ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆಯ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಫೆ.11 ಮತ್ತು 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಫೆ.11ರಂದು ಬೆಳಿಗ್ಗೆ ವೇದಮೂರ್ತಿ ದಿನೇಶ ಮರಡಿತ್ತಾಯರವರ ಪೌರೋಹಿತ್ಯದಲ್ಲಿ ಮಹಾ ಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಸಾಯಂಕಾಲ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಿತು.
ಫೆ.12ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆದು ಅನ್ನ ಸಂತರ್ಪಣೆ ನಡೆಯಿತು.
ಅಪರಾಹ್ನ ಬ್ರಾಂತಾಯ ಹಾಗೂ ಗುಳಿಗ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು. ಮೊಡಪ್ಪಾಡಿಗುತ್ತು ಕುಟುಂಬಸ್ಥರು, ಬಂಧುಗಳು, ಮಿತ್ರರು, ಗಣ್ಯರು, ಗ್ರಾಮಸ್ಥರು, ಊರ ಪರ ಊರ ಭಕ್ತಾದಿಗಳು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.