ಪುತ್ತೂರು: ಐಟಿ ಡೀಲರ್ ಅಸೋಸಿಯೇಶನ್‌ನ ಉದ್ಘಾಟನೆ

0

ಪುತ್ತೂರು: ಐಟಿ ಡೀಲರ್ ಅಸೋಸಿಯೇಶನ್ ಪುತ್ತೂರು ಇದರ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಪುತ್ತೂರು ದರ್ಬೆ ಸಚ್ಚಿದಾನಂದ ಸಭಾಭವನದಲ್ಲಿ ನಡೆಯಿತು.
ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಒಂದು ಉದ್ಯಮಿಗೆ ಸಂಘ ಯಾಕೆ ಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಮತ್ತು ಈ ಸಂಘವನ್ನು ವರ್ತಕರ ಸಂಘದಲ್ಲಿ ರಿಜಿಸ್ಟ್ರೇಷನ್ ಮಾಡುವಂತೆ ಮನವಿ ಮಾಡಿದರು.

ಯಾವುದೇ ಸಂಘದಲ್ಲಿ ಗುಂಪುಗಾರಿಕೆ ಇರುವುದು ಸಹಜ, ಆ ಗುಂಪುಗಾರಿಕೆಯನ್ನು ವಿಶ್ವಾಸಕ್ಕೆ ತಗೊಂಡು ನಿಮ್ಮ ನೂತನ ಆಡಳಿತ ಮಂಡಳಿಯು ಸದಸ್ಯರಿಗೆ ಬೇಕಾದ ಸರಕಾರದ ಯೋಜನೆಗಳನ್ನು ಮತ್ತು ನಿಮ್ಮಲ್ಲಿ ಒಗ್ಗಟ್ಟು ತರುವಲ್ಲಿ ಪ್ರಯತ್ನಿಸಲಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೃಷ್ಣ ಮೋಹನ್‌ರವರು ಸಂಘಟನೆಯಿಂದ ವೈಯಕ್ತಿಕವಾಗಿ ಆಗುವ ಲಾಭ ಬಗ್ಗೆ ಉದಾಹರಣೆ ಸಹಿತ ಮಾತನಾಡಿ ಸಂಘಟನೆಯ ದೂರ ದೃಷ್ಟಿಕೋನವನ್ನು ಮತ್ತು ವ್ಯವಹಾರಿಕವಾಗಿ ಹೇಗೆ ಬೆಳೆಯಲು ಸಾಧ್ಯ ಎಂಬುದರ ಬಗ್ಗೆ ತಿಳಿಸಿಕೊಟ್ಟು ಸಂಘದ ಸದಸ್ಯರಿಗೆ ಶುಭ ಹಾರೈಸಿದರು. ಗೌರವಾಧ್ಯಕ್ಷ ರಾಮ್ ಗಿರೀಶ್‌ರವರು ಮಾತನಾಡಿ, ಸಂಘದ ಸದಸ್ಯರು ಯಾವ ರೀತಿ ಉತ್ಪನ್ನವನ್ನು ಮಾರಾಟ ಮಾಡಬೇಕು ಮತ್ತು ಸೇವೆಯಿಂದ ಹೇಗೆ ಗ್ರಾಹಕರನ್ನು ಹಿಡಿದು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.


ಸಂಘದ ಸ್ಥಾಪಕಾಧ್ಯಕ್ಷ ಅನುಪ್ ಕೆಜೆ ಮಾತನಾಡಿ ಇಷ್ಟು ವರ್ಷಗಳಿಂದ ನಾವು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮನಸ್ಸಿನಲ್ಲಿ ಮನಸ್ತಾಪಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೆವು. ಇದು ಇವತ್ತಿಗೆ ಕೊನೆಯಾಗಿದೆ. ನಾವು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ನಮ್ಮ ನಮ್ಮೊಳಗಿರುವ ಒಡಕುಗಳನ್ನು ದೂರ ಮಾಡಿ ಸಂಘಟಿತರಾಗಿರೋಣ ಮತ್ತು ಸಂಘದ ಯಶಸ್ವಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.


ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಷನ್ ಸದಸ್ಯರುಗಳು ವ್ಯಾಪಾರದಲ್ಲಿ ಆಗುತ್ತಿರುವ ತೊಡಕುಗಳು, ಕುಂದು ಕೊರತೆಗಳು, ಆನ್ ಲೈನ್ ಸ್ಪರ್ಧೆ ಎದುರಿಸುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಕಂಪ್ಯೂಟರ್ ವ್ಯಾಪಾರಿಗಳ ಮಧ್ಯೆ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚಿಸಲಾಯಿತು. ನಾವು ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ದರವನ್ನು ನೀಡಿ ಗ್ರಾಹಕರು ಸೇವೆ ಪಡೆದುಕೊಳ್ಳುತ್ತಿರುವುದು ಈ ಸಂದರ್ಭ ಗಮನಕ್ಕೆ ಬಂದಿದ್ದು ನಿಗದಿ ಪಡಿಸಲಾದ ದರದಲ್ಲಿ ಮಾತ್ರವೇ ಸೇವೆ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.


ಇದೇ ಸಂದರ್ಭದಲ್ಲಿ ಪುತ್ತೂರು ಸೇರಿದಂತೆ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಐಟಿ ಡೀಲರ್ ಎಸೋಸಿಯೇಷನ್ ಸದಸ್ಯರು ಪ್ರಸ್ತುತ ದರವನ್ನು ನವೀಕರಿಸಿ ಒಂದು ನಿರ್ದಿಷ್ಟ ದರವನ್ನು ನಿಗದಿಪಡಿಸುವಲ್ಲಿ ಒಮ್ಮತದಿಂದ ನಿರ್ಣಯಕ್ಕೆ ಬಂದರು. ಐಟಿ ಡೀಲರ್ಸ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ, ಮುಖ್ಯ ಸಲಹೆಗಾರರಾಗಿ ರಾಮ್ ಗಿರೀಶ್, ಅಧ್ಯಕ್ಷರಾಗಿ ಅನೂಪ್ ಕೆ.ಜೆ., ಉಪಾಧ್ಯಕ್ಷರಾಗಿ ಸುದರ್ಶನ್ ರೈ ನೀರ್ಪಾಡಿ, ಕಾರ್ಯದರ್ಶಿಯಾಗಿ ಕಿಶೋರ್‌ಕುಮಾರ್, ಉಪ ಕಾರ್ಯದರ್ಶಿಯಾಗಿ ಚಿನ್ಮಯ ಕೃಷ್ಣ, ಖಜಾಂಚಿಯಾಗಿ ಶಿವಪ್ರಕಾಶ್‌ರವರನ್ನು ಸದಸ್ಯರುಗಳ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಕಿಶೋರ್ ಕುಮಾರ್ ಧನ್ಯವಾದಗೈದರು.


ಸಭಾ ಕಾರ್ಯಕ್ರಮದ ಬಳಿಕ ಧವಾ ಸಿಸಿಟಿವಿ ಕ್ಯಾಮೆರಾ ಇವರ ವತಿಯಿಂದ ತಮ್ಮ ಕಂಪನಿಯ ಉತ್ಪನ್ನಗಳಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನದ ಬಗ್ಗೆ ಮತ್ತು ಸರಬರಾಜುನ ಬಗ್ಗೆ ಮಾಹಿತಿಯನ್ನು ನೀಡಿ ತಮ್ಮ ಉತ್ಪನ್ನವನ್ನು ಬಳಸುವಂತೆ ಮನವಿ ಮಾಡಿದರು. ಆ ಬಳಿಕ ಸಂಘದ ವತಿಯಿಂದ ಸಂಗೀತ ಕಾರ್ಯಕ್ರಮದ ಜತೆಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here