ನೆಲ್ಯಾಡಿ: ಜಿಲ್ಲಾಧಿಕಾರಿಯವರಿಂದ ರಾ.ಹೆ.ಕಾಮಗಾರಿ ಪರಿಶೀಲನೆ-ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆಗೆ ಮತ್ತೆ ಮನವಿ

0

ಎತ್ತರಿಸಿದ ರಸ್ತೆಗಾಗಿ ನಿರ್ಮಾಣ ಮಾಡಿರುವ ಗೋಡೆ ತೆರವಿಗೆ ಆಗ್ರಹ

  • ನೆಲ್ಯಾಡಿ: ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗಾಗಿ ಫೆ.7ರಂದು ಮಧ್ಯಾಹ್ನ ನೆಲ್ಯಾಡಿಗೆ ಆಗಮಿಸಿದರು. ಈ ವೇಳೆ ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸಿದ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯವರು ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆಗಾಗಿ ಮತ್ತೆ ಮನವಿ ಮಾಡಿ ನೆಲ್ಯಾಡಿ ಪೇಟೆಯ ಮಧ್ಯೆ ಈಗಾಗಲೇ ಎರಡು ಬದಿ ನಿರ್ಮಾಣಗೊಂಡಿರುವ ಗೋಡೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್-ಅಡ್ಡಹೊಳೆ ಮಧ್ಯೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಎರಡು ಬದಿ ಗೋಡೆ ನಿರ್ಮಿಸಿ ಎತ್ತರಿಸಿದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಪೇಟೆಯು ಇಬ್ಬಾಗವಾಗುತ್ತಿದ್ದು ಪೇಟೆಗೆ ಬರುವ ಗ್ರಾಹಕರಿಂದ ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸಲು ತೊಂದರೆಯಾಗಲಿದೆ. ಸರ್ವಿಸ್ ರಸ್ತೆ ಹಾಗೂ ಎರಡು ಕಡೆ ಅಂಡರ್‌ಪಾಸ್ ನೀಡಲಾಗುತ್ತಿದೆಯಾದರೂ ರಿಕ್ಷಾ, ಜೀಪು ಸೇರಿದಂತೆ ಯಾವುದೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ನೆಲ್ಯಾಡಿ ಪೇಟೆಯ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ನಿರ್ಮಾಣ ಆಗಬೇಕೆಂದು ಹೋರಾಟ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ರಾಜ್ಯ, ಕೇಂದ್ರ ಸರಕಾರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸರಕಾರಕ್ಕೆ ವರದಿ ಮಾಡುವಂತೆ ಹೋರಾಟ ಸಮಿತಿಯವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.

  • ಗೋಡೆ ತೆರವಿಗೂ ಮನವಿ:
  • ನೆಲ್ಯಾಡಿ ಪೇಟೆಯುದ್ದಕ್ಕೂ ಎರಡು ಬದಿ ಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪೇಟೆಯ ಒಂದು ಬದಿಯ ಅಂಗಡಿಯಿಂದ ಇನ್ನೊಂದು ಬದಿಯ ಅಂಗಡಿಗೆ ತೆರಳಲು ಸಾರ್ವಜನಿಕರಿಗೆ, ಪೇಟೆಗೆ ಬರುವ ಗ್ರಾಹಕರಿಗೆ ತೊಂದರೆಯಾಗಿದೆ. ಆದ್ದರಿಂದ ಒಂದೆರಡು ಕಡೆ ತಕ್ಷಣ ಗೋಡೆ ತೆರವು ಮಾಡಿಕೊಡುವಂತೆಯೂ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಈ ವಿಚಾರವನ್ನು ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಗಮನಕ್ಕೂ ತಂದರು. ಬೇಡಿಕೆಯನ್ನು ಪರಿಶೀಲನೆ ನಡೆಸಿ ಪೂರಕವಾಗಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.
  • ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್ ಕೆ.ಎಸ್.ದುರ್ಗಾಶ್ರೀ, ನಾಝೀಂ ಸಾಹೇಬ್ ನೆಲ್ಯಾಡಿ, ನೆಲ್ಯಾಡಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಉದ್ಯಮಿ ಕೆ.ಪಿ.ತೋಮಸ್, ರವಿಕುಮಾರ್ ಸುರಕ್ಷಾ, ಸೇರಿದಂತೆ ನೆಲ್ಯಾಡಿಯ ವರ್ತಕರು, ಗ್ರಾ.ಪಂ.ಸದಸ್ಯರ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

ಪೆರಿಯಶಾಂತಿಯಲ್ಲಿ ಆನೆಕಾರಿಡಾರ್‌ಗೆ ಮನವಿ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯು ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಅರಣ್ಯದ ಮಧ್ಯೆ ಹಾದು ಹೋಗುತ್ತಿದೆ. ಇಲ್ಲಿ ಆನೆಗಳ ಸಂಚಾರವಿರುವುದರಿಂದ ಪೆರಿಯಶಾಂತಿಯಲ್ಲಿ ರಸ್ತೆಯ ಒಂದು ಭಾಗದ ಅರಣ್ಯದಿಂದ ಇನ್ನೊಂದು ಭಾಗದ ಅರಣ್ಯಕ್ಕೆ ಆನೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪೆರಿಯಶಾಂತಿಯಲ್ಲಿ ಆನೆಕಾರಿಡಾರ್ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೆರಿಯಶಾಂತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಲಾವತ್ತಡ್ಕ ಸಮೀಪ ಆನೆ ಕಾರಿಡಾರ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆಯಾದರೂ ಇದಕ್ಕೆ ಆ ಭಾಗದ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಆದ್ದರಿಂದ ಪೆರಿಯಶಾಂತಿಯಲ್ಲಿ ಆನೆಕಾರಿಡಾರ್ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯಿಂದ ಮನವಿ ಮಾಡಲಾಯಿತು. ಎಸಿಎಫ್‌ಗಳಾದ ಪ್ರವೀಣ್ ಶೆಟ್ಟಿ, ಸುಬ್ರಹ್ಮಣ್ಯ ನಾಯ್ಕ, ಆರ್‌ಎಫ್‌ಗಳಾದ ಗಿರೀಶ್, ಜಯಪ್ರಕಾಶ್, ಫಾರೆಸ್ಟ್‌ಗಳಾದ ಸುನೀಲ್, ದೇವಿಪ್ರಸಾದ್, ಪ್ರಶಾಂತ್,ಸಂದೀಪ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ಬಳಿಕ ಜಿಲ್ಲಾಧಿಕಾರಿಯವರು ಉದನೆ, ಅಡ್ಡಹೊಳೆ, ಗುಂಡ್ಯದ ತನಕ ತೆರಳಿ ಹೆದ್ದಾರಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ, ಕಡಬ ತಹಶೀಲ್ದಾರ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು, ಗುತ್ತಿಗೆದಾರ ಸಂಸ್ಥೆಯ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಜೊತೆಗಿದ್ದರು.

LEAVE A REPLY

Please enter your comment!
Please enter your name here