ನೆಲ್ಯಾಡಿ: ಬಜತ್ತೂರು ಗ್ರಾಮ ಪಂಚಾಯತ್‌ಗೆ ಫೆ.13ರಂದು ಬೆಳಿಗ್ಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್., ಉಪಾಧ್ಯಕ್ಷೆ ವಿಮಲ ಬೆದ್ರೋಡಿ, ಪಿಡಿಒ ಚಂದ್ರಮತಿ ಹಾಗೂ ಗ್ರಾ.ಪಂ.ಸದಸ್ಯರು ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಾಥಾವನ್ನು ಸ್ವಾಗತಿಸಿದರು. ಬಜತ್ತೂರು ಗ್ರಾಮದ ವಿದ್ಯಾಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಡಾ| ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಗ್ರಾ.ಪಂ.ವಠಾರದಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ ಬಿ.,ಅವರು, ಸಂವಿಧಾನ ರಚನೆಗೊಂಡು 75ವರ್ಷ ಆಗಿದ್ದು ಸಂವಿಧಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಸಂವಿಧಾನ ರಚಿಸಿದ ನೇತಾರರಿಗೆ ಗೌರವ ಸಲ್ಲಿಸಲು ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಎರಡು ವಾಹನಗಳು ಸಂಚರಿಸುತ್ತಿದ್ದು ಸಂವಿಧಾನದ ಮಹತ್ವವನ್ನು ಪ್ರಚಾರ ಪಡಿಸಲಾಗುತ್ತಿದೆ ಎಂದರು.
ಸನ್ಮಾನ:
ಸಾಧಕ ವಿದ್ಯಾರ್ಥಿಗಳಾದ ಭರತ್ ಮೇಲೂರು ಹಾಗೂ ಗುರುಪ್ರಸಾದ್ ಮಣ್ಣಿಮೇರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂವಿಧಾನದ ಕುರಿತು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ವೇಳೆ ಬಹುಮಾನ ವಿತರಣೆ ಮಾಡಲಾಯಿತು. ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್., ಉಪಾಧ್ಯಕ್ಷೆ ವಿಮಲ, ಪಿಡಿಒ ಚಂದ್ರಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಗಿರೀಶ್ ನಾವಡ ಅವರ ತಂಡದಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ಗ್ರಾ.ಪಂ.ಸದಸ್ಯರಾದ ಸಂತೋಷ್‌ಕುಮಾರ್ ಪಂರ್ದಾಜೆ, ಗಂಗಾಧರ ಕೆ.ಎಸ್.ಮೇಲೂರು, ಮೋನಪ್ಪ ಬೆದ್ರೋಡಿ, ಸ್ಮಿತಾ ಪುಯಿಲ, ಪ್ರೇಮ ಬೀಟಿಗೆ, ಪ್ರೆಸಿಲ್ಲಾ ಡಿ.ಸೋಜ ಬೆದ್ರೋಡಿ, ರತ್ನಾ ಮಣಿಕ್ಕಳ, ಉಮೇಶ್ ಓಡ್ರಪಾಲು, ಸ್ಥಳೀಯ ವಿದ್ಯಾಸಂಸ್ಥೆಗಳ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬಂದಿಗಳು, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಮೋಹನ್ ಅವರು ಸ್ವಾಗತಿಸಿ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಆರ್‌ಪಿ ಮಂಜುನಾಥ್ ನಿರೂಪಿಸಿದರು.