ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಹಾಗೂ ಸಂತಕವಿ ಸರ್ವಜ್ಞ ಜಯಂತಿ ದಿನಾಚರಣೆಯು ಫೆ.20ರಂದು ತಾಲೂಕು ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಸ್ಮರಣಾ ಜ್ಯೋತಿ ಬೆಳಗಿಸಿದ ತಹಶೀಲ್ದಾರ್ ಪುರಂದರ ಮಾತನಾಡಿ, ಆದರ್ಶ ಪುರುಷರ ತತ್ತ್ವಾದರ್ಶಗಳು ಜೀವನಕ್ಕೆ ಮಾರ್ಗದರ್ಶವಾಗಬೇಕು. ಕಾರ್ಯ ಕ್ಷೇತ್ರಗಳ ಪರಿಮಿತಿಯಿಲ್ಲದೆ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕರ್ತವ್ಯವನ್ನು ಪಾಲನೆ ಮಾಡುತ್ತಾ, ಯುಕ್ತಿ ಹಾಗೂ ಶಕ್ತಿಯ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಡಾ. ಕೆ. ಚಂದ್ರಶೇಖರ ಮಾತನಾಡಿ, ಭಾರತದಲ್ಲಿ ಹಲವಾರು ಮಹಾನ್ ವೀರರು ಜನಿಸಿ, ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಶಿವಾಜಿ, ಸರ್ವಜ್ಞರಂತಹ ಉನ್ನತ ವ್ಯಕ್ತಿತ್ವದ ವ್ಯಕ್ತಿಗಳ ಜೀವನ ಬೋಧನೆಗಳನ್ನು ಜನಸಾಮಾನ್ಯರು ಅನುಸರಿಸಬೇಕು. ಆದರ್ಶ ವ್ಯಕ್ತಿಗಳ ದಾರಿಯಲ್ಲಿ ನಡೆದರೆ ಸಮಾಜ ಸುವ್ಯವಸ್ಥೆಯತ್ತ ಸಾಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಭಾರತ ಮತ್ತೆ ವಿಶ್ವಗುರುವಾಗಿ ಮೆರೆಯುದರಲ್ಲಿ ಎರಡು ಮಾತಿಲ್ಲ. ಪುಸ್ತಕದಿಂದ ದೂರ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ದಿನಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಜ್ಞಾನವನ್ನು ಸಂಪಾದಿಸುವ ಕೆಲಸಕ್ಕೆ ಯುವ ಜನಾಂಗ ಅಡಿಯಿಡಬೇಕು ಎಂದರು.
ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಮಾತನಾಡಿ, ಜೀವನದ ಮೌಲ್ಯಗಳು, ಆಡಳಿತ ವೈಖರಿ ಇವೆರಡನ್ನೂ ತಿಳಿಸಿಕೊಟ್ಟಿದ್ದಾರೆ. ಅದೆಲ್ಲವೂ ಇಂದಿನ ದಿನಕ್ಕೆ ಪ್ರಸ್ತುತ. ಮಹಾನ್ ವ್ಯಕ್ತಿಗಳ ದಿನಾಚರಣೆಗಳು ಯುವಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಕಛೇರಿಯ ದಯಾನಂದ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.