ದೇಶದಾದ್ಯಂತ ಸದ್ದು ಮಾಡಿದ್ದ ಪುತ್ತೂರಿನ ಬ್ಯಾನರ್ ಪ್ರಕರಣ-ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆ ” ಬಿ” ರಿಪೋರ್ಟ್ ಸಲ್ಲಿಕೆ – ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿರುವ ಹಿಂದೂ ಸಂಘಟನೆ

0

ಪುತ್ತೂರು: ಪುತ್ತೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಬ್ಯಾನರ್‌ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಿದ ಉಡುಪಿಯ ತನಿಖಾಧಿಕಾರಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ” ಬಿ” ರಿಪೋರ್ಟ್ ಸಲ್ಲಿಸಿದ್ದಾರೆ‌. ಇದನ್ನು ಖಂಡಿಸಿರುವ ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ಮುಂದಾಗಿದೆ.

ಕೆಲ ತಿಂಗಳ ಹಿಂದೆ ಪುತ್ತೂರಿನ ಹೃದಯ ಭಾಗದಲ್ಲಿ ಫ್ಲೆಕ್ಸ್‌ ಅಳವಡಿಸಿ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಯುವಕರ ಮೇಲೆ ನಡೆದಿದ್ದ ಪೊಲೀಸ್ ದೌರ್ಜನ್ಯದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್‌ಸ್ಟೇಬಲ್ ಹರ್ಷಿತ್ ಎಂಬವರ ವಿರುದ್ಧ ಎಫ್‌ ಐ ಆರ್ ದಾಖಲಾಗಿತ್ತು. ದೌರ್ಜನ್ಯಕ್ಕೆ ಒಳಗಾಗಿದ್ದ ಪುರುಷರಕಟ್ಟೆಯ ಅವಿನಾಶ್ ಮತ್ತು ಇತರರು ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದು, ಎಫ್‌ ಐ ಆರ್‌ ದಾಖಲಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಘಟನೆಯ ತನಿಖೆಗಾಗಿ ನೇಮಿಸಲಾಗಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು, ಈ ದೂರು ಸುಳ್ಳಾಗಿದ್ದು ತನಿಖೆ ನಡೆಸಲು ತಕ್ಕುದಲ್ಲ, ಕಾನೂನಿನ ತಪ್ಪು ತಿಳುವಳಿಕೆಯೆಂದು, ಕ್ರಮ ಜರಗಿಸತಕ್ಕುದಲ್ಲವೆಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ವರದಿ ಸ್ವೀಕರಿಸಿರುವ ನ್ಯಾಯಾಲಯ ದೂರುದಾರರಿಗೆ ವರದಿಯೊಂದಿಗೆ ನೋಟೀಸ್‌ ಜಾರಿ ಮಾಡಿದ್ದು ವರದಿಯನ್ನು ತಿರಸ್ಕರಿಸುವುದಿದ್ದರೆ ನೋಟೀಸ್‌ ತಲುಪಿದ ಒಂದು ವಾರದೊಳಗಾಗಿ ಸಂಬಂಧಿತ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿ ವಿರೋಧಿಸಬಹುದು ಎಂದು ಹೇಳಿದೆ.

ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಕುರಿತು ಸಮಗ್ರ ತನಿಖೆ ನಡೆಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು ಇದು ಹಿಂದೂ ಕಾರ್ಯಕರ್ತರನ್ನು ದಮನ ಮಾಡುವ ಕೆಲಸವಾಗಿದೆ ಎಂದು ಹೇಳಿರುವ ಹಿಂದೂ ಸಂಘಟನೆ ಪೊಲೀಸರ ಈ ಕ್ರಮವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದೆ.

LEAVE A REPLY

Please enter your comment!
Please enter your name here