ರಾಮಕುಂಜ: ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥ-2024ಕ್ಕೆ ರಾಮಕುಂಜ ಗ್ರಾ.ಪಂ.ನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಆತೂರಿನಿಂದ ಗ್ರಾ.ಪಂ.ಕಚೇರಿ ತನಕ ಮೆರವಣಿಗೆ ನಡೆಯಿತು. ಗ್ರಾ.ಪಂ.ಗೆ ಆಗಮಿಸಿದ ಜಾಥಕ್ಕೆ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ., ಪಿಡಿಒ ಲಲಿತಾ, ಸದಸ್ಯರಾದ ಪ್ರಶಾಂತ್ ಆರ್.ಕೆ., ಸೂರಪ್ಪ ಕುಲಾಲ್, ಮಾಲತಿ ಕದ್ರ, ರೋಹಿಣಿ ಆನ, ಭಾರತಿ ಅವರು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.
ಡಾ| ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಅವರು, ದೇಶ ಎಲ್ಲಾ ರೀತಿಯಲ್ಲೂ ಪ್ರಗತಿ ಕಾಣಬೇಕು, ಎಲ್ಲಾ ಧರ್ಮಗಳು ಸಹಬಾಳ್ವೆಯಿಂದ ಬಾಳಬೇಕೆಂಬ ಉದ್ದೇಶವಿಟ್ಟುಕೊಂಡು ಡಾ| ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಡಾ| ಬಿ.ಆರ್.ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಯಾರೂ ಬಳಸಿಕೊಳ್ಳಬಾರದು. ಅವರು ರಚಿಸಿದ ಸಂವಿಧಾನದ ಆಶಯದಂತೆ ನಾವೆಲ್ಲರೂ ಬದುಕಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಲಕ್ಷ್ಮೀ ದೇವಿ, ರಾಮಕುಂಜ ಕ್ಲಸ್ಟರ್ ಸಿಆರ್ಪಿ ಮಹೇಶ್, ರಾಮಕುಂಜ ಗ್ರಾ.ಪಂ.ವ್ಯಾಪ್ತಿಯ ಶಾಲೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬಂದಿಗಳು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಿಡಿಒ ಲಲಿತಾ ಅವರು ಸ್ವಾಗತಿಸಿ, ಸಂವಿಧಾನ ಪೀಠಿಕೆ ವಾಚಿಸಿದರು.