ಫೆ.3-4: ಮಹಾಲಿಂಗೇಶ್ವರ ದೇವಸ್ಥಾನದ ಗೋವಿಹಾರ ಧಾಮದಲ್ಲಿ`ಗೋಲೋಕೋತ್ಸವ’

0

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

  • ವಿಚಾರ ಸಂಕಿರಣ
  • ವಿಶೇಷಖಾದ್ಯ, ಆಹಾರ ಮೇಳ
  • 50 ವಿವಿಧ ಮಳಿಗೆಗಳು
  • ಎತ್ತಿನಗಾನದಿಂದ ಎಣ್ಣೆ, ಕಬ್ಬಿನ ಹಾಲು ತೆಗೆಯುವ ಪ್ರಾತ್ಯಕ್ಷಿಕೆ
  • ಕುದುರೆ ಸವಾರಿಯ ವಿಶೇಷ ಆಕರ್ಷಣೆ
  • ದೇಸಿ ಗೋತಳಿಗಳ ಪ್ರದರ್ಶನ

ಪುತ್ತೂರು: ಕುರಿಯ ಗ್ರಾಮದ ಸಂಪ್ಯದಮೂಲೆ ಎಂಬಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರುಗೊಂಡ ಗೋವಿಹಾರ ಧಾಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗ ಇದರ ನೇತೃತ್ವದಲ್ಲಿ ಗೋಲೋಕೋತ್ಸವ’ ಎಂಬ ವಿನೂತನ ಕಾರ್ಯಕ್ರಮಗಳು ಫೆ.3ಮತ್ತು 4ರಂದು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು. ಜ.29ರಂದು ಗೋವಿಹಾರ ಧಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಟ್ಟೆತ್ತಡ್ಕ ಎನ್‌ಆರ್‌ಸಿಸಿಯ ಸಮೀಪ ಕುರಿಯ ಗ್ರಾಮದ ಸಂಪ್ಯದಮೂಲೆ ಎಂಬಲ್ಲಿ 19.10ಎಕ್ರೆ ಜಾಗ ದೇವಸ್ಥಾನದ ಗೋವಿಹಾರ ಧಾಮಕ್ಕೆ ಮಂಜೂರುಗೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್‌ರವರ ಮುತುವರ್ಜಿಯಿಂದ ಈ ಜಾಗವು ಮಂಜೂರುಗೊಂಡಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಮೂಲಕ ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಇಲ್ಲಿ ಸುಂದರ ಗೋವಿಹಾರ ಧಾಮ, ಗೋವುಗಳೇ ಸ್ವತಃ ಮೇಯಲು ಅನುಕೂಲವಾಗುಂತ ವಾತಾವರಣ ನಿರ್ಮಿಸಲಾಗುವುದು.ಇಲ್ಲಿ ನೀರಿನ ತೊರೆಯೊಂದಿದ್ದು ಅಲ್ಲಿ ಸುಮಾರು 1.25ಎಕ್ರೆ ವಿಸ್ತೀರ್ಣದಲ್ಲಿ ವಿಶಾಲವಾದ ಪುಷ್ಕರಿಣಿಯನ್ನು ನಿರ್ಮಿಸಲಾಗುವುದು. ಇದರ ಮೂಲಕ ಗೋವುಗಳಿಗೆ ಕುಡಿಯಲು ನೀರಿನ ಜೊತೆಗೆ ಪರಿಸರ ಮನೆಗಳಿಗೆ ಹಗೂ ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳು ಅನುಕೂಲ ಕಲ್ಪಿಸಲಾಗುವುದು. ಭಕ್ತರ ಸೇವಾ ರೂಪದಲ್ಲಿ ಕೊಳವೆ ಬಾವಿ, ಪಂಪ್, ವಿದ್ಯುತ್ ಸಂಪರ್ಕ ಹಾಗೂ ಪೈಪ್‌ಲೈಗಳನ್ನು ಅಳಡಿಸಿಕೊಟ್ಟಿರುತ್ತಾರೆ ಎಂದರು.

ದೇಸೀ ಗೊತಳಿಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಇಲ್ಲಿ ಗೋ ವಿಹಾರವನ್ನು ನಡೆಸಲಾಗುವುದು. ದೇಸೀ ಗೋವಿನ ಗೊಬ್ಬರ, ಮೇವು ಬೆಳೆಸುವುದು, ಕೃಷಿಗೆ ಸ್ಲರಿ ಸರಬರಾಜು ಮಾಡಲಾಗುವುದು. ಜಾಗವು ದೇವಸ್ಥಾನಕ್ಕೆ ಮಂಜೂರುಗೊಂಡು ಗಡಿಗುರುತು ಮಾಡಿ ದೇವಸ್ಥಾನದ ಹೆಸರಿನಲ್ಲಿ ಆರ್‌ಟಿಸಿಯೂ ಆಗಿದೆ ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು. ಗೋವಿಹಾರ ಜಾಗ ಸಮತಟ್ಟು ಮಾಡುವಲ್ಲಿ ಹಲವು ಮಂದಿ ಕನ್‌ಸ್ಟ್ರಕ್ಷನ್ ಮ್ಹಾಲಕರು ಹಾಗೂ ಆರ್ಥ್‌ಮೂವರ್‍ಸ್‌ನವರು ಜೆಸಿಬಿ, ಹಿಟಾಚಿಗಳನ್ನು ಉಚಿತವಾಗಿ ನೀಡಿ ಸಹಕರಿಸಿದ್ದಾರೆ. ಜೊತೆಗೆ ಹಲವು ಮಂದಿ ಕರಸೇವಕರು ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ಸಂಯೋಜಕ ವಿಜಯ ಬಿ.ಎಸ್ ಹೇಳಿದರು. ಜ.3ರಂದು ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿಹೋಮ, ಗೋಸೂಕ್ತ ಹೋಮ ಹಾಗೂ ಗೋಪೂಜೆ ನಡೆಯಲಿದೆ. ಮುರಳಿಕೃಷ್ಣ ಹಸಂತಡ್ಕ ಉಪಸ್ಥಿತಿಯಲ್ಲ ಮಾಣಿಲ ಮೋಹನದಾಸ ಸ್ವಾಮೀಜಿಯರಿಂದ ಪಶುಪತಿನಾಥ ಭಜನಾ ಮಂಟಪದಲ್ಲಿ ಭಜನೆಗೆ ಚಾಲನೆ ದೊರೆಯಲಿದೆ. ಸಂಜೆ ಬಿ.ಜಯರಾಮ ನೆಲ್ಲಿತ್ತಾಯರವರ ಉಪಸ್ಥಿತಿಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿಯವರು ಕೆರೆಯ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ನೃತ್ಯ ರಂಜಿನಿ ಕಲಾಲಯ ಮೊಟ್ಟೆತ್ತಡ್ಕ ಇವರಿಂದಕಾಳಿಂಗ ಮರ್ದನ-ಗೋಪಿಕೃಷ್ಣ’ ಎಂಬ ನೃತ್ಯರೂಪಕ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಗೋ ರಕ್ಷತಿ ರಕ್ಷಿತ: ಎಂಬ ನೃತ್ಯ ರೂಪಕ ನಡೆಯಲಿದೆ. ನಂತರ ಡಾ ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿ-ಭಾವ-ಲಹರಿ’ ನಡೆಯಲಿದೆ ಎಂದು ಗೋ ವಿಹಾರ ಧಾಮ ಸಂಚಾಲಕ ಗೋಪಾಲಕೃಷ್ಣ ಭಟ್ ಹೇಳಿದರು. ಫೆ.4ರಂದು ಬೆಳಿಗ್ಗೆ ಹೋಮ, ಗೋಪೂಜೆ, ನೋಂದಾವಣಿ, ಉಪಾಹಾರ, ನಂತರ ಗೋವು-ನಾವು ವಿಚಾರ ಸಂಕಿರಣ ಹಾಗೂ ಧಾರ್ಮಿಕ ಶಿಕ್ಷಣದ ಮಕ್ಕಳ ಮತ್ತು ವಿದ್ಯಾರ್ಥಿ ಸಮಾವೇಶ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಕ್ತಿ ಭಾವ ಸತ್ಸಂಗ, ಉಡುಪಿ ಅದಮಾರು ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ ಹಾಗೂ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಂಜೆ ನಡೆಯುವ ಧರ್ಮ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ರವೀಶ ತಂತ್ರಿಯವರು ಆಶೀರ್ವಚನ ನೀಡಲಿದ್ದಾರೆ. ಬಳಿಕ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ಇವರಿಂದಧರ್ಮ ದೇನು’ ಎಂಬ ನೃತ್ಯರೂಪಕ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಐತ್ತಪ ನಾಯ್ಕ ಹೇಳಿದರು.

50 ವಿವಿಧ ಮಳಿಗೆಗಳು:
ಗೋಲೋಕೋತ್ಸವದಲ್ಲಿ ಕೆಎಂಎಫ್‌ನ ವಿವಿಧ ಉತ್ಪನ್ನಗಳು, ಗೋವಿನ ಉತ್ಪನ್ನ ಖಾದ್ಯಗಳು, ಗೋಮಯ, ಗೋಮೂತ್ರದಿಂದ ತಯಾರಿಸಲ್ಪಟ್ಟ ಮೂರ್ತಿಗಳು, ಕ್ರಿಮಿನಾಶಕಗಳು, ಔಷಧಿಗಳ ಮಳಿಗೆ ಸೇರಿದಂತೆ ಒಟ್ಟು ೫೦ಮಳಿಗೆಗಳು ಮೇಳದ ವಿಶೇಷತೆಯಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ತಿಳಿಸಿದರು.

ಕುದುರೆ ಸವಾರಿ ವಿಶೇಷ ಆಕರ್ಷಣೆ:
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಎತ್ತಿನ ಗಾನದಿಂದ ಕಬ್ಬಿನ ಹಾಲು, ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ ಮತ್ತು ಮಾರಾಟ, ಖಾದ್ಯ ಮೇಳ, ಆಹಾರ ಮೇಳ, ಹೈನುಗಾರರಿಂದ ರಾಸುಗಳ ಮತ್ತು ಗೋಪ್ರೇಮಿಗಳಿಂದ ದೇಸೀ ತಳಿಯ ಗೋವುಗಳ ಪ್ರದರ್ಶನ ಮತ್ತು ವಿಶೇಷ ಆಕರ್ಷಣೆಯಾಗಿ ಕುದುರೆ ಸವಾರಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ತಿಳಿಸಿದರು.

ಗೋವು-ನಾವು ವಿಚಾರ ಸಂಕಿರಣದಲ್ಲಿ ಗೋಫಲ ಟ್ರಸ್ಟ್‌ನ ಅಧ್ಯಕ್ಷ ಕೊಂಕೋಡಿ ಪದ್ಮನಾಭ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸೌತ್ತಡ್ಕ ಶ್ರೀಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್, ಗೋಸಾಡ ಅಮೃತಧಾರಾ ಗೋಬ್ಯಾಂಕ್ ಅಧ್ಯಕ್ಷ ಮುರಳೀಧರ ಪ್ರಭು, ಬದಿಯಡ್ಕ ನೆಕ್ಕರೆ ಕಲೆಯ ಶ್ರೀಸುಬ್ರಹ್ಮಣ್ಯ ಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತೀಯ ಗೋಸೇನಾ ಪ್ರಮುಖ್ ಪ್ರವೀಣ್ ಸರಳಾಯ ವಿಚಾರ ಮಂಡಿಸಲಿದ್ದಾರೆ. ಪಶುವೈದ್ಯ ಡಾ.ಕೆ.ಎಂ ಕೃಷ್ಣ ಭಟ್ ವಿಚಾರ ಸಂಕಿರಣದ ಮುಕ್ತಾಯ ಭಾಷಣ ಮಾಡಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ರಾಧಾಕೃಷ್ಣ ನಾಕ್ ಕೊಟ್ಟಿಬೆಟ್ಟು ಏಲ್ನಾಡುಗುತ್ತು, ಕಡಮಜಲು ಸುಭಾಸ್ ರೈ, ಕಲ್ಲೇಗ ಸಂಜೀವ ನಾಯಕ್, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ನಗರ ಸಭಾ ಸದಸ್ಯ ಜೀವಂಧರ್ ಜೈನ್, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಹಾಗೂ ಖ್ಯಾತ ವೈದ್ಯ ಡಾ. ಎಂ.ಕೆ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ, ಗೋಸೇವಾ ಬಳಗದ ನವೀನ್ ರೈ ಪಂಜಳ ಹಾಗೂ ಸುದೇಶ್ ಚಿಕ್ಕಪುತ್ತೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here