ನಿರಂತರ ನಿರಾಯಾಸವಾಗಿ ಆಡಿಕೆ ಹೊರದೇಶದಿಂದ ಆಮದು ಆಗುತ್ತಿದ್ದು ಕರಾವಳಿಯ ಅಡಿಕೆ ಮಾರುಕಟ್ಟೆ ದಿನೇ ದಿನೇ ಕುಸಿಯುತ್ತಿದೆ ಎಂದು ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ, ಪ್ರಗತಿ ಪರ ಕೃಷಿಕ, ಶ್ಯಾಮ್‌ಸುಂದರ ರೈ ಕೊಪ್ಪಳ ವಿಷಾದ ವ್ಯಕ್ತಪಡಿಸಿದ್ದಾರೆ. ಅಡಿಕೆ ಕೃಷಿಕರು ಕಂಗಲಾದರೂ ಇಲ್ಲಿನ ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘ ಸಂಸ್ಥೆಗಳಾಗಲೀ ಈ ಬಗ್ಗೆ ಧ್ವನಿ ಎತ್ತದೆ ಮೌನಿಗಳಾಗಿರುವುದು ವಿಷಾದಕರವಾಗಿದೆ. ಬೀದಿ ನಾಯಿಗೆ ಅನ್ಯಾಯವಾದರೂ ಕೇಳುವವರು ಇರುವಾಗ ತನ್ನ ಜೀವನೋಪಾಯಕ್ಕೆ ಅಡಿಕೆ ಕೃಷಿಯನ್ನೇ ನೆಚ್ಚಿಕೊಂಡಿರುವ ಮತ್ತು ಅಡಿಕೆ ಧಾರಣೆಯನ್ನೇ ಅವಲಂಬಿಸಿಕೊಂಡಿರುವ ಕೃಷಿಕರು ಬೀದಿಗೆ ಬರದಿದ್ದರೆ ಎಲ್ಲಿಯೋ ಉತ್ತರ ಭಾರತಕ್ಕೆ ಕೂಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ. ಸಧ್ಯದ ಅಡಿಕೆ ಮಾರುಕಟ್ಟೆ ದರದಲ್ಲಿ ಖರ್ಚು ಭರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ಇನ್ನಾದರೂ ಬೀದಿಗಿಳಿದು ಪ್ರಶ್ನಿಸದಿದ್ದಲ್ಲಿ ಕೃಷಿಕರಿಗೆ ಉಳಿಗಾಲವಿಲ್ಲ ಎಂದು ಶ್ಯಾಮ್‌ಸುಂದರ ರೈ ಕೊಪ್ಪಳ ಹೇಳಿದ್ದಾರೆ.