ಬೆಟ್ಟಂಪಾಡಿ: ಇರ್ದೆ ಗ್ರಾಮದ ಬಾಳೆಹಿತ್ಲು ತರವಾಡು ಕುಟುಂಬದ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವವು ಫೆ.17 ಮತ್ತು 18ರಂದು ಬಾಳೆಹಿತ್ಲು ತರವಾಡು ಮನೆಯಲ್ಲಿ ಜರಗಿತು. ಫೆ.17ರಂದು ಬೆಳಿಗ್ಗೆ ಗಣಪತಿ ಹೋಮ, ಮುಡಿಪು ಪೂಜೆ, ಸಂಜೆ ಶ್ರೀದೈವಗಳ ಭಂಡಾರ ತೆಗೆಯುವುದು, ರಾತ್ರಿ ಗುಳಿಗ ದೈವಗಳ ನೇಮೋತ್ಸವ ನಡೆದು ಅನ್ನ ಸಂತರ್ಪಣೆ ನಡೆಯಿತು.
ಬಳಿಕ ಪೊಸವಳಿಕೆತ್ತಾಯ ದೈವದ ನೇಮ ಮತ್ತು ಸಹಪರಿವಾರ ದೈವಗಳಾದ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು. ಫೆ.18ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಿತು. ಕುಟುಂಬದ ಯಜಮಾನ ಜತ್ತಪ್ಪ ಗೌಡ ಹಾಗೂ ಬಾಳೆಹಿತ್ಲು ತರವಾಡು ಮನೆ ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷ ರವಿಪ್ರಕಾಶ್ ಬಾಳೆಹಿತ್ಲು, ಉಪಾಧ್ಯಕ್ಷ ಹುಕ್ರಪ್ಪ ಗೌಡ ಪಂಜೊಟ್ಟು, ಕಾರ್ಯದರ್ಶಿ ಆನಂದ ಗೌಡ ಅರಂಬ್ಯ, ಕೋಶಾಧಿಕಾರಿ ರಾಜೇಶ್ ಮೇರ್ವೆ, ಖಜಾಂಜಿ ಧನ್ಯರಾಜ್ ಬಾಳೆಹಿತ್ಲು ಹಾಗೂ ಬಾಳೆಹಿತ್ಲು ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಸ್ಥಳೀಯ ಮನೆತನಗಳ ಪ್ರಮುಖರು, ಧಾರ್ಮಿಕ ಕೇಂದ್ರಗಳ ಮುಖಂಡರು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.