೀಡಿದ್ದರು. ಕಳೆದ ಎರಡು ವರ್ಷಗಳಿಂದ ಜನಪ್ರತಿನಿಧಿಗಳ ಬಳಿ, ಇಲಾಖೆಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯ ವಾಹನ ಚಾಲಕರು ಶಾಸಕರಲ್ಲಿ ಮನವಿ ಮಾಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮೂರು ದಿನದೊಳಗೆ ದುರಸ್ಥಿ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಕೃಷ್ಣಪ್ರಸಾದ್ ಆಳ್ವ, ಪ್ರಜ್ವಲ್ ರೈ ಕೈಕಾರ, ಗಿರೀಶ್ ಕೈಕಾರ, ಬಾಬು ಮರಿಕೆ, ಮಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here