ಗ್ರಾಹಕರ ವಸ್ತುಗಳಿಗೆ ಭದ್ರತೆ ಬ್ಯಾಂಕ್‌ಗಳ ಜವಾಬ್ದಾರಿ-ಬ್ಯಾಂಕ್,ಸಹಕಾರಿ ಸಂಘಗಳ ಭದ್ರತಾ ವ್ಯವಸ್ಥೆಯ ಸಮಾಲೋಚನಾ ಸಭೆಯಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್

0

ವಿಟ್ಲ:ಬ್ಯಾಂಕ್‌ಗಳಲ್ಲಿಟ್ಟಿರುವ ಗ್ರಾಹಕರ ವಸ್ತುಗಳಿಗೆ ಸೂಕ್ತ ಭದ್ರತೆ ಒದಗಿಸುವುವುದು ಬ್ಯಾಂಕ್‌ಗಳ ಜವಾಬ್ದಾರಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ವಿಟ್ಲದ ಅಡ್ಯನಡ್ಕದಲ್ಲಿ ನಡೆದ ಬ್ಯಾಂಕ್ ಕಳವು ಪ್ರಕರಣದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಭದ್ರತಾ ವ್ಯವಸ್ಥೆಯ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿ, ಸೂಕ್ತವಾದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಫೆ.13ರಂದು ಬಿಸಿರೋಡಿನ ಲಯನ್ಸ್ ಕ್ಲಬ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಗ್ರಾಹಕರು ಮತ್ತು ಸಾರ್ವಜನಿಕರು ಬ್ಯಾಂಕ್‌ಗಳ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ, ಲಾಕರ್‌ಗಳಲ್ಲಿ ಇಟ್ಟಿರುವ ಚಿನ್ನಾಭರಣ ಮತ್ತು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿರುವ ಹಣಕ್ಕೆ ಸೂಕ್ತವಾದ ಭದ್ರತಾ ಕ್ರಮಗಳನ್ನು ವಹಿಸಿ ಗ್ರಾಹಕರ ವಿಶ್ವಾಸಕ್ಕೆ ದ್ರೋಹ ಆಗದಂತೆ ನೋಡಿಕೊಳ್ಳುವುದು ಬ್ಯಾಂಕ್‌ಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.


ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎರಡನ್ನೂ ಮರೆಯದೆ ಬ್ಯಾಂಕ್‌ಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವುದು ಮತ್ತು ಅಲಾರಂ ವ್ಯವಸ್ಥೆಯನ್ನು ಹೊಂದಿರಬೇಕು.ಜೊತೆಗೆ ಅಳವಡಿಸಲಾಗಿರುವ ಭದ್ರತಾ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾ ಎಂಬುದನ್ನು ಕಾಲಕಾಲಕ್ಕೆ ನೋಡಿಕೊಂಡಿರಬೇಕಾಗಿರುವುದು ಅತ್ಯಂತ ಅಗತ್ಯ.ಇದರ ಜೊತೆಗೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆ ಮಾಡುವುದು ಉತ್ತಮವಾಗಿದೆ ಎಂದು ಹೇಳಿದ ಎಸ್ಪಿಯವರು, ಇಂತಹ ಪ್ರಮುಖವಾದ ವ್ಯವಸ್ಥೆಗಳನ್ನು ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳು ಬಳಸಿಕೊಂಡು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.


ಪೊಲೀಸ್ ಇಲಾಖೆ ಅಥವಾ ಬೀಟ್ ಪೊಲೀಸರು ಓಡಾಡಿ ಎಲ್ಲವನ್ನೂ ತಡೆಯಲು ಸಾಧ್ಯವಾಗುತ್ತದೆ ಎಂಬುದು ಅಷ್ಟೊಂದು ಸುಲಭದ ಮಾತಲ್ಲ.ಎಲ್ಲವನ್ನೂ ಪೊಲೀಸರು ನಿಯಂತ್ರಣ ಮಾಡಲೂ ಸಾಧ್ಯವಿಲ್ಲ.ಹಾಗಾಗಿ ಕೆಲವೊಂದು ಅತೀ ಅಗತ್ಯವಾದ ಪ್ರಾಥಮಿಕ ಸೆಕ್ಯುರಿಟಿ ವ್ಯವಸ್ಥೆಗಳನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಧರ್ಮಪ್ಪ,ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ಎನ್.ಗೌಡ,ಬಂಟ್ವಾಳ ಡಿವೈಎಸ್‌ಪಿ ವಿಜಯಪ್ರಸಾದ್ ಹಾಗೂ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸ್ ಅಽಕಾರಿಗಳು ಮತ್ತು ವಿವಿಧ ಬ್ಯಾಂಕ್‌ಗಳು, ಸಹಕಾರಿ ಸಂಘಗಳ 300ಕ್ಕೂ ಅಧಿಕ ಮ್ಯಾನೇಜರ್‌ಗಳು ಭಾಗವಹಿಸಿ ಸಲಹೆ ನೀಡಿದರು.

ಪೊಲೀಸ್ ಇಲಾಖೆ ಅಥವಾ ಬೀಟ್ ಪೊಲೀಸರು ಓಡಾಡಿ ಎಲ್ಲವನ್ನೂ ತಡೆಯಲು ಸಾಧ್ಯವಾಗುತ್ತದೆ ಎಂಬುದು ಅಷ್ಟೊಂದು ಸುಲಭದ ಮಾತಲ್ಲ.ಎಲ್ಲವನ್ನೂ ಪೊಲೀಸರು ನಿಯಂತ್ರಣ ಮಾಡಲೂ ಸಾಧ್ಯವಿಲ್ಲ.ಹಾಗಾಗಿ ಕೆಲವೊಂದು ಅತೀ ಅಗತ್ಯವಾದ ಪ್ರಾಥಮಿಕ ಸೆಕ್ಯುರಿಟಿ ವ್ಯವಸ್ಥೆಗಳನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕು ಎಂದು ಎಸ್ಪಿಯವರು ಸಲಹೆ ನೀಡಿದರು.

LEAVE A REPLY

Please enter your comment!
Please enter your name here