ವಿಜಯ- ವಿಕ್ರಮ ಜೋಡುಕರೆ ಕಂಬಳದ ಕರೆ ಮಹೂರ್ತ – ಕಂಬಳದೊಂದಿಗೆ ಆಹಾರ- ಸಸ್ಯ ಮೇಳ ಜೋಡಣೆ: ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಸಾರಥ್ಯದಲ್ಲಿ ನಡೆಯುವ 38ನೇ ವರ್ಷದ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳಕ್ಕೆ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯಲ್ಲಿ ಫೆ.4ರಂದು ಕರೆ ಮುಹೂರ್ತ ನಡೆಯಿತು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ ಉಪಾಧ್ಯಾಯರು ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಬಳಿಕ ನಡೆದ ಕಂಬಳ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆದ ಅಶೋಕ್ ರೈ, ನನ್ನ ಶಾಸಕತ್ವದ ಅವಧಿಯಲ್ಲಿ ಉಪ್ಪಿನಂಗಡಿಯಲ್ಲಿ ನಡೆಯುವ ಮೊದಲ ಕಂಬಳ ಇದಾಗಿದ್ದು, ಈ ಬಾರಿ ಈ ಜನಪದ ಕ್ರೀಡೆಯನ್ನು ಕಂಬಳೋತ್ಸವನ್ನಾಗಿ ವಿಜೃಂಭಣೆಯಿಂದ ಆಚರಿಸಬೇಕು. ಬೆಂಗಳೂರಿನಲ್ಲಿ ಕಂಬಳವು ಯಶಸ್ವಿಯಾಗಿ ಜರಗಿದ ಬಳಿಕ ಜನರಲ್ಲಿ ಕಂಬಳವೆಂದರೆ ನಿರೀಕ್ಷೆಗಳು ಹೆಚ್ಚಿವೆ. ಅದಕ್ಕೊಂದು ಉತ್ಸವದ ಮೆರುಗು ಬಂದಿದೆ. ಈ ಬಾರಿಯ ಉಪ್ಪಿನಂಗಡಿ ಕಂಬಳವು ಬರೇ ಕೋಣಗಳ ಓಟಕ್ಕಷ್ಟೇ ಸೀಮಿತವಾಗದೇ, ತುಳುನಾಡಿನ ಆಹಾರ ಶೈಲಿಯನ್ನು ಬಿಂಬಿಸುವ ಆಹಾರ ಮೇಳ, ಕೃಷಿ ಪದ್ಧತಿಗೆ ಪೂರಕವಾಗಿ ಕೃಷಿ ಯಂತ್ರೋಪಕರಣ ಸೇರಿದಂತೆ ಸಸ್ಯ ಮೇಳವನ್ನು ಆಯೋಜಿಸಬೇಕು ಎಂದರು.

ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಅಣೆಕಟ್ಟಿನ ಪ್ರಸ್ತಾವನೆಯನ್ನು ನಾನೀಗಲೇ ಸಲ್ಲಿಸಿದ್ದು, ಶೀಘ್ರವೇ ಅನುದಾನ ಬರಲಿದೆ. ಅಲ್ಲಿ ಅಣೆಕಟ್ಟು ಆದ ಬಳಿಕ ಈ ಜಾಗದಲ್ಲಿ ಕಂಬಳ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಆದರೆ ಯಾವುದೇ ಕಾರಣಕ್ಕೂ ಉಪ್ಪಿನಂಗಡಿ ಕಂಬಳ ನಿಲ್ಲಬಾರದು. ಕಂಬಳ ನಡೆಸಲು ಸೂಕ್ತವಾದ ಜಾಗಕ್ಕೆ ಈಗಿಂದಲೇ ಹುಡುಕಾಟ ನಡೆಯಬೇಕು ಎಂದು ತಿಳಿಸಿದರಲ್ಲದೆ, ಈ ಬಾರಿ ಕೂಡಾ ಕಂಬಳಕ್ಕೆ ಸಿನಿಮಾ ತಾರೆಯರು, ನಾಟಕ ಕಲಾವಿದರನ್ನು ಕರೆಸಬೇಕು. ಇವರಲ್ಲಿ ತುಳುನಾಡಿನವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರಲ್ಲದೆ, ಮುಂಬರುವ ಮಾ.30 ಮತ್ತು 31ರಂದು ವಿಜಯ-ವಿಕ್ರಮ ಜೋಡುಕರೆ ಕಂಬಳ ನಡೆಯಲಿದ್ದು, ಕಂಬಳ ಆಯೋಜನೆಗೆ ಬೇಕಾದ ಕೆಲಸ ಕಾರ್ಯಗಳನ್ನು ನಾಳೆಯಿಂದಲೇ ಆರಂಭಿಸುವಂತೆ ತಿಳಿಸಿದರು.
ಈ ಸಂದರ್ಭ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ವಿಠಲ ಶೆಟ್ಟಿ ಕೊಲ್ಲೊಟ್ಟು, ದಾಸಪ್ಪ ಗೌಡ ಕೋಡಿಯಡ್ಕ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಗೌರವ ಸಲಹೆಗಾರರಾದ ನಿರಂಜನ್ ರೈ ಮಠಂತಬೆಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ- ಮಠಂತಬೆಟ್ಟು, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ- ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಕುಮಾರನಾಥ ಪಲ್ಲತ್ತಾರು, ರೈ ಎಸ್ಟೇಟ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಕಂಬಳ ಸಮಿತಿಯ ಸದಸ್ಯರಾದ ನಾರಾಯಣ ರೈ ಸುರಿಯ, , ಸತೀಶ್ ಶೆಟ್ಟಿ ಹೆನ್ನಾಳ, ವಿಕ್ರಂ ಶೆಟ್ಟಿ ಅಂತರ, ಜಗದೀಶ್ ಕುಮಾರ್ ಪರಕಜೆ, ಮಹಾಲಿಂಗ ಕಜೆಕ್ಕಾರು, ಪ್ರಭಾಕರ ಸಾಮಾನಿ, ಕಬೀರ್ ಕರ್ವೇಲು, ಜಯಾನಂದ ಪಿಲಿಗುಂಡ, ಧರ್ನಪ್ಪ ನಾಯ್ಕ, ಲೊಕೇಶ್ ಗೌಡ ಪೆಲತ್ತಡಿ ಮತ್ತಿತರರು ಉಪಸ್ಥಿತರಿದ್ದರು.

ಹಣ ಹಿಂದುರಿಗಿಸಿ ಮಾನವೀಯತೆ
ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಸೋನು ಡಾಬದ ಸಿಬ್ಬಂದಿ ವಿಷ್ಣು ರೈ ಅವರಿಗೆ ಹಣದ ಕಟ್ಟೊಂದು ಬಿದ್ದು ಸಿಕ್ಕಿದ್ದು, ಅದನ್ನು ಅವರು ಕಂಬಳ ಸಮಿತಿಯವರಿಗೆ ಹಸ್ತಾಂತರಿಸಿದರು. ಸಭೆಯಲ್ಲಿ ಹಣ ಕಳೆದುಕೊಂಡವರ ಬಗ್ಗೆ ವಿಚಾರಿಸಿದಾಗ ಅದು ಕಂಬಳ ಸಮಿತಿಯ ಪದಾಧಿಕಾರಿಯೋರ್ವರದ್ದಾಗಿತ್ತು. ಬಳಿಕ ಅವರು ಹಣದ ನಿಖರ ಮೊತ್ತವನ್ನು ಹೇಳಿ ಹಣವನ್ನು ಪಡೆದುಕೊಂಡರು. ಬಿದ್ದು ಸಿಕ್ಕಿದ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿಷ್ಣು ರೈ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here