ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಅರ್ಪಿಸುವ ‘ಕಾಂಚನೋತ್ಸವ 2024’ ಹಾಗೂ 70ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚಣೆ ಪ್ರಯುಕ್ತ ಫೆ.3ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಫೆ.3 ಹಾಗೂ 4ರಂದು ನಡೆಯುವ ಕಾಂಚನೋತ್ಸವ ಕಾರ್ಯಕ್ರಮಗಳಿಗೆ ಫೆ.3ರಂದು ಸಂಜೆ ಚಾಲನೆ ನೀಡಲಾಯಿತು. ಅತಿಥಿ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ ಹಾಗೂ ಅಧ್ಯಾಪಕರು, ಶಿಷ್ಯ-ಪ್ರಶಿಷ್ಯವೃಂದದವರು ಹಾಗೂ ಊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂದು ಅಮೋಘ ಸಂಗೀತ ಕಛೇರಿ:
ಕಾಂಚನೋತ್ಸವದ 2ನೇ ದಿನವಾದ ಫೆ.4ರಂದು ಬೆಳಿಗ್ಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ನಡಿಗೆ, ಬಳಿಕ ಪಂಚರತ್ನ ಕೃತಿಗಳ ಗೋಷ್ಠಿಗಾನ, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದ್ದು ಗಾಯನದಲ್ಲಿ ವಿದ್ವಾನ್ ಭರತ್ ಸುಂದರ್, ವಯೊಲಿನ್‌ನಲ್ಲಿ ವಿದ್ವಾನ್ ಮೈಸೂರು ಕಾರ್ತಿಕ್, ಮೃದಂಗದಲ್ಲಿ ಪದ್ಮವಿಭೂಷಣ ಸಂಗೀತ ಕಲಾನಿಧಿ ವಿದ್ವಾನ್ ಉಮಯಾಲ್‌ಪುರಂ ಕೆ.ಶಿವರಾಮನ್ ಹಾಗೂ ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ ಭಾಗವಹಿಸಲಿದ್ದಾರೆ.