ಕಾಂಗ್ರೆಸ್ ಕಾರ್ಯಕರ್ತರ ಸಭೆ-ವಲಯ ಅಧ್ಯಕ್ಷರ ಆಯ್ಕೆ – ಪಡುವನ್ನೂರು ವಲಯಾಧ್ಯಕ್ಷರಾಗಿ ರವಿರಾಜ್ ರೈ

0

ಪುತ್ತೂರು : ಪಡುವನ್ನೂರು ವಲಯ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗುರುವಾರ ಸಂಜೆ ಬಡಗನ್ನೂರಿನಲ್ಲಿ ನಡೆಯಿತು. ಸಭೆಯಲ್ಲಿ ಪಡುವನ್ನೂರು ಕಾಂಗ್ರೆಸ್ ವಲಯ ಸಮಿತಿಯ ಅಧ್ಯಕ್ಷರಾಗಿ ಬಡಗನ್ನೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್ ರೈ ಸಜಂಕಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅವರು ಮಾತನಾಡಿ, ಮುಂದೆ ಲೋಕಸಭಾ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿದ್ದು, ಕಾರ್ಯಕರ್ತರು ಈಗಿಂದೀಗಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಶಾಸಕರ ಕಾರ್ಯವೈಖರಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣವಿದ್ದು,ಈ ಅವಕಾಶಗಳನ್ನು ಬಳಸಿಕೊಂಡು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಪುತ್ತೂರು ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ, ಈ ಹಿಂದೆ ನಮಗೆ ಯಾವುದೇ ಅವಕಾಶಗಳು ಇರಲಿಲ್ಲ. ಆದರೆ ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದಾರೆ, ಅಕ್ರಮ-ಸಕ್ರಮ, 94ಸಿಸಿ, 94ಸಿ ಸೇರಿದಂತೆ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಹಾಗೂ ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ಶಾಸಕರಿರುವುದರಿಂದ ಇದು ನಮಗೆ ಪಕ್ಷ ಸಂಘಟನೆಗೆ ಸುವರ್ಣ ಕಾಲ ಎಂದರು.

ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಮತ್ತು ಪುತ್ತೂರು ಬ್ಲಾಕ್‌ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.
ಬಡಗನ್ನೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ರವಿರಾಜ್ ರೈ ಸಜಂಕಾಡಿ, ಕಾಂಗ್ರೆಸ್ ಬಡಗನ್ನೂರು ವಲಯಾಧ್ಯಕ್ಷ ಅಬೀಬ್, ಪಕ್ಷದ ಮುಖಂಡರಾದ ಪುರಂದರ ರೈ ಕುದ್ಕಾಡಿ, ವಾಮನ ಮೂಲ್ಯ, ವಿಜಯಕುಮಾರ್ ಸೋಣಂಗಿರಿ, ಚಂದ್ರಶೇಖರ್ ಗೌಡ ಕನ್ನಡ್ಕ, ಅನ್ವರ್ ಸಾದತ್ ಸುಳ್ಯಪದವು, ಜಗನ್ನಾಥ ಗೌಡ ಪೈರುಪುಣಿ, ರಾಕೇಶ್ ರೈ ಕುದ್ಕಾಡಿ,ಮಹಾಲಿಂಗ ಪಾಟಾಳಿ ಕುದ್ಕಾಡಿ, ಕರೀಂ ಸುಳ್ಯಪದವು, ಮನೀತ್ ರೈ ಕುದ್ಕಾಡಿ, ಹರೀಶ್ ಪೂಜಾರಿ, ಜುನೈದ್ ಬಡಗನ್ನೂರು ಮತ್ತಿತರರು ಉಪಸ್ಥಿತರಿದ್ದರು.

ವಲಯ ಅಧ್ಯಕ್ಷರ ಆಯ್ಕೆ
ಪಡುವನ್ನೂರು ಕಾಂಗ್ರೆಸ್ ವಲಯ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಅವರ ನಿಧನದಿಂದಾಗಿ ತೆರವಾಗಿದ್ದ ವಲಯ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಪ್ರಸ್ತಾಪಿಸಿದರು. ಈ ವೇಳೆ ರವಿರಾಜ್ ರೈ ಸಜಂಕಾಡಿ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here