ಒಡಿಯೂರು ಸಂಸ್ಥಾನದಲ್ಲಿ ಇರುವತ್ತನಾಲನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನದ ಉದಿಪನ

0

ಆನಂದದ ಸೆಲೆ ರಾಮನ ಆದರ್ಶದಲ್ಲಿದೆ – ಆತ್ಮ ರಾಮನ ಬಗೆಗಿನ ತಿಳುವಳಿಕೆ ಅಗತ್ಯ: ಒಡಿಯೂರು ಶ್ರೀ

ವಿಟ್ಲ: ಮಧ್ವ ನವಮಿಯ ಶುಭ ಸಂದರ್ಭದಲ್ಲಿ ನಾವಿಲ್ಲಿ ಸೇರಿದ್ದೇವೆ. ಆನಂದದ ಸೆಲೆ ರಾಮನ ಆದರ್ಶದಲ್ಲಿದೆ. ರಾಮನ ಬದುಕೆ ಆನಂದ. ಆತ್ಮ ರಾಮನ ಬಗೆಗಿನ ತಿಳುವಳಿಕೆ ಅಗತ್ಯ. ವಿಶ್ವವೇ ರಾಮಮಯವಾಗಿರುವ  ಹಿನ್ನೆಲೆಯಲ್ಲಿ ‘ಸಿರಿರಾಮೆ’ ಎನ್ನುವ ಹೆಸರನ್ನು ಈ ಭಾರಿಯ ತುಳು ಸಾಹಿತ್ಯ ಸಮ್ಮೇಳನ ಇಡಲಾಗಿದೆ. ಸನಾತನ ಹಿಂದೂ‌ಧರ್ಮಕ್ಕೆ ಇನ್ನೊಂದು ಹೆಸರು ಅಶ್ವತ. ತ್ಯಾಗ ಮತ್ತು ಸೇವೆ ರಾಷ್ಟ್ರೀಯ ಆದರ್ಶ. ಸೇವೆಗೆ ಇನ್ನೊಂದು ಹೆಸರು ಹನುಮಂತ. ತ್ಯಾಗ ಪೂರ್ಣ ಸೇವೆ ನಮ್ಮದಾಗಬೇಕು. ರಾಮಾಯಣ ಬದುಕಿನ‌ ಬೆಳಕು. ರಾಮಾಯಣ‌ ನಮ್ಮ ಜೀವನದ ದಾರಿದೀವಿಗೆಯಾಗಿದೆ‌ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ತಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ  ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ. 19ರ ವರೆಗೆ ನಡೆಯಲಿರುವ  ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಪ್ರಥಮ ದಿನವಾದ ಫೆ.18ರಂದು ಸಂಸ್ಥಾನದ ಆತ್ರೆಯ ಮಂಟಪದಲ್ಲಿ ನಡೆದ ಇಪ್ಪತ್ತನಾಲ್ಕನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. 

ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಡಾ.ವಸಂತಕುಮಾರ್ ಪೆರ್ಲರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿ ವರ್ಷ ಒಂದಲ್ಲ ಒಂದು ವಿಚಾರವನ್ನು ಇಟ್ಟುಕೊಂಡು ತುಳು ಭಾಷೆಯನ್ನು ಬೆಳೆಸುವ ಕೆಲಸ ತುಳು ಸಾಹಿತ್ಯ ಸಮ್ಮೇಳನದ ಮುಖಾಂತರ ಸಂಸ್ಥಾನದಿಂದ ಆಗುತ್ತಿದೆ. ಜಾನಪದ ಉಳಿದರೆ ಸಂಸ್ಲೃತಿ ಉಳಿಯುತ್ತದೆ ಎನ್ನುವ ದೂರದೃಷ್ಠಿಯನ್ನು ಇಟ್ಟುಕೊಂಡು ಶ್ರೀಗಳು ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಾ ಬರುತ್ತಿದ್ದಾರೆ ಎಂದರು.

ಯಕ್ಷಗಾನ ಕಲಾವಿದರು, ಸಾಹಿತಿ, ತಜ್ಞ ವೈದ್ಯರಾಗಿರುವ ಡಾ| ಭಾಸ್ಕರಾನಂದ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುಗುಳಿ ತಿರುಮಲೇಶ್ವರ ಭಟ್,ಕನ್ಯಾನ ಶ್ರೀ ದತ್ತಕೃಪಾ ಪೈನಾನ್ಸ್ ಕಾರ್ಪೊರೇಶನ್ ನ ಮಾಲಕರಾದ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ,  ಶ್ರೀ ಒಡಿಯೂರು ರಥೋತ್ಸವ ಸಮಿತಿ ಕೋಶಾಧಿಕಾರಿ ಎ.ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿ ಕೈಬರಹವನ್ನು ಒಳಗೊಂಡ ‘ ಆಧ್ಯಾತ್ಮ ರಾಮಾಯಣಾಂತರ್ಗತೊ ಸುಂದರಕಾಂಡ’ ಹಾಗೂ ಡಾ. ವಸಂತಕುಮಾರ್  ಪೆರ್ಲ ರವರು ಬರೆದ ‘ತೂಪರಿಕೆ’ ಪುಸ್ತಕ ಬಿಡುಗಡೆಗೊಂಡಿತು.

ರೇಣುಕಾ ಎಸ್. ರೈ ಪ್ರಾರ್ಥಿಸಿದರು.ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕರಾದ ಪಿ.ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here