ಪುತ್ತೂರು: ಮಾಯಿದೆ ದೇವುಸ್ ಚರ್ಚ್‍ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2024-ಸೀಸನ್ 3′ ಫೆ.11 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಕ್ರಿಕೆಟ್ ಪಂದ್ಯಾಟವು ಇದೀಗ ಸಂಭ್ರಮದ ತೆರೆ ಕಂಡಿದೆ.
ಸಂಜೆ ಜರಗಿದ ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್ಸ್ ತಂಡವು ಸಿಪಿಎಲ್ 2024, ಸೀಸನ್ 3 ಚಾಂಪಿಯನ್ ಆಗಿ ಮೂಡಿ ಬಂದಿದ್ದು ಟ್ರೋಪಿ ಹಾಗೂ ರೂ.25 ಸಾವಿರ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ. ಕಳೆದ ವರ್ಷವೂ ಲೂವಿಸ್ ಕ್ರಿಕೆಟರ್ಸ್ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾೈಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ್ಸ್ ತಂಡವು ರನ್ನರ್ಸ್ ಪ್ರಶಸ್ತಿಯೊಂದಿಗೆ ರೂ.20 ಸಾವಿರವನ್ನ್ನು ಪಡೆದುಕೊಂಡಿತು. ಸಿಪಿಎಲ್ ಸೀಸನ್-1ರಲ್ಲಿ ಸಿಝ್ಲರ್ ಸ್ಟ್ರೈಕರ್ಸ್ ತಂಡವು ಚಾಂಪಿಯನ್ ಆಗಿ ಸೋಜಾ ಸೂಪರ್ ಕಿಂಗ್ಸ್ ರನ್ನರ್ಸ್, ದ್ವಿತೀಯ ಆವೃತ್ತಿಯಲ್ಲಿ ಲೂವಿಸ್ ಕ್ರಿಕೆಟರ್ಸ್ ಚಾಂಪಿಯನ್ ಆಗಿ, ಸಿಝ್ಲರ್ ಸ್ಟ್ರೈಕರ್ಸ್ ರನ್ನರ್ಸ್ ಆಗಿದ್ದವು.
ಲೂವಿಸ್ ಕ್ರಿಕೆಟರ್ಸ್ ಹಾಗೂ ಕ್ರಿಶಲ್ ವಾರಿಯರ್ಸ್ ನಡುವಣ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕ್ರಿಶಲ್ ವಾರಿಯರ್ಸ್ ತಂಡವು ಎದುರಾಳಿ ತಂಡದ ರೋನ್ ಡಿ’ಸಿಲ್ವ(ನಾಲ್ಕು ರನ್ನಿಗೆ ಮೂರು ವಿಕೆಟ್)ರವರ ಕರಾರುವಾಕ್ ಬೌಲಿಂಗ್‍ನಿಂದ ನಿಗದಿತ ಐದು ಓವರ್‍ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಕೇವಲ 26 ರನ್‍ಗಳನ್ನು ಪೇರಿಸಲು ಶಕ್ತವಾಗಿತ್ತು. ತಂಡದ ಪರ ಆರಂಭಿಕ ಆಟಗಾರ ಜೋನ್ಸನ್(4 ರನ್), ಶರನ್(9 ರನ್) ಗಳಿಸಿದ್ದರು. ಬಳಿಕ ವಿಜಯಿ ರನ್ ಬೆನ್ನಟ್ಟಿದ ಕಳೆದ ವರ್ಷದ ಚಾಂಪಿಯನ್ ಲೂವಿಸ್ ಕ್ರಿಕೆಟರ್ಸ್ ತಂಡವು ಕೇವಲ 3.5 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 30 ರನ್‍ಗಳನ್ನು ಬಾರಿಸಿ ಗೆಲುವಿನ ಕೇಕೆ ಹಾರಿಸಿ ಸಿಪಿಎಲ್ ಸೀಸನ್-3ರ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಲೂವಿಸ್ ಕ್ರಿಕೆಟರ್ಸ್ ಪರ ವಿಕೆಟ್ ಕೀಪರ್ ಡೋಯಲ್ ಡಿ’ಸೋಜ(13 ರನ್), ರೋಹನ್ ಡಿ’ಸಿಲ್ವ(4 ರನ್) ಗಳಿಸಿದ್ದರು.
ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಲೂವಿಸ್ ಕ್ರಿಕೆಟರ್ಸ್‍ನ ಡೋಯಲ್ ಡಿ’ಸೋಜ, ಸರಣಿಶ್ರೇಷ್ಟ ಪ್ರಶಸ್ತಿಯನ್ನು ಲೂವಿಸ್ ಕ್ರಿಕೆಟರ್ಸ್ ತಂಡದ ರಾಕೇಶ್, ಉತ್ತಮ ಕೀಪರ್ ಪ್ರಶಸ್ತಿಯನ್ನು ಲೂವಿಸ್ ಕ್ರಿಕೆಟರ್ಸ್‍ನ ಡೋಯಲ್ ಡಿ’ಸೋಜ, ಉತ್ತಮ ಕ್ಷೇತ್ರರಕ್ಷಕರಾಗಿ ಸೋಜಾ ಸೂಪರ್ ಕಿಂಗ್ಸ್‍ನ ವಿಲಿಯಂ, ಪಿಂಚ್ ಹಿಟ್ಟರ್ ಆಗಿ ಲೂವಿಸ್ ಕ್ರಿಕೆಟರ್ಸ್‍ನ ಜೋಯ್ಸನ್, ವ್ಯಾಲ್ಯುವೇಬಲ್ ಪ್ಲೇಯರ್ ಆಗಿ ಕ್ರಿಶಲ್ ವಾರಿಯರ್ಸ್‍ನ ಮ್ಯಾಕ್ಲಿನ್, ಎಮರ್ಜಿಂಗ್ ಪ್ಲೇಯರ್ ಆಗಿ ಲೂವಿಸ್ ಕ್ರಿಕೆಟರ್ಸ್‍ನ ರೋಹನ್ ಡಿ’ಸಿಲ್ವ, ಗೇಮ್ ಚೇಂಜರ್ ಆಗಿ ಕ್ರಿಶಲ್ ವಾರಿಯರ್ಸ್‍ನ ಶರನ್ ಡಿ’ಸಿಲ್ವ, ಉತ್ತಮ ಬೌಲರ್ ಆಗಿ ಕ್ರಿಶಲ್ ವಾರಿಯರ್ಸ್‍ನ ಮೆಲ್ವಿನ್, ಉತ್ತಮ ಬ್ಯಾಟರ್ ಆಗಿ ಕ್ರಿಶಲ್ ವಾರಿಯರ್ಸ್‍ನ ಜೋನ್ ಗಲ್ಬಾವೋರವರು ಆಯ್ಕೆಯಾದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಆ್ಯಂಟನಿ ಒಲಿವೆರಾರವರು ಸ್ವಾಗತಿಸಿ ಮಾತನಾಡಿ, ಕ್ಲಬ್‍ನಲ್ಲಿನ ಸದಸ್ಯರ ಒಗ್ಗಟ್ಟು ಹಾಗೂ ಐಕ್ಯತೆ ಉತ್ತಮ ಕಾರ್ಯಕ್ರಮ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿ ವಿಜೇತರಿಗೆ ಅಭಿನಂದಿಸಿದರು. ಕ್ಲಬ್ ಕಾರ್ಯದರ್ಶಿ ಜ್ಯೋ ಡಿ’ಸೋಜ, ಉಪಾಧ್ಯಕ್ಷ ರೋಯ್ಸ್ ಪಿಂಟೋ, ಜೊತೆ ಕಾರ್ಯದರ್ಶಿ ಬ್ಯಾಪ್ಟಿಸ್ಟ್ ರೊಡ್ರಿಗಸ್, ಕೋಶಾಧಿಕಾರಿ ರೊನಾಲ್ಡ್ ಮೊಂತೇರೊ, ಕ್ರೀಡಾಕೂಟದ ಸಂಯೋಜಕರಾದ ರಾಕೇಶ್ ಮಸ್ಕರೇನ್ಹಸ್, ಆ್ಯಲನ್ ಮಿನೇಜಸ್ ಸಹಿತ ಕ್ಲಬ್ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ ವಿಜೇತರ ಪಟ್ಟಿ ವಾಚಿಸಿದರು. ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಅಂಪೈರ್ಸ್‍ಗಳಾಗಿ ಸುಜನ್, ಅರ್ಫಾನ್, ಅಕ್ಷಯ್, ಚಿದಾನಂದ, ಯಜ್ಞೇಶ್, ಸ್ಕೋರರ್‍ಗಳಾಗಿ ದತ್ತಪ್ರಸಾದ್ ಶೆಟ್ಟಿ, ಆ್ಯಶ್ಲೇಷ್, ಶಬರೀಶ್, ಯತೀಶ್, ವೀಕ್ಷಕ ವಿವರಣೆಗಾರರಾಗಿ ಪ್ರೀತಂ ಪಿಂಟೊ, ಪ್ರಕಾಶ್ ಸಿಕ್ವೇರಾ ಸಹಕರಿಸಿದರು.
ಟೇಬಲ್ ಟಾಪ್ ಕ್ರಿಶಲ್ ವಾರಿಯರ್ಸ್ ನೇರ ಫೈನಲಿಗೆ..
ಸಿಪಿಎಲ್ ಕಾದಾಟದಲ್ಲಿ ಆರು ತಂಡಗಳು ಲೀಗ್ ಮಾದರಿಯಲ್ಲಿ ಕಣಕ್ಕಿಳಿದಿದ್ದು, ಇದರಲ್ಲಿ ಮೊದಲನೇ ತಂಡವಾಗಿ ಕ್ರಿಶಲ್ ವಾರಿಯರ್ಸ್(8 ಅಂಕ) ತಂಡವು ನೇರವಾಗಿ ಫೈನಲ್ ಹಂತಕ್ಕೆ ನೆಗೆದೇರಿತ್ತು. ಈ ಬಾರಿ ಯಾರು ಅಂಕಪಟ್ಟಿ(ಟೇಬಲ್ ಟಾಪ್)ಯಲ್ಲಿ ಅಗ್ರಸ್ಥಾನ ಗಳಿಸುತ್ತಾರೋ ಅವರು ನೇರವಾಗಿ ಫೈನಲ್ ಹಂತಕ್ಕೆ ತೇರ್ಗಡೆಗೊಳ್ಳುತ್ತಾರೆ ಎಂಬುದು ಸಂಘಟಕರ ನಿರ್ಣಯವಾಗಿತ್ತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಲೂವಿಸ್ ಕ್ರಿಕೆಟರ್ಸ್, ತೃತೀಯ ಸ್ಥಾನ ಗಳಿಸಿದ ಸೋಜಾ ಸೂಪರ್ ಕಿಂಗ್ಸ್ ನಡುವೆ ಸೆಮಿಫೈನಲ್ ಪಂದ್ಯ ಏರ್ಪಟ್ಟಿದ್ದು ಇದರಲ್ಲಿ ಲೂವಿಸ್ ಕ್ರಿಕೆಟರ್ಸ್ ತಂಡವು ಫೈನಲ್‍ಗೆ ಅರ್ಹತೆ ಪಡೆಯಿತು. ಎಸ್.ಎಲ್ ಗ್ಲ್ಯಾಡಿಯೇಟರ್ಸ್, ಫ್ಲೈಝೋನ್ ಅಟ್ಯಾಕರ್ಸ್, ಸಿಝ್ಲರ್ ಸ್ಟ್ರೈಕರ್ಸ್ ತಂಡಗಳಿ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು.
ಮೊ|ಪತ್ರಾವೋ ಪ್ರತಿಮೆಗೆ ಹೂಹಾರ ಹಾಕಿ ಚಾಲನೆ..
ಡೊನ್ ಬೊಸ್ಕೊ ಕ್ಲಬ್ ಕಾರ್ಯದರ್ಶಿ ಜ್ಯೋ ಡಿ’ಸೋಜ ಹಾಗೂ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜರವರು ಜೊತೆಗೂಡಿ ಬೆಳಗ್ಗೆ ಫಿಲೋಮಿನಾ ಕ್ಯಾಂಪಸ್ಸಿನಲ್ಲಿನಲ್ಲಿರುವ ಶಿಕ್ಷಣ ಶಿಲ್ಪಿ ಮೊ|ಆ್ಯಂಟನಿ ಪತ್ರಾವೋರವರ ಪ್ರತಿಮೆಗೆ ಹೂಹಾರವನ್ನು ಹಾಕುವ ಮೂಲಕ ಮೊ|ಪತ್ರಾವೋರವರಿಗೆ ಗೌರವಾರ್ಪಣೆ ಸಲ್ಲಿಸಿ ಪಂದ್ಯಾಕೂಟಕ್ಕೆ ಚಾಲನೆ ನೀಡಲಾಯಿತು.
…ಹೈಲೈಟ್ಸ್…
-ಎಲ್ಲೆಡೆ ಕಸ, ನೀರಿನ ಬಾಟ್ಲಿ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲೆಡೆ ಎಸೆಯದಂತೆ ಕ್ರೀಡಾಂಗಣದ ಸುತ್ತಲೂ
ಪ್ಲಾಸ್ಟಿಕ್ ಕಸದ ತೊಟ್ಟಿಗಳನ್ನು ಇಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು.
-ಎರಡೂ ಗ್ರೌಂಡ್ಗಳಲ್ಲಿ ಎರಡೂ ತಂಡದ ಆಟಗಾರರಿಗೆ ಡಗೌಟ್ ವ್ಯವಸ್ಥೆಯನ್ನು ಮಾಡಲಾಗಿತ್ತು.
-ಪ್ರತಿ ತಂಡದ ಆಟಗಾರರಿಗೆ ಹಾಗೂ ಕ್ರಿಕೆಟ್ ಪ್ರಿಯರಿಗೆ ಮಧ್ಯಾಹ್ನದ ಭೋಜನ ಹಾಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
-ಪಂದ್ಯಗಳು ಬೆಳಿಗ್ಗೆ 8.00ಕ್ಕೆ ಆರಂಭವಾಗಿ ಸಂಜೆ 5.30 ಗಂಟೆಗೆ ವ್ಯವಸ್ಥಿತವಾಗಿ ಮುಕ್ತಾಯ ಕಂಡಿತ್ತು.
-ಪಂದ್ಯಾಕೂಟದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಪುತ್ತೂರು, ಮರೀಲು, ಬನ್ನೂರು ಚರ್ಚ್‍ನ
ಆಟಗಾರರ ಬಾಂಧವ್ಯ’ ಹಾಗೂ ಒಗ್ಗಟ್ಟು’ ಎದ್ದು ಕಾಣಿಸುತ್ತಿತ್ತು.
-ಎಲ್ಲಾ ಆರು ತಂಡಗಳು ಆಕರ್ಷಕ ಜೆರ್ಸಿಯೊಂದಿಗೆ ಕಣಕ್ಕಿಳಿದಿದ್ದವು.
-ಫೈನಲ್ ಪಂದ್ಯದಲ್ಲಿ ಒಂದು ಓವರ್ ಪವರ್ ಫ್ಲೇ ಅಳವಡಿಸಲಾಗಿತ್ತು.