ನೆಕ್ಕಿಲಾಡಿ: ವಾಸ್ತವ್ಯದ ಷೆಡ್‌ಗಳ ತೆರವು ಪ್ರಕರಣ-ಗ್ರಾ.ಪಂ. ಒತ್ತಡವೇ ಕಾರಣವೆಂದು ಆರೋಪಿಸಿ ಪ್ರತಿಭಟನೆ

0

ಉಪ್ಪಿನಂಗಡಿ: ಬೀತಲಪ್ಪುವಿನಲ್ಲಿ ಸರಕಾರಿ ಜಾಗದಲ್ಲಿ ಕೆಲ ನಿವೇಶನ ರಹಿತರು ವಾಸ್ತವ್ಯಕ್ಕೆ ನಿರ್ಮಿಸಿದ ಷೆಡ್‌ಗಳನ್ನು ಕಂದಾಯ ಇಲಾಖೆಯು ತೆರವು ನಡೆಸಲು ಗ್ರಾ.ಪಂ. ಆಡಳಿತದ ಒತ್ತಡವೇ ಕಾರಣವೆಂದು ಆರೋಪಿಸಿ ಸಂತ್ರಸ್ತ ಕುಟುಂಬಗಳು ಹಾಗೂ ಕಾಂಗ್ರೆಸ್ ಮುಖಂಡರು 34 ನೆಕ್ಕಿಲಾಡಿ ಗ್ರಾ.ಪಂ. ಮುಂಭಾಗದಲ್ಲಿ ಫೆ.16ರಂದು ದಿಢೀರ್ ಪ್ರತಿಭಟನೆ ನಡೆಸಿದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಈ ಸಂದರ್ಭ ಮಾತನಾಡಿ, ಬೀತಲಪ್ಪುವಿನಲ್ಲಿರುವ ಸರಕಾರಿ ಜಾಗದಲ್ಲಿ ನಿವೇಶನ ರಹಿತ ದಲಿತರು ವಾಸ್ತವ್ಯಕ್ಕೆ ಷೆಡ್‌ಗಳನ್ನು ನಿರ್ಮಿಸಿದ್ದಾರೆ. ಆದರೆ ಅದನ್ನಿಂದು ಕಂದಾಯ ಇಲಾಖೆಯವರು ತೆರವುಗೊಳಿಸಿದ್ದಾರೆ. ಈ ತೆರವಿಗೆ 34 ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತದ ಒತ್ತಡವೇ ಕಾರಣವೆಂಬ ಮಾತುಗಳು ಕೇಳಿ ಬರುತ್ತಿವೆ. ಗ್ರಾ.ಪಂ.ನಲ್ಲಿ ಬಡವರಿಗೊಂದು ನ್ಯಾಯ? ಶ್ರೀಮಂತರಿಗೊಂದು ನ್ಯಾಯ ಯಾಕೆ? ಕುದ್ಕೋಳಿ ಬಳಿ ವ್ಯಕ್ತಿಯೋರ್ವರು ರಸ್ತೆ ಮಾರ್ಜಿನ್‌ನನ್ನೇ ಅತಿಕ್ರಮಣ ಮಾಡಿ ಕೃಷಿ ಮಾಡಿದ್ದಾರೆ. ಮೈಂದನಡ್ಕದಲ್ಲಿ ಸರಕಾರಿ ಜಾಗದಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸಲು ಮುಂದಾಗದ ಗ್ರಾ.ಪಂ. ನಿವೇಶನ ರಹಿತ ಬಡವರು ಮೂರು ಸೆಂಟ್ಸ್ ಜಾಗದಲ್ಲಿ ಕಟ್ಟಿರುವ ಷೆಡ್‌ಗಳನ್ನು ತೆರವುಗೊಳಿಸಲು ಒತ್ತಡ ಹೇರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಮಾತನಾಡಿ, ಇಲ್ಲಿ ಸರಕಾರಿ ಜಾಗದಲ್ಲಿ ಷೆಡ್‌ಗಳನ್ನು ನಿರ್ಮಾಣ ಮಾಡಿದವರು ಈ ಹಿಂದೆಯೇ ಗ್ರಾ.ಪಂ.ಗೆ ಇದನ್ನು ನಮಗೆ ಮನೆ ನಿವೇಶನಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದರು. ಅದಕ್ಕೆ ಗ್ರಾ.ಪಂ. ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ, ಸಾಮಾನ್ಯ ಸಭೆಯಲ್ಲಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ಜಾಗವನ್ನು ಕಾಯ್ದಿರಿಸಬೇಕು ಎಂಬ ನಿರ್ಣಯ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಅನಿ ಮಿನೇಜಸ್ ಅವರು ಇಲ್ಲಿ ಅವರು ಸರ್ವೇ ನಂಬರ್ ಹಾಕಿ ಮನವಿ ಕೊಟ್ಟಿದ್ದಾರೆ. ಆದರೂ ನೀವ್ಯಾಕೆ ಆ ಜಾಗದ ಬಗ್ಗೆ ನಿರ್ಣಯ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.


ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಮಾತನಾಡಿ, ಇವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಯಾರಾದರೂ ಗ್ರಾ.ಪಂ.ಗೆ ಮನವಿ ನೀಡಿದ್ದಾರೆಯೇ? ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವೇನಾದರೂ ಆಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅವರು, ಮನವಿ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ನಿರ್ಣಯ ಆಗಿಲ್ಲ. ನನಗೆ ಮಾತ್ರ ತಹಶೀಲ್ದಾರರು ತೆರವು ಕಾರ್ಯಾಚರಣೆ ಸಂದರ್ಭ ನಿಮ್ಮ ಉಪಸ್ಥಿತಿ ಬೇಕೆಂದು ಆದೇಶ ಮಾಡಿದ್ದರು. ಹಾಗಾಗಿ ತೆರವು ಕಾರ್ಯಾಚರಣೆ ಸಂದರ್ಭ ನಾನು ಅಲ್ಲಿಗೆ ಬಂದಿದ್ದೇನೆ. ತೆರವು ಕಾರ್ಯಾಚರಣೆ ಇದೆ ಎಂದು ಗ್ರಾ.ಪಂ. ಸದಸ್ಯರಿಗೆ ವಾಟ್ಸಫ್ ಮೂಲಕ ತಿಳಿಸಿದ್ದೇನೆ ಎಂದರು.


ಆಗ ಆಕ್ರೋಶಿತರಾದ ಸಂತ್ರಸ್ತ ಕುಟುಂಬಗಳು ನಾವು ತೆರವು ಕಾರ್ಯಾಚರಣೆ ಸಂದರ್ಭ ಗ್ರಾ.ಪಂ. ಅಧ್ಯಕ್ಷರಿಗೆ, ಸದಸ್ಯರಿಗೆ ಫೋನ್ ಮಾಡಿದ್ದೇವೆ. ಆದರೆ ಅವರು ನಮಗೆ ತೆರವಿನ ಬಗ್ಗೆ ವಿಷಯವೇ ಗೊತ್ತಿಲ್ಲ ಎಂದಿದ್ದಾರೆ ಎಂದರು. ಆಗ ಪ್ರತಿಭಟನಕಾರರು ಸಾರ್ವಜನಿಕರಿಗೆ ಸಮಸ್ಯೆಯಾದಾಗ ಸ್ಪಂದಿಸುವುದು ಗ್ರಾ.ಪಂ. ಸದಸ್ಯರ ಜವಾಬ್ದಾರಿ. ಆದರೆ ವಿಷಯ ಗೊತ್ತಾಗಿಯೂ ಯಾಕೆ ಗ್ರಾ.ಪಂ. ಸದಸ್ಯರು ತೆರವು ಕಾರ್ಯಾಚರಣೆ ಸಂದರ್ಭ ಸ್ಥಳಕ್ಕೆ ಬರಲಿಲ್ಲ. ಇಲ್ಲಿ ತೆರವು ಕಾರ್ಯಾಚರಣೆಯ ಹಿಂದೆ ಗ್ರಾ.ಪಂ. ಸದಸ್ಯರ ಒತ್ತಡವಿದೆ ಎಂದು ಆರೋಪ ವ್ಯಕ್ತಪಡಿಸಿದರಲ್ಲದೆ, ನಿವೇಶನ ರಹಿತ ಬಡವರನ್ನು ಎಬ್ಬಿಸುವ ಕಾರ್ಯ ಮಾಡಬೇಡಿ. ಇದೇ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲು ಕಂದಾಯ ಇಲಾಖೆಗೆ ಬರೆಯಿರಿ. ಅದು ಮಂಜೂರುಗೊಂಡ ಬಳಿಕ ಅಲ್ಲಿ ಈಗ ಯಾರದ್ದೆಲ್ಲಾ ಷೆಡ್‌ಗಳು ತೆರವಾಗಿದೆ ಅವರಿಗೆ ಮೊದಲ ಆದ್ಯತೆ ನೀಡಿ ನಿವೇಶನ ಹಂಚಬೇಕು ಎಂದರು. ಇದಕ್ಕೆ ಪಿಡಿಒ ಸಮ್ಮತಿ ಸೂಚಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.


ಪ್ರತಿಭಟನೆಯಲ್ಲಿ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಕಾರ್ಯದರ್ಶಿ ಕಲಂದರ್ ಶಾಫಿ, ಬೂತ್ ಕಾಂಗ್ರೆಸ್ ಅಧ್ಯಕ್ಷರಾದ ಇಸಾಕ್, ಹಮೀದ್ ಪಿ.ಟಿ., ಅಬ್ದುಲ್ ಖಾದರ್, ಸಂತ್ರಸ್ತ ಕುಟುಂಬಗಳ ಸದಸ್ಯರಾದ ಹರೀಶ, ಭವಾನಿ, ಉಷಾ, ವಿಶ್ವನಾಥ, ವಸಂತ, ರಂಜಿತ್ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here