ನರೇಂದ್ರ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ದೀಪ ಪ್ರದಾನ ಕಾರ್‍ಯಕ್ರಮ

0

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳ ಪರಿಶ್ರಮವೇ ಅವರ ಮುಂದಿನ ಗುರಿಗೆ ಉತ್ತಮ ಮಾರ್ಗ ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಮುನ್ನಡೆಯಬೇಕಿದೆ. ಸಾಧನೆಯ ಯಶಸ್ಸು ಪಡೆಯಲು ಮಾರ್ಗ ಸರಳವಾಗಿಲ್ಲ, ಆದರೆ ಸತತ ಪರಿಶ್ರಮದಿಂದ ಯಶಸ್ಸಿನ ಹಾದಿಯತ್ತ ಸಾಗಲು ಸಾಧ್ಯ. ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾ ಶಕ್ತಿಯೆಂಬ ಅಂಶ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜೀವನವನ್ನು ಉತ್ತಮವಾಗಿ ಮಾಡಲು ಸಾಧ್ಯ. ಜೊತೆಗೆ ವಿದ್ಯಾರ್ಥಿಗಳು ಸಿಕ್ಕ ಅವಕಾಶದಲ್ಲಿ ಅದರ ಸದುಪಯೋಗ ಪಡೆದುಕೊಳ್ಳಲು ಯತ್ನಿಸಬೇಕು. ವಿದ್ಯಾರ್ಥಿಗಳಲ್ಲಿನ ಕಿಚ್ಚು ಯಾವತ್ತು ಸಕ್ರಿಯವಾಗಿದ್ದರೆ ಗುರಿ ಸಾಧನೆಗೆ ಸಹಕಾರಿಯಾಗಲಿದೆ. ಎಂದು ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಇದರ ಸಂಚಾಲಕರಾದ ಗೋವಿಂದ ಪ್ರಕಾಶ್ ಸಾಯ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ದೀಪ ಪ್ರದಾನ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಉಮೇಶ್ ನಾಯಕ್, ಬದುಕಿಗೊಂದು ದಿಕ್ಕು ಮತ್ತು ಆ ದಿಕ್ಕಿನಲ್ಲಿ ಸಾಗಬೇಕಾದ ದಾರಿಯ ಅರಿವನ್ನು ಇಂದಿನ ಯುವಪೀಳಿಗೆಯಲ್ಲಿ ಮೂಡಿಸುವ ಕೆಲಸವನ್ನು ನಮ್ಮ ಸಂಸ್ಥೆಗಳು ಮಾಡುತ್ತಿದೆ. ಅದಕ್ಕೆ ಪೂರಕವಾದ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನದಲಿ ಅಳವಡಿಸಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ಸಮಾಜದಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಿ. ದಿನನಿತ್ಯ ಅಧ್ಯಯನ ಮತ್ತು ಚಿಂತನೆಯೊಂದಿಗೆ, ಭವಿಷ್ಯದಲ್ಲಿ ಬರುವ ಸವಾಲನ್ನು ಎದುರಿಸಲು ಧೈರ್ಯದಿಂದ ಸಾಗಬೇಕು. ವಿದ್ಯಾರ್ಥಿಗಳ ಸಾಧನೆಗೆ ಶ್ರಮ, ತಾಳ್ಮೆ, ಶ್ರದ್ಧೆ ಎಂಬ ನಿರ್ದಿಷ್ಟ ಮಾರ್ಗವಿದ್ದು, ಸಾಧಿಸುತ್ತೇನೆ ಎಂಬ ದೃಢ, ಅಚಲವಾದ ನಿರ್ಧಾರ ತಳೆದಾಗ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಕಲ್ಲೂರಾಯ ಮಾತನಾಡಿ, ಇಂದಿನ ಯುವ ಜನತೆ ಜೀವನದಲ್ಲಿ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗ ಸ್ಥಾನಕ್ಕೆ ಏರಬಹುದು. ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಸತತ ಪ್ರಯತ್ನ, ಸಮಯ ಪಾಲನೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದರ ಮೂಲಕ ಯಶಸ್ಸಿನ ಕಡೆಗೆ ಸಾಗಬಹುದು. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಕು. ಶ್ರೇಯ ಸ್ವಾಗತಿಸಿ, ಕು. ವಂದಿತಾ ವಂದಿಸಿದರು. ಕಾರ್‍ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಗುರುದೀಪ್ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗಾಗಿ ಆಕರ್ಷಕ ಮೋಜಿನ ಆಟಗಳನ್ನು ಆಯೋಜಿಸಿಲಾಯಿತು.

LEAVE A REPLY

Please enter your comment!
Please enter your name here