ಬಿ.ಜೆ.ಪಿ. ಸುಳ್ಯ ಮಂಡಲಾಧ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ ರೀತಿಗೆ ಪಕ್ಷ ನಾಯಕರ ತೀವ್ರ ಅಸಮಾಧಾನ

0

ಪ್ರಮಾದ ಸರಿಪಡಿಸುವವರೆಗೆ ಅಸಹಕಾರ ಚಳವಳಿಗೆ ನಿರ್ಧಾರ: ಬಿಜೆಪಿ ಕಚೇರಿಗೆ ಬೀಗ

ಸುಳ್ಯ: ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆಯವರನ್ನು ನೇಮಿಸಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶ ಹೊರಡಿಸಿದ್ದಾರೆ. ಮಂಡಲಾಧ್ಯಕ್ಷತೆಗೆ ಸುಳ್ಯದಿಂದ ಶಿಫಾರಸು ಮಾಡಲ್ಪಟ್ಟಿದ್ದ ನ್ಯಾಯವಾದಿ ವಿನಯ ಮುಳುಗಾಡುರವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.


ವೆಂಕಟ್ ವಳಲಂಬೆಯವರನ್ನು ಸುಳ್ಯ ಮಂಡಲದ ಅಧ್ಯಕ್ಷರನ್ನಾಗಿ ನೇಮಿಸಿದ ಆದೇಶ ಹೊರ ಬೀಳುತ್ತಿದ್ದಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ. ನೂತನ ಆಯ್ಕೆಯ ಬಗ್ಗೆ ಪ್ರತಿಕ್ರಿಯೆಯಾಗಿ ಪತ್ರಿಕೆಯವರು ಸಂಪರ್ಕಿಸಲು ಪ್ರಯತ್ನಿಸಿದಾಗ ಮಂಡಲಾಧ್ಯಕ್ಷರೂ ಸೇರಿದಂತೆ ಹಲವು ಮುಖಂಡರು ಪತ್ರಿಕೆಯವರ ಕರೆ ಸ್ವೀಕರಿಸದೆ ಜಾರಿಕೊಂಡರು.


ಫೆ.3ರಂದು ಸಂಜೆ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್ ಮೊದಲಾದವರು ಸೇರಿ ಚರ್ಚಿಸಿದರಲ್ಲದೆ, ಫೆ.4ರಂದು ಅಪರಾಹ್ನ 3 ಗಂಟೆಗೆ ಸಭೆ ನಡೆಸಲು ಸಮಯ ನಿಗದಿ ಪಡಿಸಿ ಕಾರ್ಯಕರ್ತರಿಗೆ ಸಂದೇಶ ರವಾನಿಸಲಾಯಿತು. ಅದರಂತೆ ಫೆ.4ರಂದು ಅಪರಾಹ್ನ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು.


ಜಿಲ್ಲಾ ಸಮಿತಿಯವರ ಪ್ರಮಾದ ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆ ಸ್ಥಗಿತಗೊಳಿಸಿ ಅಸಹಕಾರ ಚಳವಳಿಗೆ ನಿರ್ಧಾರ
ಫೆ.4ರಂದು ಅಪರಾಹ್ನ 3 ಗಂಟೆಯಿಂದ 5 ಗಂಟೆ ವರೆಗೆ ಪಕ್ಷದ ಬಹುತೇಕ ನಾಯಕರು ಗ್ರಾಮ ಗ್ರಾಮಗಳ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬಹುತೇಕ ಕಾರ್ಯಕರ್ತರು, ಸುಳ್ಯ ಕ್ಷೇತ್ರದವರ ಮೇಲೆ ಜಿಲ್ಲೆಯವರು ತಮ್ಮ ನಿರ್ಧಾರಗಳನ್ನು ಹೇರುವ ಕೆಲಸ ಹಿಂದೆಯೂ ಮಾಡುತ್ತಿದ್ದರು. ಇತ್ತೀಚೆಗಿನ ಒಂದೆರಡು ವರ್ಷಗಳಿಂದ ಅದು ಕಡಿಮೆಯಾಗಿತ್ತು. ಈಗ ಮತ್ತೆ ಶುರು ಮಾಡಿದ್ದಾರೆ. ಇದು ಸರಿಯಲ್ಲ. ಜಿಲ್ಲೆಯವರು ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಅದುವರೆಗೆ ಪಕ್ಷದ ಚಟುವಟಿಕೆಗಳನ್ನು ಸ್ಥಗಿತಗೊಳಿಸೋಣ ಎಂದು ಅಭಿಪ್ರಾಯಪಟ್ಟರೆನ್ನಲಾಗಿದೆ. ಹರೀಶ್ ಕಂಜಿಪಿಲಿ ಮತ್ತು ರಾಕೇಶ್ ರೈಯವರು ತಮ್ಮ ಭಾಷಣದ ವೇಳೆ ಗದ್ಗದಿತರಾದರೆಂದು ತಿಳಿದು ಬಂದಿದೆ.
ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ನಾಯಕರೂ ಕೂಡಾ ಕಾರ್ಯಕರ್ತರ ಅಭಿಪ್ರಾಯವನ್ನು ಅನುಮೋದಿಸಿದ ಹಿನ್ನಲೆಯಲ್ಲಿ ಸಭೆಯಲ್ಲಿ ಆ ರೀತಿಯ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಬಳಿಕ ಪಕ್ಷದ ಕಚೇರಿಗೆ ಬೀಗ ಜಡಿಯಲಾಯಿತು. ಗೊಂದಲ ಪರಿಹಾರಗೊಂಡ ಬಳಿಕವೇ ಬೀಗ ತೆರೆಯುವುದಾಗಿ ಕಾರ್ಯಕರ್ತರು ಹೇಳಿದರು.

LEAVE A REPLY

Please enter your comment!
Please enter your name here