ನಮ್ಮ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗಿ ರಾಮರಾಜ್ಯವೆಂದು ಘೋಷಣೆಯಾಗಲಿ

0

ಈ ಮೇಲಿನ ವಿಷಯವನ್ನು ಸುದ್ದಿ ಜನಾಂದೋಲನ ವೇದಿಕೆ ಹಲವಾರು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದೆ. ಆ ಘೋಷಣೆಯ ಫಲಕಗಳು ಈಗಲೂ ಅಲ್ಲಲ್ಲಿ ರಾರಾಜಿಸುತ್ತಿವೆ. ಆ ವಿಷಯಗಳನ್ನು ಪ್ರತಿಪಾದಿಸಲು, ಜನರಿಗೆ ತಲುಪಿಸಲು ಪ್ರಧಾನಿ ಮೋದೀಜಿಯವರ ಕ್ಷೇತ್ರ ವಾರಣಾಸಿಯಲ್ಲಿ, ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಿ ಪ್ರಚಾರ ಮಾಡಲು ಪ್ರಯತ್ನಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಕ್ಷೇತ್ರ ವರುಣಾದಲ್ಲಿ ಸ್ಪರ್ಧಿಸಿ ಈ ವಿಚಾರ ಜನರಿಗೆ ತಲುಪಿಸಲು ಪ್ರಯತ್ನಿಸಿದ್ದೇನೆ. ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಸೇವೆ ಮಾಡುವ ಅಧಿಕಾರಿಗಳನ್ನು ಗುರುತಿಸಿ ಗೌರವಿಸಿದ್ದೇವೆ. ಇದರಿಂದ ಉತ್ತಮ ಸೇವೆ ಮಾಡುವವರಿಗೆ ಪ್ರೋತ್ಸಾಹ, ಲಂಚ, ಭ್ರಷ್ಟಾಚಾರ ಮಾಡುವವರಿಗೆ ಬಹಿಷ್ಕಾರದ ಅನುಭವವಾಗಿದೆ. ಪುತ್ತೂರು ಶಾಸಕ ಅಶೋಕ್ ರೈಯವರು ಲಂಚ, ಭ್ರಷ್ಟಾಚಾರವನ್ನು ವಿರೋಧಿಸುವುದಲ್ಲದೆ. ಅಽಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನತೆಗೆ ಹಿಂತಿರುಗಿಸಿದ್ದಾರೆ.


ಪ್ರಜಾಪ್ರಭುತ್ವದಲ್ಲಿ ಮತದಾರರೇ ರಾಜರುಗಳು. ಜನಸೇವೆಗೆಂದು ನೇಮಕವಾಗಿರುವ, ಸಂಬಳ ಪಡೆಯುವ ಅಧಿಕಾರಿಗಳು ಜನತೆಗೆ ಸೇವೆ ನೀಡಬೇಕು. ಆದರೆ ಅದರಲ್ಲಿ ಹೆಚ್ಚಿನವರು ಜನರನ್ನು ಶೋಷಣೆ ಮಾಡಿ ಲಂಚ ಪಡೆಯುತ್ತಿರುವ ಅನುಭವ ಎಲ್ಲರಿಗೂ ಇದೆ. ಅವರನ್ನು ನಿಯಂತ್ರಿಸಲಿಕ್ಕಾಗಿ ಉತ್ತಮ ಆಡಳಿತಕ್ಕಾಗಿ ನಾವು ಜನಪ್ರತಿನಿಧಿಗಳನ್ನು ಆರಿಸುತ್ತೇವೆ. ಆದುದರಿಂದ ನಮ್ಮ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ನಡೆದರೆ ಅದರ (ಅದನ್ನು ನಿಲ್ಲಿಸುವ) ಜವಾಬ್ದಾರಿಯನ್ನು ನಾವು ಆರಿಸಿದ ಸಂಸದರು ಜಿಲ್ಲೆಯಲ್ಲಿ, ಶಾಸಕರು ತಾಲೂಕಿನಲ್ಲಿ, ಪಂಚಾಯತ್ ಜನಪ್ರತಿನಿಧಿಗಳು ಪಂಚಾಯತ್‌ನಲ್ಲಿ, ವಹಿಸಿಕೊಳ್ಳಲೇಬೇಕು. ಲಂಚವಾಗಿ ಅಧಿಕಾರಿಗಳು ಪಡೆದ ಹಣವನ್ನು ಜನತೆಗೆ ಹಿಂತಿರುಗಿಸಲೇ ಬೇಕು. ಯಾವುದೇ ಪಕ್ಷವಿರಲಿ, ಅಭ್ಯರ್ಥಿ ಇರಲಿ ಮತದಾರರು ತಾವು ಓಟು ನೀಡಿ ಗೆಲ್ಲಿಸಿದ ಅಭ್ಯರ್ಥಿಯನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು – ಅದೇ ಪ್ರಜಾಪ್ರಭುತ್ವ.ಅದಕ್ಕಾಗಿ ಮತದಾನದ ಹಕ್ಕು ಇರುವುದಾಗಿದೆ.


ಈ ಸಲದ ಲೋಕಸಭಾ ಚುನಾವಣೆಯ ಮುಂಚೆ ನಮ್ಮ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗಿರಬೇಕು, ಉತ್ತಮ ಸೇವೆಗೆ ಪುರಸ್ಕಾರ ದೊರಕಬೇಕು. ಭ್ರಷ್ಟಾಚಾರಕ್ಕೆ ಬಹಿಷ್ಕಾರವಾಗಬೇಕು. ಅಂತಹ ರಾಮರಾಜ್ಯ ನಮಗೆ ಬೇಕು ಎಂದು ಓಟಿಗೆ ನಿಂತ ಪ್ರತಿಯೊಬ್ಬ ಅಭ್ಯರ್ಥಿಯನ್ನು ಮತದಾರ ಕೇಳಬೇಕು. ಲಂಚ ನಿಲ್ಲಿಸುತ್ತೇವೆ, ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತೇವೆ ಎಂಬ ಭರವಸೆಯನ್ನು ಅಭ್ಯರ್ಥಿಗಳಿಂದ ಪಡೆಯಬೇಕು.

ವಿ.ಸೂ: ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಬೇಕು ಅದಕ್ಕೆ ಮತದಾರರು ಏನು ಮಾಡಬೇಕು?ಸಂಸದರ, ಶಾಸಕರ, ಜನಪ್ರತಿನಿಽಗಳ ಮತ್ತು ಮತದಾರರ ಕರ್ತವ್ಯ ಏನು? ಎಂಬ ಬಗ್ಗೆ ಜನಾಭಿಪ್ರಾಯ ನೀಡಿ ಈ ಆಂದೋಲನ ಯಶಸ್ವಿಯಾಗಲು ಪಾಲುದಾರರಾಗಿರಿ.

LEAVE A REPLY

Please enter your comment!
Please enter your name here