ಕಾಂಚನ ನಡ್ಪ: ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ-ಹೊರೆಕಾಣಿಕೆ ಸಮರ್ಪಣೆ

0

ನೆಲ್ಯಾಡಿ: ಗ್ರಾಮ ದೇವರಾದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ ಫೆ.13 ಮತ್ತು 14ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದ್ದು ಫೆ.12ರಂದು ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಬೆಳಿಗ್ಗೆ ಕಾಂಚನ ಬಸ್‌ನಿಲ್ದಾಣದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗ್ರಾಮದ ಭಕ್ತಾದಿಗಳು ಕಾಣಿಕೆ ಡಬ್ಬಿ, ಬಲಿವಾಡು ಸಹಿತ ಅಡಿಕೆ, ತೆಂಗು, ಸಿಯಾಳ, ಹಿಂಗಾರ, ಬಾಳೆಗೊನೆ ಸೇರಿದಂತೆ ವಿವಿಧ ಫಲವಸ್ತುಗಳನ್ನು ಮೆರವಣಿಗೆ ಮೂಲಕ ತಂದು ದೇವರಿಗೆ ಸಮರ್ಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರೂ, ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ ಗೌಡ ‘ಶ್ರೀಹರಿ’ ನಡ್ಪ, ಉಪಾಧ್ಯಕ್ಷರಾದ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಜೊತೆಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕರಾದ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಲೋಕೇಶ್ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಯುವ ಟ್ರಸ್ಟ್‌ನ ಸುರೇಶ್ ಬಿದಿರಾಡಿ, ಯಾದವ ನೆಕ್ಕರೆ, ದಿನೇಶ್ ನಡ್ಪ, ಪ್ರಸನ್ನ ಕಾರಂತ, ನೋಣಯ್ಯ ಪದಕ, ಶಿವರಾಮಪ್ರಸಾದ್ ಬಜತ್ತೂರು, ಎಲ್ಯಣ್ಣ ಗೌಡ ಶಿವಪುರ, ಕಿಶೋರ್ ಬಜತ್ತೂರು, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಉಮೇಶ್ ಗೌಡ ನೆಕ್ಕರೆ, ಕಾರ್ಯದರ್ಶಿ ಕೇಶವ ಗೌಡ ಅಗರ್ತ, ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಸೇರಿದಂತೆ ದೇವಸ್ಥಾನದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

ಫೆ.13: ದೇವರಿಗೆ ಸ್ವರ್ಣ ಕಿರೀಟ ಸಮರ್ಪಣೆ

ಫೆ.13ರಂದು ಬೆಳಿಗ್ಗೆ ಗೊನೆಮುಹೂರ್ತ, ಬಜತ್ತೂರು,ಕಾಂಚನ,ಪದಕ ದೈವಗಳಿಗೆ ತಂಬಿಲ ಮತ್ತು ಬಜತ್ತೂರುಗುತ್ತಿನ ನಾಗತಂಬಿಲ, ತೋರಣ ಮುಹೂರ್ತ ನಡೆಯಲಿದೆ. ಸಂಜೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವ ಶಿರಾಡಿ ದೈವದ ಭಂಡಾರ ತರುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ಸ್ವರ್ಣ ಕಿರೀಟ, ಎದೆ ಕವಚ, ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ ನಡೆಯಲಿದೆ. ಬಳಿಕ ರಂಗಪೂಜೆ, ಪಂಜುರ್ಲಿ ಮತ್ತು ಗ್ರಾಮ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ, ಶ್ರೀ ದೇವರ ಬಲಿ ಹೊರಡುವುದು, ಅಶ್ವತ್ಥ ಕಟ್ಟೆಪೂಜೆ, ವಸಂತಕಟ್ಟೆಪೂಜೆ, ನೃತ್ಯ ಬಲಿ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here