ಬನ್ನೂರು ನವೋದಯ ಯುವಕ, ಯುವತಿ, ಮಹಿಳಾ ವೃಂದದ ಆಶ್ರಯದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಯುವಜನೋತ್ಸವ -2024

0

ಆ ಪಕ್ಷ, ಈ ಪಕ್ಷವಿಲ್ಲ ನಾನು ಎಲ್ಲರಿಗೂ ಶಾಸಕ – ಶಾಸಕ ಅಶೋಕ್ ಕುಮಾರ್ ರೈ
ಯುವಕ ಮಂಡಲಗಳು ಎಲ್ಲಿ ಕಾರ್ಯ ನಡೆಸುತ್ತಾರೋ ಅಲ್ಲಿ ಬೆಳಕಾಗುತ್ತದೆ‌ – ರೇ ವಿಜಯ ಹಾರ್ವೀನ್

ಪುತ್ತೂರು: ಒಮ್ಮೆ ಶಾಸಕರಾದ ಬಳಿಕ ಅವರು ಎಲ್ಲರಿಗೂ ಶಾಸಕರಾಗಿರುತ್ತಾರೆ. ಆ ಪಕ್ಷ ಈ ಪಕ್ಷ ಎಂಬ ಬೇಧಬಾವ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ನಾನು ಎಲ್ಲರಿಗೂ ಶಾಸಕ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬನ್ನೂರು ನವೋದಯ ಯುವಕ, ಯುವತಿ ವೃಂದ ಮತ್ತು ಮಹಿಳಾ ಮಂಡಲದ ಆಶ್ರಯದಲ್ಲಿ ಸಂಸ್ಥೆಯ ನಿವೇಶನದಲ್ಲಿ ನಡೆದ 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯನ ಪೂಜೆ ಮತ್ತು ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಸಕರಾದ ಬಳಿಕ ಜವಾಬ್ದಾರಿ ಹೆಚ್ಚಿದೆ. ಇಲ್ಲಿ ಭೇದಬಾವ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಯುವಕ ಮಂಡಲಗಳು ಒಳ್ಳೆಯ ಕೆಲಸ ಮಾಡಿಕೊಂಡು ಬರಬೇಕು. ಯಾಕೆಂದರೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5 ಸಾವಿರಕ್ಕಿಂತ ಮೇಲ್ಪಟ್ಟು ಯುವಕ ಮಂಡಲಗಳಿವೆ. ಯುವಜನತೆ ಸಮಾಜದ ಮುಖ್ಯವಾಹಿನಿಗೆ ಬರಲು ಇಂತಹ ಸಂಘಟನೆಯಿಂದ ಸಾಧ್ಯ. ಯುವಜನತೆಗೆ ಜವಾಬ್ದಾರಿ ಕೊಟ್ಟ ಕೂಡಲೇ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿಸುವ ಕೆಲಸ ಆಗುತ್ತದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು. ಅದು ಹಣದ ಮೂಲಕವೇ ಆಗಬೇಕಾಗಿಲ್ಲ. ಹೃದಯ ಶ್ರೀಮಂತಿಕೆ ಸೇವೆಯಿಂದಲೂ ಮಾಡಬಹುದು. ಧಾರ್ಮಿಕ ವಿಚಾರದ ಅರಿವು ನೀಡುವ ಮೂಲಕ ಜಾತಿ, ಧರ್ಮ ಸಂಘರ್ಷ ಬರುವುದಿಲ್ಲ ಎಂದ ಅವರು ಸರಕಾರದ ಯೋಜನೆಗಳು ತಲುಪದಿದ್ದಲ್ಲಿ ನೇರವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸುವಂತೆ ವಿನಂತಿಸಿದರು.


ಯುವಕ ಮಂಡಲಗಳು ಎಲ್ಲಿ ಕಾರ್ಯ ನಡೆಸುತ್ತಾರೋ ಅಲ್ಲಿ ಬೆಳಕಾಗುತ್ತದೆ:
ಸುದಾನ ವಸತಿಯುತ ಶಿಕ್ಷಣ ಸಂಸ್ಥೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರು ಮಾತನಾಡಿ, ಈ ಪರಿಸರದಲ್ಲಿ ಬಾಂದವ್ಯದ ಹೃದಯಗಳು ಒಟ್ಟಾಗಿವೆ. ಯುವಕ, ಯುವತಿ, ಮಹಿಳಾ ಸಂಘಟನೆ ಒಂದು ಕಡೆ ಸೇರಿ ತಮ್ಮ ಊರಿನ, ಮಕ್ಕಳ ಬಗ್ಗೆ ಆಲೋಚನೆ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಯುವಕ ಮಂಡಲಗಳು ಎಲ್ಲಿ ಕಾರ್ಯ ನಡೆಸುತ್ತವೆಯೋ ಅಲ್ಲಿ ಬೆಳಕಾಗುತ್ತದೆ ಎಂದರು.


ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ನವೋದಯ ಸಂಸ್ಥೆ:
ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರು ಮಾತನಾಡಿ, ಈ ಸಂಸ್ಥೆಯಲ್ಲಿ ಯಾರು ಅಧ್ಯಕ್ಷ, ಕಾರ್ಯದರ್ಶಿಯಾಗುವ ಬದಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಯಾಕೆಂದರೆ ನನ್ನನ್ನು ಈ ಮಟ್ಟಕ್ಕೆ ಏರಿಸಲು ಮತ್ತು ನಗರಸಭಾ ಸದಸ್ಯೆಯಾಗಲು ನವೋದಯ ಸಂಸ್ಥೆಯ ಒಗ್ಗೂಡುವಿಕೆ ಕಾರಣ ಎಂದರು.

ಸಮಾಜಕ್ಕೆ ನಾವೇನು ಕೊಟ್ಟಿದೇವೆಂಬುದು ಮುಖ್ಯ:
ಮಹಿಳಾ ಮಂಡಲದ ಗೌರವಾಧ್ಯಕ್ಷೆ ಗೌರಿ ಬನ್ನೂರು ಅವರು ಮಾತನಾಡಿ, ನವೋದಯ ಸಂಸ್ಥೆಯು ಹಲವು ಸಾಮಾಜಿಕ ಚಟುವಟಿಕೆಯ ಮೂಲಕ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಇವತ್ತು ಬೇರೆ ಬೇರೆ ಕ್ಷೇತ್ರದಲ್ಲಿರುವವರು ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ತನ್ನಿಂದಾದ ಸೇವೆ ಮಾಡುತ್ತಿದೆ ಎಂದರು.

ಸೇವೆಯೇ ಪ್ರದಾನ:
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಮೋಹಿನಿ ವಿಶ್ವನಾಥ ಗೌಡ ಅವರು ಮಾತನಾಡಿ, ನವೋದಯ ಯುವಕ, ಯುವತಿ ಮತ್ತು ಮಹಿಳಾ ಮಂಡಲಗಳು ಹಲವು ಕಾರ್ಯಕ್ರಮಗಳೊಂದಿಗೆ ಸೇವೆ ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇಲ್ಲಿ ಸೇವೆಯೇ ಪ್ರಧಾನವಾಗಿರುವುದು ಎಲ್ಲರಿಗೂ ಮಾದರಿ ಎಂದರು.

ಸಮುದಾಯ ಭವನ ಆಗಬೇಕೆಂಬ ಕನಸು:
ಯುವಕ ವೃಂದದ ಗೌರವಾಧ್ಯಕ್ಷ ಅಂಗಾರ ಪಿ ಅವರು ಮಾತನಾಡಿ, ಹಾರಾಡಿ ಶಾಲೆಯಲ್ಲಿ ಆರಂಭಗೊಂಡ ಸಂಸ್ಥೆ ಬಳಿಕ ಸ್ವಂತ ನಿವೇಶನವನ್ನು ಸರಕಾರದಿಂದ ಪಡೆಯುವಲ್ಲಿ ಯಶಸ್ವಿಯಾಯಿತು. ನಮ್ಮ ಈ ಸಂಸ್ಥೆಯಿಂದ ಅನೇಕ ಪ್ರತಿಭಾವಂತ ಯುವಕ, ಯುವತಿಯರು ಜಿಲ್ಲಾ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮುಂದೆ ಇಲ್ಲೊಂದು ಸಮುದಾಯಭವನ ನಿರ್ಮಾಣ ಮಾಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಊರವರು ಸಹಕಾರ ನೀಡಬೇಕೆಂದರು.

ಜನರನ್ನು ಬೆಸೆಯುವ ಯುವಜನೋತ್ಸವ:
ನವೋದಯ ಯುವಕ ವೃಂದ ಸಂಸ್ಥೆಯ ಸಂಚಾಲಕ ಚಂದ್ರಾಕ್ಷ ಬಿ ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 38 ವರ್ಷಗಳಿಂದ ಈ ಪರಿಸರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಜನರನ್ನು ಬೆಸೆಯುವ ಉದ್ದೇಶದಿಂದ ಯುವಜನೋತ್ಸವ ಮಾಡುತ್ತಾ ಬಂದಿದ್ದೇವೆ.ಇಲ್ಲಿ ಜಾತಿ ಬೇಧ, ಪಂತಗಳನ್ನು ಮೀರಿ ನಡೆಯುವ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಸನ್ಮಾನ:
ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 2024ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮದಲ್ಲಿ ವರ್ಷಂಪ್ರತಿಯಂತೆ ಸಂಸ್ಥೆಯ ಸದಸ್ಯರೊಬ್ಬರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿ ಸಂಸ್ಥೆಯ ಸದಸ್ಯ ಸುದ್ದಿ ಬಿಡುಗಡೆ ವರದಿಗಾರ ಲೋಕೇಶ್ ಬನ್ನೂರು ಅವರನ್ನು ಗೌರವಿಸಲಾಯಿತು. ಗಣರಾಜ್ಯೋತ್ಸವ ಸಂದರ್ಭ ಎನ್‌ಸಿಸಿ ಮೂಲಕ ದೆಹಲಿಯ ಗಣರಾಜ್ಯೋತ್ಸವದಲ್ಲಿ ಕರ್ತವ್ಯ ಪಥದಲ್ಲಿ ಭಾಗವಹಿಸಿದ್ದ ಬನ್ನೂರು ತೇಜಸ್ವಿನಿ ಅವರ ಪರವಾಗಿ ತಂದೆ ವಿವೇಕ್ ಮತ್ತು ತಾಯಿ ಮಮತಾ ಅವರನ್ನು ಶಾಸಕರು ಗೌರವಿಸಿದರು.

ಉದ್ಯಮಿ ರೋಶನ್ ರೈ ನವೋಯದ ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ರೋಹಿತ್ ರೈ, ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ನರೇಶ್ ಜೈನ್ ವಾರ್ಷಿಕ ವರದಿ ವಾಚಿಸಿದರು. ಉಮೇಶ್ ಶೆಟ್ಟಿ, ವಿದ್ಯಾ ರಾಜೇಶ್, ಜಯಶ್ರೀ ಶೆಟ್ಟಿ, ಆನಂದ, ಚಂದ್ರಶೇಖರ್, ಮಮತಾ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ನವೋದಯ ಯುವಕ ವೃಂದದ ಅಧ್ಯಕ್ಷ ರಾಧಾಕೃಷ್ಣ ರೈ ಸ್ವಾಗತಿಸಿದರು. ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು. ರಾಧಾಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಯುವಜನೋತ್ಸವವನ್ನು ಉದ್ಯಮಿ ರೋಶನ್ ರೈ ಉದ್ಘಾಟಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಿತು.

LEAVE A REPLY

Please enter your comment!
Please enter your name here