ಸಮಯಾವಕಾಶ ಕೇಳಿದರೂ, ಡೆಪೋಸಿಟ್ ಹಣವಿದ್ದರೂ ಅಂಗಡಿ ಕೋಣೆ ಏಲಂ – ತಾ.ಪಂ ನಡವಳಿಕೆ ವಿರುದ್ಧ ರಾಜ್ ಬಪ್ಪಳಿಗೆ ಪತ್ರಿಕಾಗೋಷ್ಠಿ

0

ಪುತ್ತೂರು: ಪುತ್ತೂರು ತಾಲೂಕು ವಾಣಿಜ್ಯ ಸಂಕೀರ್ಣದಲ್ಲಿ ಒಂದು ಅಂಗಡಿಕೋಣೆಯನ್ನು ಏಲಂ ಪ್ರಕ್ರಿಯೆ ಮೂಲಕ ನನ್ನ ಪತ್ನಿ ಹೇಮಲತಾ ಹೆಸರಲ್ಲಿ ಪಡೆದುಕೊಂಡಿದ್ದು, ಕಳೆದ 13 ತಿಂಗಳಿನಿಂದ ಬಾಡಿಗೆ ಪಾವತಿಸಲು ತೊಂದರೆ ಉಂಟಾಗಿದೆ. 6 ತಿಂಗಳು ಸಮಯಾವಕಾಶ ಕೇಳಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೇನೆ. ಆದರೂ ಪುತ್ತೂರು ತಾಲೂಕು ಪಂಚಾಯತ್ ನನ್ನ ಕುಟುಂಬಕ್ಕೆ ಸೇರಿದ ಅಂಗಡಿಕೋಣೆಯನ್ನು ಬಹಿರಂಗ ಏಲಂ ಮಾಡಲಾಗಿದೆ. ಈ ಅಂಗಡಿ ಕೋಣೆಯಲ್ಲಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ನನ್ನ ವಸ್ತುಗಳನ್ನೂ ಏಲಂ ಮಾಡಲಾಗಿದೆ ಎಂದು ರಾಜ್ ಬಪ್ಪಳಿಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಅಂಗಡಿ ಕೋಣೆಯನ್ನು ಪಡೆದುಕೊಳ್ಳುವಾಗ ರೂ.1ಲಕ್ಷ ಡೆಪಾಸಿಟ್ ಮಾಡಲಾಗಿದೆ. 72 ಸಾವಿರ ರೂ. ಬಾಡಿಗೆ ಬಾಕಿಯಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಈ ಅಂಗಡಿಕೋಣೆಯನ್ನು ಏಲಂ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ:
2020 ಜುಲೈ ತಿಂಗಳಿನಿಂದ ಬಾಡಿಗೆದಾರರಾಗಿರುವ ಹೇಮಲತಾ ಅವರು ಬಾಡಿಗೆ ಪಾವತಿ ಮಾಡಿಲ್ಲ. ಪ್ರತೀ ತಿಂಗಳ 10 ತಾರೀಕಿನ ಒಳಗೆ ಬಾಡಿಗೆ ಪಾವತಿ ಮಾಡಬೇಕು. ಆದರೂ ಸುಮಾರು 9 ತಿಂಗಳು ಬಾಡಿಗೆ ಪಾವತಿ ಮಾಡುತ್ತಾರೆ ಎಂದು ಅವಕಾಶ ನೀಡಲಾಗಿತ್ತು. ಆದರೆ ಅವರು ಬಾಡಿಗೆ ಪಾವತಿ ಮಾಡಿಲ್ಲ. ತಾ.ಪಂ ನೋಟೀಸು ನೀಡಿದರೂ ಅದಕ್ಕೆ ಸ್ಪಂದನೆ ಮಾಡಿಲ್ಲ. ಡೆಪಾಸಿಟ್ ಮಾಡಿರುವುದು ಕೇವಲ ಬಾಡಿಗೆ ಮುರಿದುಕೊಳ್ಳುವ ದೃಷ್ಟಿಯಿಂದಲ್ಲ. ಬಾಡಿಗೆಗೂ ಭದ್ರತಾ ಡೆಪಾಸಿಟಿಗೂ ಯಾವುದೇ ಸಂಬಂಧ ಇಲ್ಲ. ಏಲಂನಲ್ಲಿ ಅಂಗಡಿ ಪಡೆದುಕೊಂಡ ಪೂರ್ಣ ಅವಧಿಯಲ್ಲಿ ಬಾಡಿಗೆ ಪಾವತಿ ಮಾಡಿ ಮತ್ತೆ ಏಲಂನಲ್ಲಿ ಅಂಗಡಿ ಕೋಣೆ ಪಡೆದುಕೊಳ್ಳದಿದ್ದರೆ, ಡೆಪಾಸಿಟ್ ಹಣವನ್ನು ಪೂರ್ತಿಯಾಗಿ ಅವರಿಗೆ ವಾಪಾಸು ಮಾಡಲಾಗುವುದು. ನಾವು ಕಾನೂನು ಪ್ರಕಾರವೇ ಎಲ್ಲವನ್ನೂ ಮಾಡಿದ್ದೇವೆ. 3 ಬಾರಿ ನೋಟೀಸು ನೀಡಿದ್ದೇವೆ. ಹಣ ಪಾವತಿಗಾಗಿ ಬೇಕಾದಷ್ಟು ಸಮಯವನ್ನೂ ಕೊಟ್ಟಿದ್ದೇವೆ. ಆದರೆ ಅವರು ಸ್ಪಂಧಿಸಿಲ್ಲ. ಹಾಗಾಗಿ ನಿಯಮ ಪ್ರಕಾರ ಅಂಗಡಿಕೋಣೆ ಏಲಂ ಮಾಡಿದ್ದೇವೆ. ಅವರ ವಸ್ತುಗಳನ್ನು ಪಡೆದುಕೊಳ್ಳಲು ನೋಟೀಸು ನೀಡಿದ್ದೇವೆ. ಅವರು ಬಂದಿಲ್ಲ. ಹಾಗಾಗಿ ಸುಮಾರು ರೂ. 7ಸಾವಿರ ಮೌಲ್ಯದ ಅವರ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಗಿದೆ. ಒಂದು ವೇಳೆ ತಾ.ಪಂ ತಪ್ಪು ಮಾಡಿದ್ದಾರೆ ಎಂದೆನಿಸಿದರೆ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here