ಅಧಿಕಾರಿಗಳ ದುರ್ವರ್ತನೆ,ಲಂಚಾವತಾರದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ
ಕಡಬ: ಗ್ರಾಮ ಪಂಚಾಯಿತಿ ಇರುವುದು ಗ್ರಾಮದ ಜನರ ಸಮಸ್ಯೆ ಪರಿಹರಿಸುವುದಕ್ಕೆ ಅಲ್ಲಿ ಊರಿನ ಜನರಿಗೆ ತೃಪ್ತಿದಾಯಕ ಸೇವೆ ನೀಡುವುದು ಜವಾಬ್ದಾರಿ. ಅಧಿಕಾರಿಗಳ ಅಧಿಕಾರಿಗಳು ನಿಯತ್ತಿನಿಂದ ಕೆಲಸ ಮಾಡಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಾಕೀತು ಮಾಡಿದ್ದಾರೆ.
ಅವರು ಶುಕ್ರವಾರ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಡಬ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ಪರೋಕ್ಷವಾಗಿ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ದುರ್ವರ್ತನೆ ಹಾಗೂ ಲಂಚಾವತಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನವಾಗುವ ಯೋಜನೆಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಅನುಷ್ಠಾನ ಅಧಕಾರಿಗಳು ಉದಾಸೀನ ಮಾಡಬಾರದು, ವಸತಿ ಇಲ್ಲದವರಿಗೆ ವಸತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು, ವಸತಿ ನಿರ್ಮಾಣ ಮಾಡಲು ನಿವೇಶನ ಇಲ್ಲದ ಬಡವರಿಗೆ ನಿವೇಶನ ಒದಗಿಸುವ ಕಾರ್ಯವನ್ನು ಪಂಚಾಯಿತಿ ಮಾಡಬೇಕು, ನಿವೇಶನಕ್ಕೆ ಸೂಕ್ತ ಜಾಗ ಗುರುತಿಸಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಂದ ದಾಖಲೆ ತಯಾರಿಸಬೇಕು, ಪಂಚಾಯಿತಿ ಹಾಗೂ ಇತರ ಸರಕಾರಿ ಕಚೇರಿಗಳಿಗೆ ಜನ ತಮ್ಮ ಕೆಲಸಗಳಿಗೆ ಆಗಮಿಸುವಾಗ ಅವರನ್ನು ಹಣಕ್ಕಾಗಿ ಸತಾಯಿಸುವ ವಿನಾಕಾರಣ ತೊಂದರೆ ನೀಡುವ ಕೆಲಸ ಮಾಡುವುದು ಸರಿಯಲ್ಲ. ಸರಕಾರ ಅಧಿಕಾರಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಉತ್ತಮ ಸೇವೆ ನೀಡಲು ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಕೆಲಸ ಮಾಡಿ ಒಳ್ಳೆಯ ಹೆಸರು ಮಾಡಿ ಎಂದು ಹೇಳಿದ ಶಾಸಕರು, ಮುಂದಿನ ದಿನಗಳಲ್ಲಿ ಬಿರುಬೇಸಿಗೆಯಲ್ಲಿ ಗ್ರಾಮೀಣ ಭಾಗದ ಶಾಲೆಗಳಿಗೆ ಹಾಗೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿ ವಾರಕ್ಕೊಮ್ಮೆ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚತೆ, ನೀರಿನ ಅಭಾವ ಉಂಟಾದಲ್ಲಿ ಕೊಳವೆ ಬಾವಿ ಕೊರೆಸುವುದು, ಪಂಚಾಯಿತಿಗಳಲ್ಲಿ ಹೆಚ್ಚುವರಿ ನೀರಾವರಿ ಪಂಪುಗಳನ್ನು ಇರಿಸಿಕೊಳ್ಳುವುವುದು, ಗುಣಮಟ್ಟವನ್ನು ಒಳಪಡಿಸುವುದು ನೀರಿನ ಪರೀಕ್ಷೆಗೆ ಮುಂತಾದ ಜವಾಬ್ದಾರಿ ಪಂಚಾಯಿತಿ ಮೇಲಿದೆ, ಜೀವನ್ ಮಿಷನ್ ಯೋಜನೆಯನ್ನು ಸಮರ್ಪಕ ಬಳಕೆ ಮಾಡಿಕೊಂಡು ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು, ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಅಧಕಾರಿಗಳಿಗೆ ಶಾಸಕರು ಸೂಚಿಸಿದರು.
ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಡಬ ತಾಲೂಕು ಗುರಿ ಮೀರಿದ ಸಾಧನೆ ಮಾಡಿದೆ. ಈಗಾಗಲೇ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಭಾಜನವಾಗಿದೆ. ಇದು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಕಡಬ ತಾಲೂಕು ಪಶುವೈದ್ಯಾಧಿ ಕಾರಿ ಡಾ.ಅಜಿತ್ ರಾಮಕುಂಜದಲ್ಲಿರುವ ಗೋಶಾಲೆಯ ಆವರಣದಲ್ಲಿ ಮರಗಳ ತೆರವು ಮಾಡಿ ಹಸಿರು ಹುಲ್ಲುಗಾವಲು ನಿರ್ಮಾಣ ಮಾಡಲು ಅವಕಾಶ ಕೋರಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕರು ಭರವಸೆ ನೀಡಿದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಶಸ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮ್ಯಾನೇಜರ್ ಭುವನೇಂದ್ರ ಕುಮಾರ್ ಸಹಕರಿಸಿದರು.ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು,ವಿವಿಧ ಇಲಾಖಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದರು. ತಾಲೂಕು ಪಂಚಾಯಿತಿ ಕಾರ್ ನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿ, ವಂದಿಸಿದರು.