





ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಪಾರ ಕುಟುಂಬದ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.10ರಿಂದ 12ರವರೆಗೆ ಕುಟುಂಬದ ತರವಾಡು ಮನೆಯಲ್ಲಿ ನಡೆಯಿತು.


ಫೆ.10ರಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ನಾಗರಕ್ತೇಶ್ವರಿ ತಂಬಿಲ, ವೆಂಕಟರಮಣ ದೇವರ ಮುಡಿಪು ಪೂಜೆ, ದೈವಗಳಿಗೆ ನವಕಲಶಾಭಿಷೇಕ, ಅನ್ನಸಂತರ್ಪಣೆ, ಸಂಜೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಪೂಜೆ ನಡೆದು ಏಳ್ನಾಡು ದೈವದ ಭಂಡಾರ ತರವಾಡು ಮನೆಗೆ ಆಗಮನ, ಅನ್ನಸಂತರ್ಪಣೆ, ಏಳ್ನಾಡು ದೈವದ ನೇಮ, ಸತ್ಯದೇವತೆ, ವರ್ಣಾರ ಪಂಜುರ್ಲಿ, ಪುರುಷದೈವದ ನೇಮ ನಡೆಯಿತು. ಫೆ.11ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮ, ಅನ್ನಸಂತರ್ಪಣೆ, ಸಂಜೆ ಗುಳಿಗ, ಕಲ್ಲುರ್ಟಿ, ಕುಪ್ಪೆಪಂಜುರ್ಲಿ ದೈವಗಳ ನೇಮ ನಡೆಯಿತು. ಫೆ.12ರಂದು ತರವಾಡು ಮನೆಯವರಿಂದ ಧರ್ಮದೈವ ರುದ್ರಚಾಮುಂಡಿ ದೈವದ ಹರಕೆ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಪ್ರಧಾನ ಅರ್ಚಕ ವೆಂಕಟ್ರಮಣ ಭಟ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪಾರ ಕುಟುಂಬದ ತರವಾಡು ಮನೆಯ ಸುಬ್ಬಣ್ಣ ಗೌಡ ಪಾರ, ಪಾರ ಕುಟುಂಬದ ದೇವರು ದೈವಗಳ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.














