ಪುತ್ತಿಲ ಪರಿವಾರ ಬರ್ಖಾಸ್ತು ಗೊಳಿಸುವುದೇ….
ಬಿಜೆಪಿಗೆ ಟಾಂಗ್ ನೀಡುವುದೇ…?
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಏಳು ಮಂಡಲಗಳ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಿರುವ ನಾಯಕರು ಪುತ್ತೂರಿನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡದೆ ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ. ಈ ಮೂಲಕ ಪುತ್ತಿಲ ಪರಿವಾರ ಬರ್ಖಾಸ್ತುಗೊಳಿಸಿ ಬಿಜೆಪಿಗೆ ಬರುವುದಾದರೆ ಸ್ವಾಗತ ಎಂದು ಸಂದೇಶ ರವಾನಿಸಿರುವ ಬಿಜೆಪಿ ನಾಯಕರು ಅಂತಿಮ ತೀರ್ಮಾನದ ಚೆಂಡನ್ನು ಪುತ್ತಿಲ ಪರಿವಾರದ ಅಂಗಳಕ್ಕೆ ರವಾನಿಸಿದ್ದಾರೆ. ಜತೆಗೆ ಜಿಲ್ಲಾ ಬಿಜೆಪಿಯ ಒಂದು ಉಪಾಧ್ಯಕ್ಷ ಸ್ಥಾನವನ್ನು ಪೆಂಡಿಂಗ್ ಇಟ್ಟು ಬಿಜೆಪಿ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ಟಾಂಗ್ ನೀಡಲು ಸಿದ್ಧತೆ:
ಅರುಣ್ ಕುಮಾರ್ ಪುತ್ತಿಲ ಅವರು ಷರತ್ತು ರಹಿತರಾಗಿ ಬಿಜೆಪಿಗೆ ಬರಬೇಕು, ಪುತ್ತಿಲ ಪರಿವಾರವನ್ನು ಬರ್ಖಾಸ್ತುಗೊಳಿಸಬೇಕು ಮತ್ತು ಯಾರಿಗೆಲ್ಲಾ ಹಿರಿಯರಿಗೆ ಅರುಣ್ ಪುತ್ತಿಲ ನೋವುಂಟು ಮಾಡಿದ್ದಾರ ಅವರ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿಕೆ ನೀಡುವ ಮೂಲಕ ಸೃಷ್ಠಿಸಿರುವ ಸಂಚಲನಕ್ಕೆ ಅದೇ ಮಾದರಿಯ ಉತ್ತರ ನೀಡಲು ಪುತ್ತಿಲ ಪರಿವಾರ ಸಿದ್ಧತೆ ನಡೆಸಿದೆ. ಅರುಣ್ ಪುತ್ತಿಲ ಅವರ ಪರ ಪುತ್ತಿಲ ಪರಿವಾರದ ಮಾರ್ಗದರ್ಶಕ ಭಾಸ್ಕರ ಆಚಾರ್ ಹಿಂದಾರು ಅವರು ಮಠಂದೂರುಗೆ ತಿರುಗೇಟು ನೀಡಿರುವುದು ಪುತ್ತಿಲ ಪರಿವಾರಕ್ಕೆ ಆನೆಬಲ ನೀಡಿತ್ತಾದರೂ ಬಳಿಕದ ಬೆಳವಣಿಗೆಯಲ್ಲಿ ಸಂಜೀವ ಮಠಂದೂರು ಮತ್ತು ಭಾಸ್ಕರ ಆಚಾರ್ ಅವರು ಪರಸ್ಪರ ಮೃದು ಧೋರಣೆ ಅನುಸರಿಸಿರುವುದು ಒಂದೆಡೆ ರಾಜೀಸೂತ್ರಕ್ಕೆ ಸೂತ್ರ ಆಗಬಹುದು ಎಂದು ಲೆಕ್ಕಾಚಾರ ನಡೆದಿದೆ. ಈ ಮಧ್ಯೆ, ಬಿಜೆಪಿಗೆ ಷರತ್ತು ರಹಿತವಾಗಿ ಸೇರಬೇಕೇ, ಬೇಡವೇ ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಫೆ.5ರಂದು ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ಪುತ್ತಿಲ ಪರಿವಾರದ ನಿರ್ಣಾಯಕ ಸಭೆ ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಫೆ.4ರಂದು ತಡರಾತ್ರಿವರೆಗೂ ಪುತ್ತಿಲ ಪರಿವಾರದ ತುರ್ತು ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಇದರಲ್ಲಿ ಶರಣಾಗಿ ಅವರಲ್ಲಿ ಹೋಗುವುದು ಬೇಡ, ದೊಣ್ಣೆ ನಾಯಕರಿಗೆ ಬಗ್ಗುವುದು ಬೇಡ. ಆದರೆ ನರೇಂದ್ರ ಮೋದಿ ಮತ್ತು ಸಂಘ ಪರಿವಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಷರತ್ತು ಅನ್ವಯವೇ?:
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಹಿಂದುತ್ವದ ಆಧಾರದಲ್ಲಿ ಸ್ಪಽಸಿ ಸೋತರೂ ಗೆದ್ದಂತಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಆರ್.ಎಸ್.ಎಸ್. ಪ್ರಮುಖರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಪುತ್ತೂರು ಬಿಜೆಪಿ ನಾಯಕರು ಅರುಣ್ ಪುತ್ತಿಲ ಆಗಮನಕ್ಕೆ ಆಕ್ಷೇಪ ಸೂಚಿಸಿದ್ದಾರೆ. ಅರುಣ್ ಪುತ್ತಿಲ ಬಿಜೆಪಿಗೆ ಬರುವುದಾದರೆ ಷರತ್ತು ಪಾಲಿಸಬೇಕು ಎಂದು ಕಂಡೀಷನ್ ವಿಧಿಸಿದ್ದಾರೆ. ಬೇಷರತ್ ಆಗಿ ಬಿಜೆಪಿಗೆ ಬರಬೇಕು, ಪುತ್ತಿಲ ಪರಿವಾರ ಬರ್ಖಾಸ್ತುಗೊಳಿಸಬೇಕು ಮತ್ತು ಅರುಣ್ ಕುಮಾರ್ ಪುತ್ತಿಲ ಅವರು ಯಾರಿಗೆಲ್ಲಾ ನೋವು ಉಂಟು ಮಾಡಿದ್ದಾರೆಯೋ ಅವರ ಕ್ಷಮೆ ಕೇಳಬೇಕು ಎಂಬುದು ಬಿಜೆಪಿ ಪ್ರಮುಖರ ಷರತ್ತಾಗಿದೆ. ಇದನ್ನು ಒಪ್ಪಿಕೊಳ್ಳಲು ಪುತ್ತಿಲ ಪರಿವಾರ ಸಿದ್ಧವಾಗಿಲ್ಲ. ಜಿಲ್ಲಾ ಬಿಜೆಪಿಯ ಅಧ್ಯಕ್ಷ ಸ್ಥಾನ ಕೇಳಿದ್ದರೂ ಅರುಣ್ ಪುತ್ತಿಲ ಅವರಿಗೆ ನೀಡಿಲ್ಲ. ಈಗಾಗಲೇ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಜಿಲ್ಲಾ ಉಪಾಧ್ಯಕ್ಷ ಸ್ಥಾನ ಕೊಡುವ ಪ್ರಸ್ತಾಪ ಇದ್ದರೂ ಅದು ಡಮ್ಮಿ ಎಂಬಂತಿರುವ ಕಾರಣ ಆ ಸ್ಥಾನ ಬೇಡವೇ ಬೇಡ. ಕೊಡುವುದಾದರೆ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡಲಿ ಎಂಬುದು ಪುತ್ತಿಲ ಪರಿವಾರದ ವಾದವಾಗಿದೆ. ಪುತ್ತಿಲ ಅವರು ಯಾರನ್ನೂ ನಿಂದಿಸಿ ಮಾತನಾಡಿಲ್ಲ. ನಿಂದಿಸಿದವರನ್ನೂ ಗೌರವಿಸಿ ಮಾತನಾಡಿದ್ದಾರೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂಬುದು ಪುತ್ತಿಲ ಬಣದ ನಿರ್ಣಯವಾಗಿದೆ. ನಿಜಾರ್ಥದಲ್ಲಿ ಅರುಣ್ ಪುತ್ತಿಲ ಅವರನ್ನು ಸತತವಾಗಿ ನಿಂದಿಸಲಾಗಿದೆಯೇ ಹೊರತು ಅವರು ಯಾರನ್ನೂ ಅಪಮಾನಿಸಿಲ್ಲ ಎಂದು ಕಾರ್ಯಕರ್ತರ ತುರ್ತು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಬಹುಮತ ವ್ಯಕ್ತ ಆಗಿದೆಯಾದರೂ ತಗ್ಗಿ ಬಗ್ಗಿ ಹೋಗದೇ ಇದ್ದರೆ ಬಿಜೆಪಿ ಬಾಗಿಲು ಮುಚ್ಚಿದಂತಾಗುತ್ತದೆ. ನಮ್ಮನ್ನು ಹೊರಗಿಡಬೇಕು ಎಂದು ಯೋಜನೆ ರೂಪಿಸಿರುವ ಪುತ್ತೂರಿನ ಆಯ್ದ ಬಿಜೆಪಿ ನಾಯಕರು ಗೆದ್ದಂತಾಗುತ್ತದೆ. ಹಾಗಾಗಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಎಂಬುದು ಪುತ್ತಿಲ ಪರಿವಾರದ ಹಿರಿಯರ ಸಲಹೆಯಾಗಿದೆ. ಎಲ್ಲರ ಸಲಹೆ ಪಡೆದು ಅಂತಿಮ ತೀರ್ಮಾನವನ್ನು ನಿರ್ಣಾಯಕ ಸಭೆಯಲ್ಲಿ ಘೋಷಿಸಲು ಪುತ್ತಿಲ ಪರಿವಾರದ ಕೋರ್ ಕಮಿಟಿ ನಿರ್ಣಯಿಸಿದೆ. ಇದರೊಂದಿಗೆ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಹೆಸರು ಘೋಷಣೆ ಮಾಡದ ನಾಯಕರು ತಮ್ಮ ಷರತ್ತುಗಳಿಗೆ ಅರುಣ್ ಪುತ್ತಿಲ ಬದ್ಧರಾದರೆ ಪಕ್ಷಕ್ಕೆ ಬಂದ ಕೆಲವು ದಿನಗಳ ಬಳಿಕ ಪುತ್ತಿಲರಿಗೆ ಅಧ್ಯಕ್ಷ ಸ್ಥಾನ ನೀಡಲು ಒಪ್ಪಿಗೆ ಸೂಚಿಸುವ ಕುರಿತು ನಿರ್ಣಯಕ್ಕೆ ಬಂದಿದ್ದಾರೆ. ಪುತ್ತಿಲ ಪರಿವಾರದ ನಿರ್ಣಾಯಕ ಸಭೆಯಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾದದ್ದೇ ಆದರೆ ಅರುಣ್ ಕುಮಾರ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು. ತಮ್ಮದೇ ಸರಿ ಎಂದು ಹಠ ಮುಂದುವರಿಸಿದರೆ ಆದದ್ದು ಆಗಲಿ ರಿಸ್ಕ್ ತೆಗೆದುಕೊಂಡು ಈ ಹಿಂದಿನಂತೆ ಅರುಣ್ ಪುತ್ತಿಲರನ್ನು ಪಕ್ಷದಿಂದ ಹೊರಗಿಡೋಣ ಎಂಬುದು ಬಿಜೆಪಿಯ ನಿರ್ಣಯವಾಗಿದೆ. ಇದಕ್ಕೆ ಆರ್.ಎಸ್.ಎಸ್.ಮುಖಂಡ ಡಾ. ಪ್ರಭಾಕರ ಭಟ್ ಅವರ ಹಸಿರು ನಿಶಾನೆಯೂ ದೊರೆತಿದೆ. ಕ್ಲೈಮಾಕ್ಸ್ ಹಂತದಲ್ಲಿರುವ ಬಿಜೆಪಿ ಮಂಡಲ ನೂತನ ಅಧ್ಯಕ್ಷರ ಹೆಸರು ಘೋಷಣೆ ಮತ್ತು ಪುತ್ತಿಲ ಪರಿವಾರದ ಅಂತಿಮ ತೀರ್ಮಾನ ಕುತೂಹಲ ಕೆರಳಿಸಿದೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಸ್ಥಾನಕ್ಕೆ ನಗರಸಭಾ ಸದಸ್ಯೆ ಗೌರಿ ಬನ್ನೂರು ಅವರ ಹೆಸರು ಘೋಷಣೆ ಆಗುವುದು ಬಹುತೇಕ ನಿಶ್ಚಿತವಾಗಿತ್ತಾದರೂ ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲ ಒಟ್ಟು ಸೇರಿಸಿ ಬಿಜೆಪಿ ಮಂಡಲ ಒಂದೇ ಮಾಡಬೇಕು, ಅದಕ್ಕೆ ಅರುಣ್ ಪುತ್ತಿಲ ಅವರನ್ನು ಅಧ್ಯಕ್ಷರನ್ನಾಗಿಸಬೇಕು ಎಂಬುದು ಪುತ್ತಿಲ ಪರಿವಾರದ ಈ ಹಿಂದಿನ ಆಗ್ರಹ ಇದೀಗ ಮತ್ತೆ ಮುನ್ನಲೆಗೆ ಬಂದಿರುವ ಹಿನ್ನೆಲೆಯಲ್ಲಿ ನಗರ ಮಂಡಲ ಬಿಜೆಪಿಯ ಅಧ್ಯಕ್ಷರ ಹೆಸರು ಘೋಷಣೆಯೂ ಬಾಕಿ ಉಳಿದಿದೆ. ಒಟ್ಟು ರಾಜಕೀಯ ಬೆಳವಣಿಗೆಗೆ ಇಂದು ಸಂಜೆ ಅಂತಿಮ ತೆರೆ ಬೀಳುವ ನಿರೀಕ್ಷೆ ಇದೆ.