ಪ್ರಸಕ್ತ ಸಾಲಿನಲ್ಲೇ ಕೊಯಿಲ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭ – 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

0

ವರದಿ: ಹರೀಶ್ ಬಾರಿಂಜ
ಪುತ್ತೂರು: ಕೊಯಿಲ ಗ್ರಾಮದ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ(ಕೊಯಿಲ ಫಾರ್ಮ್)ದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಪ್ರಸಕ್ತ ಸಾಲಿನಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.


ಫೆ.16ರಂದು ರಾಜ್ಯ ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡಿದ್ದಾರೆ. 15ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಕೊಯಿಲದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಪ್ರಸಕ್ತ ಸಾಲಿನಲ್ಲೇ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ್ದಾರೆ.

ಸಿದ್ದರಾಮಯ್ಯ ಅವರೇ ಶಿಲಾನ್ಯಾಸ ಮಾಡಿದ್ದರು:
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ(ಕೊಯಿಲ ಫಾರ್ಮ್)ದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 2016ರಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರೇ ಕೊಯಿಲಕ್ಕೆ ಬಂದು ಶಿಲಾನ್ಯಾಸ ನೆರವೇರಿಸಿದ್ದರು. ಶಿಲಾನ್ಯಾಸ ಆಗಿ ಈಗ 8 ವರ್ಷವಾದರೂ ಪಶುವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣವಾಗಿಲ್ಲ. ಈಗ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಪ್ರಸಕ್ತ ಸಾಲಿನಲ್ಲೇ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಪುತ್ತೂರು, ಕಡಬ ತಾಲೂಕಿನ ಜನರಲ್ಲಿ ಆಶಾಭಾವನೆ ಮೂಡಿಸಿದೆ.

ಪುತ್ತೂರಿನ ಮಾಜಿ ಶಾಸಕರು, ದ.ಕ.ದ ಮಾಜಿ ಸಂಸದರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲಿ, ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಘೋಷಣೆ ಮಾಡಿ 145 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದರೆ ಆರಂಭಿಕ ಪ್ರಕ್ರಿಯೆಗಳು ನಡೆದು ಕಾಮಗಾರಿ ಪ್ರಾರಂಭಿಸುವಾಗ ವರ್ಷ ಕಳೆದಿತ್ತು. ಆ ಬಳಿಕ ಮುಖ್ಯಮಂತ್ರಿಯಾಗಿ ಅಽಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು 2016ರಲ್ಲಿ ಕೊಲಕ್ಕೆ ಆಗಮಿಸಿ ಶಿಲಾನ್ಯಾಸ ನೆರವೇರಿಸಿ ಹೋಗಿದ್ದರು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೇ ಕಾಲೇಜು ಲೋಕಾರ್ಪಣೆ ಆಗಲಿದೆ ಎನ್ನುವ ಭರವಸೆ ಇದ್ದರೂ ಈಡೇರಲಿಲ್ಲ. ಆ ಬಳಿಕ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೂ ಕೊಯಿಲ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ. ಶಿಲಾನ್ಯಾಸ ನಡೆದು 8 ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕುಂಟುತ್ತಾ ಸಾಗಿ ವರ್ಷದ ಹಿಂದೆ ಇಲ್ಲಿನ ಮುಖ್ಯ ಕಟ್ಟಡಗಳ ಕಾಮಗಾರಿ ಮುಗಿದರೂ ಮೂಲಭೂತ ವ್ಯವಸ್ಥೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಬಾಕಿಯಾಗಿತ್ತು.

247 ಎಕ್ರೆ ಜಮೀನು ಹಸ್ತಾಂತರ:
ಕೊಯಿಲದಲ್ಲಿ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ(ಕೊಯಿಲ ಫಾರ್ಮ್)ಕ್ಕೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿ ಕೊಯಿಲದಲ್ಲಿ 1 ಸಾವಿರ ಎಕ್ರೆಗೂ ಹೆಚ್ಚು ವಿಶಾಲ ಜಾಗ ಇದೆ. ಇದರಲ್ಲಿ ಪಶುವೈದ್ಯಕೀಯ ಕಾಲೇಜಿಗೆ 247 ಎಕರೆ ಜಮೀನು ಹಸ್ತಾಂತರ ಆಗಿದೆ. ಪಶುವೈದ್ಯಕೀಯ ಕಾಲೇಜು ಅನ್ನು ಕೊಲದಿಂದ ತುಮಕೂರಿಗೆ ವರ್ಗಾಯಿಸುವ ತೆರೆಮರೆಯ ಪ್ರಯತ್ನವೂ ಒಮ್ಮೆ ನಡೆದಿತ್ತು. ಆದರೆ ಇದು ಈಡೇರಲಿಲ್ಲ. ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯಡಿ ಬೆಂಗಳೂರು, ಬೀದರ್, ಶಿವಮೊಗ್ಗ ಮತ್ತು ಹಾಸನದಲ್ಲಿ ಪಶು ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಕೊಯಿಲದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಸುಪರ್ದಿಯಲ್ಲಿದ್ದ 247 ಎಕರೆ ಜಮೀನನ್ನು ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರಿಗೆ ವರ್ಗಾಯಿಸಲಾಗಿದೆ.

103 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ಕಾಮಗಾರಿ
103 ಕೋಟಿ ರೂ.ವೆಚ್ಚದಲ್ಲಿ ಕೊಯಿಲ ಪಶುವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ನಡೆದಿದೆ. ಹುಡುಗರ ವಸತಿ ನಿಲಯ, ಹುಡುಗಿಯರ ವಸತಿ ನಿಲಯ, ಗೆಸ್ಟ್ ಹೌಸ್, ಕಾಲೇಜು, ಆಸ್ಪತ್ರೆ ಹೀಗೆ ಐದು ಸುಸಜ್ಜಿತ ಕಟ್ಟಡಗಳು ಇಲ್ಲಿ ನಿರ್ಮಾಣವಾಗಿವೆ ಎಂದು ಹೇಳಲಾಗಿದೆ. ಸ್ಟಾರ್ ಇನ್ರಾಟೆಕ್ ಎಂಬ ಸಂಸ್ಥೆ ಕಾಮಗಾರಿ ನಿರ್ವಹಿಸಿದೆ. ಇಲ್ಲಿನ ಮೂಲಭೂತ ವ್ಯವಸ್ಥೆಗಳಾದ ರಸ್ತೆ ನಿರ್ಮಾಣ, ಸಿಬ್ಬಂದಿಗಳ ವಸತಿ ಕಟ್ಟಡ ಇನ್ನಷ್ಟೇ ಆಗಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರಸಕ್ತ ಸಾಲಿನಲ್ಲೇ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಗೊಂಡಲ್ಲಿ ಶಿಲಾನ್ಯಾಸಗೈದು ಲೋಕಾರ್ಪಣೆಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲಲಿದೆ.

LEAVE A REPLY

Please enter your comment!
Please enter your name here