ಉಪ್ಪಿನಂಗಡಿ: ಪೌರಾಣಿಕ ಐತಿಹ್ಯವನ್ನು ಹೊಂದಿರುವ, ಉಪ್ಪಿನಂಗಡಿ ಕಡವಿನ ಬಾಗಿಲಿನ ಶ್ರೀ ರಾಜನ್‌ದೈವ ಉಬಾರ್ ಕಲ್ಕುಡ- ಕಲ್ಲುರ್ಟಿ ದೈವಸ್ಥಾನದ ಮೂಲಸ್ಥಾನದ ನೇಮೋತ್ಸವದಲ್ಲಿ ನಡೆಯುವ ಶ್ರೀ ಕಲ್ಕುಡ ದೈವದ ವಲಸರಿಯು ಈ ಬಾರಿ ನದಿಯಲ್ಲಿನ ಅಣೆಕಟ್ಟಿನ ಹಿನ್ನೀರಿನ ಕಾರಣಕ್ಕೆ ದೋಣಿಯಲ್ಲೇ ಸಾಗುವ ಮೂಲಕ ಗಮನ ಸೆಳೆಯಿತು.
ಸುಮಾರು ನಾಲ್ಕು ಶತಮಾನಗಳ ಹಿಂದೆ ಕರಾಯ ವೈಲಾಯರಲ್ಲಿದ್ದ ದೈವಗಳು ಮುಂದೆ ಮಾನವ ರೂಪದಲ್ಲಿ ರಾತ್ರಿ ಹೊತ್ತಿನಲ್ಲಿ ಉಪ್ಪಿನಂಗಡಿ ಕಡವಿನ ಬಳಿ ಬಂದು ನಮ್ಮನ್ನು ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಗೆ ಬಿಡುವಂತೆ ಕೇಳಿಕೊಂಡಾಗ ಆಗಿನ ದೋಣಿ ನಡೆಸುವ ಅಂಬಿಗರು ಈಗ ರಾತ್ರಿಯಾಗಿದೆ. ಹೊಳೆ ತುಂಬಾ ನೀರಿದೆ. ಮುಂಜಾನೆ ನಿಮ್ಮನ್ನು ಬಿಡುತ್ತೇವೆ. ಈ ರಾತ್ರಿ ನಮ್ಮಲ್ಲಿ ಅತಿಥಿಗಳಾಗಿ ತಂಗಿರಿ ಎಂದು ಭಿನ್ನವಿಸಿಕೊಂಡರು. ತಂಗಿದ ಅತಿಥಿಗಳಿಗೆ ಕೋಳಿ ಸಾರು, ರೊಟ್ಟಿ, ಹೊಳೆ ಮೀನು ಸಾರಿನಲ್ಲಿ ಆತಿಥ್ಯ ನೀಡಲಾಯಿತು. ಮರುದಿನ ಮುಂಜಾನೆ ನೋಡಿದಾಗ ಬಂದ ಅತಿಥಿಗಳು ಕಾಣೆಯಾಗಿದ್ದರು. ಆತಿಥ್ಯ ನೀಡಿದ ಮನೆಯ ಮೂವರು ಅಣ್ಣ- ತಮ್ಮಂದಿರಿಗೆ ಅತಿಥಿಗಳು ರಾತ್ರಿ ಕನಸಿನಲ್ಲಿ ಬಂದು ‘ಏರ‍್ಯ ನಾಲ್ ಕಡಪು (ಯಾರು ನಾಲ್ಕು ಕಡಪು= ಕಡಪು ಅಂದರೆ ದೋಣಿಯಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿಸುವ ಸ್ಥಳ. ಆಗಿನ ಕಾಲದ ನಾಲ್ಕು ಕಡಪುಗಳು ಅಂದರೆ ಬೊಳ್ವಾರ್, ನೆಕ್ಕಿಲಾಡಿ, ಉಬಾರ್, ಎಣ್ಮಾಡಿ) ಗುಡ್ಡ, ಕುಂಞ, ರಾಮ ಈ ಜಾಗೆದ ಗರ್ಗಲ್ಲ ಕೋಟೆದ ಅಡಿ ಪಂಚಾಂಗ ಯಾನ್ ಮಲ್ತ್‌ದೆ. ಮೇಲ್ ಪಂಚಾಂಗ (ಗುಡಿಗೋಪುರ) ನಿಕುಲು ಮಲ್ಪುಲೆ. ಪಗೆಲ್ ಕಡಪು ನಿಕುಲು ಮಲ್ಪುಲೆ. ರಾತ್ರಿ ಕಡಪು ಯಾನ್ ತುವೊನ್ಬೆ. ( ಗುಡ್ಡ, ಕುಂಞ, ರಾಮ ಈ ಜಾಗದ ಕಗ್ಗಲ್ಲಿನ ಕೋಟೆಯ ಅಡಿ ಪಂಚಾಂಗ ನಾನು ಮಾಡಿದೆ. ಗುಡಿ-ಗೋಪುರವನ್ನು ನೀವು ಮಾಡಿ. ಹಗಲು ಹೊತ್ತು ಕಡಪು ನೀವು ಮಾಡಿ. ರಾತ್ರಿ ಹೊತ್ತಿನ ಕಡಪನ್ನು ನಾನು ನೋಡಿಕೊಳ್ಳುತ್ತೇನೆ) ಎಂದು ಹೇಳಿದರು.
ಮುಂದೆ ಕರಾಯ ವೈಲಾಯರ ಜೋತಿಷ್ಯ ಮಾರ್ಗದರ್ಶನದಲ್ಲಿ ಕಂಡು ಬಂದಂತೆ. ಅತಿಥಿಗಳಾಗಿ ಬಂದವರು ಕಲ್ಕುಡ- ಕಲ್ಲುರ್ಟಿ ದೈವಗಳಾಗಿದ್ದರು. ಈ ದೈವಗಳಿಗೆ ನೀವು ಗುಡಿ ಗೋಪುರಗಳನ್ನು ಕಟ್ಟಿ ಆರಾಧಿಸಿಕೊಂಡು ಬನ್ನಿ ಎಂದು ವೈಲಾಯರು ಸಲಹೆಯನ್ನಿತ್ತರು. ಮುಂದೆ ಇಲ್ಲಿ ದೈವಗಳನ್ನು ವೈಲಾಯರ ಮೂಲಕ ಪ್ರತಿಷ್ಠಾಪನೆ ಮಾಡಿಸಿ, ಮುಂದಿನ ವಿಧಿ- ವಿಧಾನಗಳನ್ನು ಅವರ ಸಲಹೆಯಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೆಲ್ಲಾ ಪೂರ್ವ ಸಂಪ್ರದಾಯದಂತೆ ನಡೆಯುತ್ತಿದ್ದು, ವಿಶೇಷ ಏನೆಂದರೆ ಅಂದು ಮಾತು ಕೊಟ್ಟಂತೆ ವಾರ್ಷಿಕ ನೇಮದ ಮರುದಿನ ಮುಂಜಾನೆ ದೈವವು ನದಿ ದಾಟಿ ಬಂದು ಶ್ರೀ ಸಹಸ್ರಲಿಂಗೇಶ್ವರ ದೇವರ ದರ್ಶನ ಮಾಡುವುದು ವಾಡಿಕೆ. ಈ ಹಿಂದೆಲ್ಲಾ ನೇಮೋತ್ಸವದ ಸಮಯದಲ್ಲಿ ನದಿಯ ನೀರಿನ ಮಟ್ಟ ತೀರಾ ಕುಸಿಯುತ್ತಿದ್ದು, ಸುಲಭ ಸಾಧ್ಯವಾಗಿ ಕಾಲ್ನಡಿಗೆಯಲ್ಲೇ ವಲಸರಿ ವಿಧಿ ವಿಧಾನ ನಡೆಯುತ್ತಿತ್ತು. ಆದರೆ ಈ ಬಾರಿ ದೈವಸ್ಥಾನದಲ್ಲಿ ಹೊಸಕಟ್ಟೆಗಳ ನಿರ್ಮಾಣ ನಡೆದಿದ್ದು, ಈ ಕಾರಣಕ್ಕೆ ಬ್ರಹ್ಮಕಲಶೋತ್ಸವವು ಗುರುವಾರದಂದು ನಡೆದಿತ್ತು. ರಾತ್ರಿ ನಡೆದ ನೇಮೋತ್ಸವದಲ್ಲಿ ದೈವದ ವಲಸರಿಗೆಂದೇ ಹೊಸದಾಗಿ ಖರೀದಿಸಲಾದ ದೋಣೆಯಲ್ಲಿ ಹಿನ್ನೀರು ತುಂಬಿರುವ ನೇತ್ರಾವತಿ ನದಿಯನ್ನು ದಾಟಿ ಕಲ್ಕುಡ ದೈವವು ಶುಕ್ರವಾರ ನಸುಕಿನಲ್ಲಿ ವಲಸರಿ ನಡೆಸಿತು.