ಹನುಮಗಿರಿಯ ಅಮರಗಿರಿ ಶ್ರೀ ಭಾರತೀ ಅಮರಜ್ಯೋತಿ ಮಂದಿರಕ್ಕೆ ವರ್ಷದ ಸಂಭ್ರಮ, ವಾರ್ಷಿಕೋತ್ಸವ – ನಿವೃತ್ತ ಯೋಧರಿಗೆ ಗೌರವಾರ್ಪಣೆ, ಶ್ರೀರಾಮ ಭಾವಯಾನ ನೃತ್ಯರೂಪಕ ಪ್ರದರ್ಶನ

0

ಪುತ್ತೂರು: ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನ ವತಿಯಿಂದ ನಿರ್ಮಾಣಗೊಂಡಿರುವ ದಕ್ಷಿಣ ಭಾರತದಲ್ಲೇ ಪ್ರಥಮ ಭಾರತ ಮಾತಾ ಪೂಜನಾ ಮಂದಿರ ಎನಿಸಿಕೊಂಡಿರುವ ಅಮರಗಿರಿಯ ಶ್ರೀ ಭಾರತಿ ಅಮರಜ್ಯೋತಿ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವವು ಫೆ.11ರಂದು ಜರಗಿತು. ಆರಂಭದಲ್ಲಿ ಶ್ರೀ ಕ್ಷೇತ್ರ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರ ಹಾಗೂ ಕೋದಂಡರಾಮ ಸನ್ನಿಧಿಯಲ್ಲಿ ಪೂಜೆ ನಡೆಸಲಾಯಿತು. ಬಳಿಕ ಅಮರಗಿರಿಯ ಶ್ರೀ ಭಾರತೀ ಅಮರಜ್ಯೋತಿ ಮಂದಿರದಲ್ಲಿರುವ ಶ್ರೀ ಭಾರತ ಮಾತೆಗೆ ಪುಷ್ಪಾರ್ಚನೆ ಹಾಗೂ ಹುತಾತ್ಮರ ಸ್ಮಾರರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸೇನಾ ಅಧಿಕಾರಿ ಕ್ಯಾ.ಬೃಜೇಶ್ ಚೌಟರವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದಿದೆ. ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಶ್ರಮಪಟ್ಟಿದ್ದೇವೆ. ಈ ದೇಶ ಒಟ್ಟಾಗಿ ಉಳಿಯಲು ಸಾಧ್ಯವಿಲ್ಲ, ಈ ದೇಶ ಸಾಲಗಾರರ ದೇಶವಾಗಬಹುದು, ಸಂಸ್ಕೃತಿ ಅದು ಕೆಳಮಟ್ಟದ ಸಂಸ್ಕೃತಿ ಇತ್ಯಾದಿ ಬಹಳಷ್ಟು ಮಾತುಗಳು ಕೇಳಿಬಂದವು ಆದರೆ ಅವೆಲ್ಲವನ್ನು ಮೀರಿ ಇಂದು ದೇಶದ 5ನೇ ದೊಡ್ಡ ಆರ್ಥಿಕ ದೇಶವಾಗಿ ಬೆಳೆದಿದೆ. ನಮ್ಮ ಸಂಸ್ಕೃತಿಯನ್ನು ಇಡೀ ವಿಶ್ವವೇ ಆರಾಧಿಸುವ ಹಂತಕ್ಕೆ ಬಂದಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶವಾದ ಈಶ್ವರಮಂಗಲದ ಈ ಪ್ರದೇಶದಲ್ಲಿ ಇಂತಹ ಒಂದು ಅದ್ಭುತವಾದ ಕಲ್ಪನೆ ಸಾಕಾರಗೊಂಡಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಚಾಲಕ, ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್.ಚಳ್ಳಂಗಾರುರವರು ಮಾತನಾಡಿ, ಬೇರೆ ಬೇರೆ ಮಾನಸಿಕತೆ, ಮನಸ್ಸುಗಳಿರುವವರನ್ನು ಒಂದೆಡೆ ಸೇರಿಸಿ ಇಂತಹ ದೊಡ್ಡ ಕೇಂದ್ರವನ್ನು ಸ್ಥಾಪಿಸಬೇಕಾದರೆ ವ್ಯಕ್ತಿಗಳಿಂದ ಸಾಧ್ಯವಿಲ್ಲ ಇದಕ್ಕೆ ದೈವಾನುಗ್ರಹವೇ ಬೇಕಾಗುತ್ತದೆ. ಅದನ್ನು ನೋಡಿದರೆ ಹನುಮಗಿರಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿಯ ದಿವ್ಯ ಅನುಗ್ರಹ ಸದಾ ಇದ್ದೇ ಇದೆ ಎಂಬುದು ಅರಿವಾಗುತ್ತದೆ. ನಮ್ಮ ಹಿರಿಯರ ಕನಸುಗಳೇನಿತ್ತು ಅದು ನಮ್ಮ ಜೀವಿತದ ಅವಧಿಯಲ್ಲಿ ನಡೆದಿದೆ. ಇದು ನಮ್ಮೆಲ್ಲರ ಭಾಗ್ಯ. ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯರವರು ವಹಿಸಿ ಮಾತನಾಡಿ, ಸಾರ್ವಜನಿಕರಿಗೆ ಮುಕ್ತವಾಗಿ ನೋಡುವಂತಹ ವ್ಯವಸ್ಥೆ ಇಲ್ಲಿದೆ. ರಜೆಯ ದಿವಸ ಹಾಗೇ ಇತರ ದಿವಸಗಳಲ್ಲೂ ಕೂಡ ಸಾರ್ವಜನಿಕರು, ವಿದ್ಯಾರ್ಥಿಗಳು ಬಂದು ಅಮರಗಿರಿಯನ್ನು ನೋಡಿ ಅಲ್ಲಿಂದ ಪ್ರೇರಣೆಯನ್ನು ಪಡೆಯಬಹುದಾಗಿದೆ.ಅಮರಗಿರಿಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಸೇನಾಧಿಕಾರಿಗಳನ್ನು ಗೌರವಿಸುವ ಕೆಲಸವನ್ನು ಮಾಡಿದ್ದೇವೆ. ಹನುಮಗಿರಿ ಕ್ಷೇತ್ರ ಆದ ಮೇಲೆ ಈಶ್ವರಮಂಗಲ ಈ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆ ಆಗಿದೆ ಎಂಬ ವಿಷಯವನ್ನು ಹೇಳಲು ಸಂತೋಷವಾಗುತ್ತದೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಕೆ ಮಾಡಿದರು.

ನಿವೃತ್ತ ಯೋಧರಿಗೆ ಗೌರವಾರ್ಪಣೆ
ಈ ಸಂದರ್ಭದಲ್ಲಿ ನಿವೃತ್ತ ಯೋಧ ವಿದ್ಯಾಧರ ಎನ್.ಪಟ್ಟೆಯವರನ್ನು ಗೌರವಿಸಲಾಯಿತು. ಶಾಲು,ಹೂಹಾರ,ಪೇಟಾ ತೊಡಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ವಿದ್ಯಾಧರ ಎನ್.ರವರು ಕೃತಜ್ಞತೆ ಸಲ್ಲಿಸಿದರು.

ಯೋಧರ ತಾಯಿಗೂ ಸನ್ಮಾನ
ಪಟ್ಟೆ ದಿ.ಮಹಾಲಿಂಗ ಪಾಟಾಳಿ ಮತ್ತು ಗಿರಿಜಾರವರ ಪುತ್ರರಾಗಿರುವ ವಿದ್ಯಾಧರ ಎನ್, ಸುಬ್ಬಪ್ಪ ಪಾಟಾಳಿ ಹಾಗೂ ಬಾಲಕೃಷ್ಣ ಎನ್.ಈ ಮೂವರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಮೂವರು ಮಕ್ಕಳನ್ನೂ ಕೂಡ ಸೇನೆಗೆ ಕಳುಹಿಸುವ ಮೂಲಕ ದೇಶಭಕ್ತಿ ಮೆರೆದ ತಾಯಿ ಗಿರಿಜಾರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇವರ ಜೊತೆ ಸುಬ್ಬಪ್ಪ ಪಾಟಾಳಿ, ಬಾಲಕೃಷ್ಣ ಎನ್ ಮತ್ತು ವಿದ್ಯಾಧರ ಎನ್.ರವರನ್ನು ಗೌರವಿಸಿದ್ದು ವಿಶೇಷವಾಗಿತ್ತು.

ಅಮರಗಿರಿ ಧ್ವನಿಸುರಳಿ ಬಿಡುಗಡೆ
ಅಮರಗಿರಿಯ ವಿಶೇಷತೆಯ ಬಗ್ಗೆ ಮಾಹಿತಿಯನ್ನೊಳಗೊಂಡ ಧ್ವನಿಸುರುಳಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಧ್ವನಿಸುರುಳಿಯನ್ನು ಅಮರಗಿರಿಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ಶಿವರಾಮ ಪಿ.ಸ್ವಾಗತಿಸಿದರು.ರಚಿತಾ ಡಿ.ಆರ್ ಪ್ರಾರ್ಥಿಸಿದರು. ಧರ್ಮದರ್ಶಿ ಶಿವರಾಮ ಶರ್ಮ ವಂದಿಸಿದರು. ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ನಡುವಡ್ಕ ಸಹಕರಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ವಿವೇಕಾನಂದ ಪದವಿ ಮಹಾವಿದ್ಯಾಲಯದ ಲಲಿತಾ ಕಲಾ ಸಂಘದ ವಿದ್ಯಾರ್ಥಿ ಕಲಾವಿದರಿಂದ ` ಶ್ರೀರಾಮ ಭಾವಯಾನ’ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಗುಣಗಾನ ಮಾಡುವ ನೃತ್ಯ ರೂಪಕ ಪ್ರದರ್ಶನಗೊಂಡಿತು.

ಪ್ರಥಮ ವರ್ಷದ ಸಂಭ್ರಮ
ಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿ ಎಂಬ ದಿವ್ಯ ಸಂದೇಶದೊಂದಿಗೆ ಅಖಂಡ ಭಾರತದ ಪರಿಕಲ್ಪನೆಯ ಅನಾವರಣದೊಂದಿಗೆ ಶ್ರೀ ಭಾರತಿ ಅಮರಜ್ಯೋತಿ ಮಂದಿರಕ್ಕೆ ತೆರೆದುಕೊಳ್ಳುವ ಒಂದು ದಿವ್ಯಾನುಭವವನ್ನು ನೀಡುವ ಸ್ಥಳವೇ ಅಮರಗಿರಿ. ಅಖಂಡ ಭಾರತ ಪರಿಕಲ್ಪನೆಯನ್ನು ಬಹಳ ವಿಶೇಷ, ವಿಭಿನ್ನವಾಗಿ ಮನಮುಟ್ಟುವಂತೆ ಇಲ್ಲಿ ತೆರೆದಿಡಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಅಮರಗಿರಿಗೆ ಬಂದು ಇಲ್ಲಿನ ದಿವ್ಯಾನುಭವವನ್ನು ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here