ಪುತ್ತೂರು:ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕೊಡುಗೈ ದಾನಿಯೂ ಆಗಿರುವ ಅಜಾತಶತ್ರು ಎಂದೆನಿಸಿಕೊಂಡಿರುವ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ 90ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳಿಂದ ಅಭಿನಂದನಾಪೂರ್ವಕವಾಗಿ ಸನ್ಮಾನಿಸುವ ‘ನವತಿ ಸಂಭ್ರಮ’ವು ಫೆ.24ರಂದು ಕೊಂಬೆಟ್ಟು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಫೆ.20ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೊಂದಿಗೆ ಸ್ನೇಹಮಯಿಯಾಗಿದ್ದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ 90ನೇ ಹುಟ್ಟು ಹಬ್ಬದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಅಭಿನಂದಿಸಲಾಗುವುದು. ಯಾವುದೇ ರಾಜಕೀಯ, ಧರ್ಮ, ಜಾತಿ ಬೇಧವಿಲ್ಲದೆ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಸನ್ಮಾನಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರಿನ ಮಾಜಿ ಶಾಸಕ ಜೆ.ಆರ್ ಲೋಬೋ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಬಳಿಕ ಪ್ರಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ತಂಡದವರಿಂದ ಗಾನ ವೈಭವ, ನಂತರ ಸಭಾ ಕಾರ್ಯಕ್ರಮ, ಸನ್ಮಾನ, ನಡೆದ ಬಳಿಕ ಮಧ್ಯಾಹ್ನ ಭೋಜನ ನಡೆಯಲಿದೆ ಎಂದು ಅವರು ತಿಳಿಸಿದರು.
ದತ್ತಿ ನಿಧಿ ಸ್ಥಾಪನೆ:
ಸನ್ಮಾನ ಕಾರ್ಯಕ್ರಮವನ್ನು ವೈಭವದಿಂದ ನಡೆಸಬಾರದು ಎಂಬುದು ಚಿಕ್ಕಪ್ಪ ನಾೖಕ್ ಹಾಗೂ ಅವರ ಮನೆಯ ಅಪೇಕ್ಷೆಯಿದೆ. ಹೀಗಾಗಿ ಮುಂದೆ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಲಾಗುವುದು ಎಂದು ಚಿಕ್ಕಪ್ಪ ನಾೖಕ್ ಅಭಿನಂದನಾ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು. ಚಿಕ್ಕಪ್ಪ ನಾೖಕ್ ಅವರ ಅಭಿಮಾನಿಗಳು ಹಾಗೂ ನಮ್ಮ ಸ್ನೇಹಿತರು ಸೇರಿಕೊಂಡು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಉಳಿಕೆಯಾದ ಹಣವನ್ನು ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಲಾಗುವುದು ಎಂದು ಸೀತಾರಾಮ ರೈ ತಿಳಿಸಿದರು.
ಅಭಿನಂದನಾ ಸಮಿತಿ ಕಾರ್ಯದರ್ಶಿ ಚಿಲ್ಮೆತ್ತಾರು ಜಗಜ್ಜೀವನ್‌ದಾಸ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.