ಕೌಡಿಚ್ಚಾರ್‌ : ಕಾರು ಪಲ್ಟಿ-ಅಪಾಯದಿಂದ ಪಾರು

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೌಡಿಚ್ಚಾರು ಎಂಬಲ್ಲಿ ಫೆ.19 ರಂದು ಮುಂಜಾವಿನ ವೇಳೆ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ. ಮಡಿಕೇರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ರಿಡ್ಜ್ ಕಾರು ಬೆಳಿಗ್ಗಿನ 3.30 ರ ಜಾವಕ್ಕೆ ಕೌಡಿಚ್ಚಾರು ಮುಖ್ಯರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಅಲ್ವಿನ್ ಡಿ’ಸೋಜಾ ಮತ್ತು ಕಾರ್ತಿಕ್ ಶೆಟ್ಟಿ ಕಾರಿನೊಳಗೆ ಸಿಲುಕಿಕೊಂಡಿದ್ದು ಈ ವೇಳೆ ಸ್ಥಳೀಯರೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಕಾರಿನೊಳಗಿದ್ದವರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.


ನಿರಂತರ ಅಪಘಾತ
ಮಡ್ಯಂಗಳದಿಂದ ಕೌಡಿಚ್ಚಾರು ಶೇಖಮಲೆ ಸೇತುವೆ ತನಕ ನಿರಂತರ ಅಪಘಾತ ನಡೆಯುತ್ತಲೇ ಇರುತ್ತದೆ. ವಾರದಲ್ಲಿ ಏನಿದ್ದರೂ ಎರಡರಿಂದ ಮೂರು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಕೌಡಿಚ್ಚಾರು ಜಂಕ್ಷನ್ ಬಳಿ ಪ್ರತಿ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಮಡ್ಯಂಗಳದಿಂದ ಶೇಖಮಲೆ ಸೇತುವೆ ತನಕ ಸುಮಾರು ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು ಅನೇಕ ಸಾವು ನೋವುಗಳು ಉಂಟಾಗಿದೆ.


ಸ್ಪೀಡ್ ಬ್ರೇಕರ್ ಅಳವಡಿಸಲು ಒತ್ತಾಯ
ಮಡ್ಯಂಗಳ ಮದಕ ಕರೆಯ ಬಳಿಯಿಂದ ಶೇಖಮಲೆ ಸೇತುವೆ ತನಕ ನಿರಂತರ ಅಪಘಾತ ಸಂಭವಿಸುತ್ತಿರುವುದರಿಂದ ಈ ಭಾಗದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆಯೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ. ವಾಹನ ಸವಾರರ ಅತೀಯಾದ ವೇಗದ ಚಾಲನೆ ಒಂದು ಕಡೆಯಲ್ಲಿ ಅಪಘಾತಕ್ಕೆ ಕಾರಣವಾಗಿದ್ದರೆ ಇನ್ನೊಂದು ಕಡೆಯಲ್ಲಿ ರಸ್ತೆಯ ಏರಿಳಿತದಿಂದಲೂ ಅಪಘಾತಗಳು ಸಂಭವಿಸುತ್ತಿವೆ ಎಂಬ ಮಾಹಿತಿಯೂ ಇದೆ. ಒಟ್ಟಿನಲ್ಲಿ ಅಪಘಾತವನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಲು ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.


20 ವರ್ಷ 30 ಕ್ಕೂ ಅಧಿಕ ಸಾವು ,ಇದೊಂದು ಸಾವಿನ ರಹದಾರಿ…!?
ಮಡ್ಯಂಗಳ ಕರೆಯ ಬಳಿಯಿಂದ ಕೌಡಿಚ್ಚಾರು ಸೇತುವೆ ತನಕದ ಈ ಅರ್ಧ ಕಿ.ಮೀ ವ್ಯಾಪ್ತಿಯ ರಸ್ತೆಯು ಇದೊಂದು ಸಾವಿನ ರಹದಾರಿಯಾಗಿದೆ. ಈ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದ ಇಲ್ಲಿಯ ತನಕ ಅಪಘಾತದಲ್ಲಿ ಜೀವ ಕಳೆದುಕೊಂಡವರು 30 ಕ್ಕೂ ಅಧಿಕ ಮಂದಿ. ಇತ್ತೀಚಿಗೆ ಬೈಕ್ ಸವಾರರೋರ್ವರಿಗೆ ಪಿಕ್‌ಅಪ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. 20 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಜೀಪೊಂದಕ್ಕೆ ಲಾರಿ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಮೃತಪಟ್ಟರೆ 3 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪುವ ಮೂಲಕ 11 ಜನರ ಸಾವಿಗೆ ಈ ಅಪಘಾತ ಕಾರಣವಾಗಿತ್ತು. ಇದಲ್ಲದೆ ಒಂದೆರಡು ವರ್ಷಗಳ ಹಿಂದೆ ಮಡ್ಯಂಗಳದ ಕರೆಯೊಂದಕ್ಕೆ ಕಾರೊಂದು ಬಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಹೀಗೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತದೆ. ಗಾಯಗೊಂಡವರದ್ದು ಲೆಕ್ಕವೇ ಇಲ್ಲ. ಪ್ರತಿನಿತ್ಯ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತದೆ.


ಪ್ರೇತಾತ್ಮದ ಕಾಟವೇ…!?
ಒಂದಲ್ಲ ಎರಡಲ್ಲೂ ನಿರಂತರ ಅಪಘಾತ ನಡೆಯುತ್ತಲೇ ಇರುತ್ತದೆ. ತಿಂಗಳಿಗೊಂದು ಭೀಕರ ಅಪಘಾತ ಸಂಭವಿಸುತ್ತಲೇ ಇರುತ್ತದೆ ಇದಕ್ಕೆಲ್ಲಾ ಏನು ಕಾರಣ…? ಇಲ್ಲೊಂದು ಪ್ರೇತಾತ್ಮ ಅಡ್ಡಾಡುತ್ತಿದೆಯೇ? ಈ ಪ್ರೇತಾತ್ಮವೇ ಇಲ್ಲಿ ಅಪಘಾತಗಳನ್ನು ನಡೆಸುತ್ತಿದೆಯಾ? ಎಂಬೊಂದು ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ. ಈ ಭಾಗದಲ್ಲಿ ನಡೆದ ಅಷ್ಠಮಂಗಳ ಪ್ರಶ್ನೆಯಲ್ಲೂ ಈ ಪ್ರದೇಶದಲ್ಲಿ ಪ್ರೇತಾತ್ಮವೊಂದು ಇದೆ, ಇದು ವಾಹನ ಸವಾರರಿಗೆ ಉಪದ್ರ ನೀಡುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಆ ಬಳಿಕ ಆ ಪ್ರೇತಾತ್ಮಕ್ಕೆ ಮೋಕ್ಷ ಕೊಡಿಸುವ ಕೆಲಸವೂ ನಡೆದಿದೆ ಎನ್ನಲಾಗಿದೆ. ಹೀಗಿದ್ದರೂ ಮತ್ತೆ ಮತ್ತೆ ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಲೇ ಇರುತ್ತದೆ. ಈ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದವರ ಪ್ರೇತಾತ್ಮಗಳು ಏನಾದರೂ ವಾಹನ ಸವಾರರಿಗೆ ತೊಂದರೆ ನೀಡುತ್ತಿರಬಹುದೇ ಹೀಗೊಂದು ಪ್ರಶ್ನೆ ಈ ಭಾಗದ ಜನರಲ್ಲಿ ಮೂಡಿದೆ. ಏನೇ ಆಗಲಿ ‘ ಹೀಗೂ ಉಂಟೇ..’ ಎನ್ನುವಷ್ಟರ ಮಟ್ಟಿಗೆ ಈ ಭಾಗದಲ್ಲಿ ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಿರುವುದು ಮಾತ್ರ ಸತ್ಯ.

‘ ಈ ಭಾಗದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಸುಮಾರು 30 ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್‌ನ ಅವಶ್ಯಕತೆ ತುಂಬಾ ಇದೆ. ತಕ್ಷಣವೇ ಹೆದ್ದಾರಿ ಪ್ರಾಧಿಕಾರದವರು ಹಾಗೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸ್ಪೀಡ್ ಬ್ರೇಕರ್ ಅಳವಡಿಸುವ ಮೂಲಕ ವಾಹನ ಸವಾರರ ಜೀವ ಉಳಿಸಬೇಕಾಗಿದೆ.’
ಸಚಿನ್ ಪಾಪೆಮಜಲು, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here