ಈಶ್ವರಮಂಗಲದ ಹಾಸ್ಟೆಲ್ ಮಕ್ಕಳಿಗೆ ಅಡುಗೆ ಸಿಬ್ಬಂದಿಯಿಂದ ದೌರ್ಜನ್ಯ ಆರೋಪ-ಸೂಕ್ತ ಕ್ರಮಕ್ಕೆ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ

0

ಪುತ್ತೂರು: ಈಶ್ವರಮಂಗಲದಲ್ಲಿರುವ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನ ಅಡುಗೆ ಸಿಬ್ಬಂದಿಯೊಬ್ಬರು ದೌರ್ಜನ್ಯ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎನ್ನುವ ಆಗ್ರಹ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.


ಸಭೆ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆಯಲ್ಲಿ ಫೆ.8ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಈಶ್ವರಮಂಗಲದ ಖಾಸಗಿ ಶಾಲೆಯೊಂದರಿಂದ ಈ ಬಗ್ಗೆ ಬಂದ ದೂರು ಅರ್ಜಿ ಸಭೆಯಲ್ಲಿ ಪ್ರಸ್ತಾಪಗೊಂಡಾಗ ಸದಸ್ಯ ಚಂದ್ರಹಾಸ ಮಾತನಾಡಿ, ಪರಿಶಿಷ್ಟ ಪಂಗಡದ ಮಕ್ಕಳ ಹಾಸ್ಟೆಲ್‌ನಲ್ಲಿರುವ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುವುದಲ್ಲದೇ ದುರಹಂಕಾರದಿಂದ ಮೆರೆಯುತ್ತಿದ್ದಾರೆ, ಹಾಸ್ಟೆಲ್‌ನ ವಾಷಿಂಗ್ ಮೆಷಿನ್‌ನ್ನು ದುರುಪಯೋಗಪಡಿಸಿಕೊಂಡಿದ್ದು ಪರಿಶಿಷ್ಟ ಪಂಗಡದ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ, ಅವರ ಮೇಲೆ ಪೊಲೀಸ್ ದೂರು ಕೊಡಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು. ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸದಸ್ಯ ಇಬ್ರಾಹಿಂ ಕೆ ಮಾತನಾಡಿ, ಈ ಬಗ್ಗೆ ಈಗಾಗಲೇ ಸಂಬಂಧಟಪ್ಟವರಿಗೆ ದೂರು ಹೋಗಿದ್ದು ತನಿಖೆ ಆಗುತ್ತಿದೆ ಎಂದು ಹೇಳಿದರು. ಸದಸ್ಯ ರಮೇಶ್ ರೈ ಸಾಂತ್ಯ ಮಾತನಾಡಿ, ಮಕ್ಕಳಿಗೆ ಅನ್ಯಾಯ ಆಗಬಾರದು, ಪಾರದರ್ಶಕ ತನಿಖೆ ಆಗಬೇಕು, ನಮ್ಮ ಗ್ರಾ.ಪಂಗೆ ತನಿಖೆ ಮಾಡಲು ಆಗುವುದಿಲ್ಲ, ಹಾಗಾಗಿ ಸಂಬಂಧಪಟ್ಟವರು ತನಿಖೆ ನಡೆಸಲಿ ಎಂದು ಹೇಳಿದರು.

ಉಪಾಧ್ಯಕ್ಷ ರಾಮ ಮೇನಾಲ ಮಾತನಾಡಿ, ಮುಚ್ಚುವ ಭೀತಿಯಲ್ಲಿದ್ದ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ಹಾಸ್ಟೆಲ್‌ನಲ್ಲಿ ಘಟ್ಟದ ಮಕ್ಕಳು ಇರುವ ಕಾರಣ ತೆರೆದುಕೊಂಡಿದೆ, ಅಲ್ಲಿ ಏನಾದರೂ ಆಗಿ ಅದು ಮುಚ್ಚಿದರೆ ನಮಗೇ ನಷ್ಟ, ಅಡುಗೆ ಸಿಬ್ಬಂದಿಯ ವರ್ತನೆ ಬಗ್ಗೆ ದೂರು ಬಂದಿದ್ದು ನಮಗೂ ಬೇಸರ ಇದೆ, ಸೂಕ್ತ ತನಿಖೆ ಆಗಬೇಕು ಮತ್ತು ಆ ಅಡುಗೆ ಸಿಬ್ಬಂದಿ ಇನ್ನು ಅಲ್ಲಿರುವುದು ಸೂಕ್ತವಲ್ಲ ಎಂದು ಹೇಳಿದರು.

ಸದಸ್ಯ ಶ್ರೀರಾಂ ಪಕ್ಕಳ ಮಾತನಾಡಿ, ಆ ಹಾಸ್ಟೆಲ್‌ನಲ್ಲಿ ವಾರ್ಡನ್ ಇಲ್ಲ, ಸೆಕ್ಯೂರಿಟಿಯೂ ಇಲ್ಲ, ವ್ಯವಸ್ಥೆಗಳೆಲ್ಲ ಸರಿಯಿದ್ದರೆ ಇಂತಹ ಸಮಸ್ಯೆ ಬರುವುದಿಲ್ಲ ಎಂದರು. ಅಧ್ಯಕ್ಷೆ ಫೌಝಿಯಾ ಮಾತನಾಡಿ, ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಯ ಮತ್ತು ಶಾಸಕರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಪಿಡಿಓ ವಸೀಂ ಗಂಧದ ಮಾತನಾಡಿ, ನಮಗೆ ಬಂದಿರುವ ದೂರನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಅಡುಗೆ ಸಿಬ್ಬಂದಿಯನ್ನು ವರ್ಗಾವಣೆಗೊಳಿಸುವುದು ಸೂಕ್ತ ಎಂದು ಸದಸ್ಯರು ಹೇಳಿದರು. ಬಳಿಕ ಎಲ್ಲರ ಅಭಿಪ್ರಾಯ ಸಂಗ್ರಹಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ, ಜಿ.ಪಂ ಸಿಇಓ ಅವರಿಗೆ, ಪೊಲೀಸ್ ಇಲಾಖೆಗೆ ಮತ್ತು ಶಾಸಕರಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು.

ಪಂಪ್ ಆಪರೇಟರ್‌ಗಳ ಸಂಬಳ ಪೆಂಡಿಂಗ್ ಇಡಬೇಡಿ:
ಗ್ರಾ.ಪಂ ವ್ಯಾಪ್ತಿಯ ಪಂಪ್ ಆಪರೇಟರ್‌ಗಳ ಸಂಬಳ ಪೆಂಡಿಂಗ್ ಇಡಬಾರದು ಎಂದು ಸದಸ್ಯ ಸಂಶುದ್ದೀನ್ ಪಿ.ಕೆ ಹೇಳಿದರು. ಬಿಲ್ ಸರಿಯಾಗಿ ಕಲೆಕ್ಷನ್ ಆಗದ ಕಾರಣ ಕೆಲವೊಮ್ಮೆ ಸಂಬಳ ಪೆಂಡಿಗ್ ಆಗಿರಬಹುದು ಆದರೆ ನೀರು ಬಿಡುವ ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಪಿಡಿಓ ವಸೀಂ ಗಂಧದ ಹೇಳಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹಾಗೂ ನೀರಿನ ಬಿಲ್ ಕಲೆಕ್ಷನ್ ವಿಚಾರದಲ್ಲೂ ಚರ್ಚೆ ನಡೆಯಿತು.

ಗ್ರಾ.ಪಂ ಬಗ್ಗೆ ಜಾಲತಾಣದಲ್ಲಿ ಹಾಕುವುದು ಬೇಡ:
ನಮ್ಮ ಗ್ರಾಮ ಪಂಚಾಯತ್ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ಹೋಗುವ ರೀತಿಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಯಾರೂ ಸಂದೇಶ ಕಳುಹಿಸಬಾರದು ಎಂದು ಉಪಾಧ್ಯಕ್ಷ ರಾಮ ಮೇನಾಲ ಹೇಳಿದರು. ಒಳ್ಳೆಯ ವಿಷಯಗಳನ್ನು ಪ್ರಚಾರ ಮಾಡಿ ಎಂದು ಅಧ್ಯಕ್ಷೆ ಫೌಝಿಯಾ ಹೇಳಿದರು.

ಕಸಕ್ಕೆ ಬೆಂಕಿ ಹಾಕಬೇಡಿ:
ಅಂಗಡಿಯವರು ತ್ಯಾಜ್ಯವನ್ನು ಪಂಚಾಯತ್‌ನಿಂದ ಬರುವ ವಿಲೇವಾರಿ ಮಾಡುವವರಿಗೆ ನೀಡಬೇಕು. ಕೆಲವು ಅಂಗಡಿಯವರು ಕಸವನ್ನು ತಮ್ಮ ಅಂಗಡಿಯ ಮುಂದೆ ಬೆಂಕಿ ಹಾಕಿ ಹೊತ್ತಿಸುತ್ತಾರೆ, ಇದು ಸರಿಯಲ್ಲ ಎಂದು ಸದಸ್ಯ ಚಂದ್ರಹಾಸ ಹೇಳಿದರು.

ಇಲಾಖಾ ಮಾಹಿತಿ:
ಮನೆ, ಕಟ್ಟಡ ತೆರಿಗೆ ಪರಿಷ್ಕರಣೆ ಕುರಿತು ಅಳತೆ ಕಾರ್ಯದ ಏಜೆನ್ಸಿ ಭಾಸ್ಕರ್ ಅವರು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಪರವಾಗಿ ಡಾ.ನಿಖಿಲ್ ಹಾಗೂ ಸಂಧ್ಯಾ ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯರಾದ ಪ್ರದೀಪ್ ಕುಮಾರ್ ರೈ, ಕುಮಾರನಾಥ, ವೆಂಕಪ್ಪ ನಾಯ್ಕ, ವತ್ಸಲಾ, ರಿಯಾಝ್, ಪ್ರಫುಲ್ಲ ಆರ್ ರೈ, ಕುಸುಮ, ಸುಮಯ್ಯ, ಲಲಿತ ಶೆಟ್ಟಿ, ಇಂದಿರಾ, ಶಶಿಕಲಾ, ಪೂರ್ಣೇಶ್ವರಿ ಆರ್.ಎಸ್, ಸವಿತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಶೀನಪ್ಪ, ಅಬ್ದುಲ್ ರಹಿಮಾನ್, ಚಂದ್ರಶೇಖರ ಸಹಕರಿಸಿದರು.

LEAVE A REPLY

Please enter your comment!
Please enter your name here