ಪುತ್ತೂರು: ಅತ್ತೆ ಮೃತಪಟ್ಟ ಬೆನ್ನಲ್ಲೇ ಅಳಿಯನೂ ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ಫೆ.8ರಂದು ನಡೆದಿದೆ. ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಕಸಬಾ ಪೆರಿಯಡ್ಕ ಮಸೀದಿ ಬಳಿಯ ನಿವಾಸಿ ಷರೀಫ್ (35ವ.) ಹಾಗೂ ಅವರ ಅತ್ತೆ ಸಫಿಯಾ (65 ವ.) ಮೃತಪಟ್ಟವರಾಗಿದ್ದಾರೆ. ಮೂಲತ: ಸಕಲೇಶಪುರ ನಿವಾಸಿಯಾಗಿರುವ ಷರೀಫ್ ಅವರು ಕಳೆದ ಕೆಲ ವರ್ಷಗಳಿಂದ ಪೆರಿಯಡ್ಕದಲ್ಲಿ ವಾಸವಾಗಿದ್ದರು. ಅವರು ಮನೆಯಲ್ಲಿಯೇ ಜ್ಯೂಸ್ ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಎಸ್‌ವೈಎಸ್ ಪೆರಿಯಡ್ಕ ಘಟಕದ ಅಧ್ಯಕ್ಷ ಹಾಗೂ ಹೊಸಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿಯ ಸಕ್ರೀಯ ಸದಸ್ಯರಾಗಿದ್ದರು. ಎರಡು ದಿನಗಳ ಹಿಂದೆ ದಿಢೀರ್ ಅಸ್ವಸ್ಥಕ್ಕೆ ಒಳಗಾಗಿದ್ದ ಷರೀಫ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಫೆ.8ರಂದು ಮಧ್ಯಾಹ್ನದ ವೇಳೆಗೆ ನಿಧನರಾದರು. ಮೃತರು ಟೈಲರ್ ವೃತ್ತಿ ನಡೆಸುತ್ತಿರುವ ಪತ್ನಿ ಆಯಿಷಾ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತ ಷರೀಫ್ ಅವರ ಅತ್ತೆ (ಪತ್ನಿಯ ತಾಯಿ), ಷರೀಫ್ ಅವರ ಪಕ್ಕದ ಮನೆಯ ನಿವಾಸಿ ಸೆಂಟ್ರಿಂಗ್ ಮಹಮ್ಮದ್ ಅವರ ಪತ್ನಿ ಸಫಿಯಾ ಕಳೆದ ಒಂದು ತಿಂಗಳಿನಿಂದ ಅಸ್ವಸ್ಥಕ್ಕೆ ಒಳಗಾಗಿದ್ದರು. ಅವರು ಫೆ.8ರಂದು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮೃತಪಟ್ಟರು. ಇದಾದ ಕೆಲವೇ ಗಂಟೆಗಳ ನಂತರ ಷರೀಫ್ ಅವರು ಮೃತಪಟ್ಟಿದ್ದು, ಈ ಕುಟುಂಬ ಈಗ ಶೋಕಸಾಗರದಲ್ಲಿ ಮುಳುಗಿದೆ.