ಅಕ್ಷಯ್ ಕಲ್ಲೇಗ ಮರ್ಡರ್‌ಗೆ ರಿವೇಂಜ್‌ಗೆ ಸಂಚು-ಆರೋಪಿಯ ಸಹೋದರನಿಗೆ ಕೊಲೆ ಬೆದರಿಕೆ ಕರೆ-ದೂರುದಾರ, ಆರೋಪಿ ಕಡೆಯವರ ವಿಚಾರಣೆ

0

ಪುತ್ತೂರು: ಕೆಲ ಸಮಯದ ಹಿಂದೆ ನೆಹರೂನಗರದಲ್ಲಿ ನಡೆದಿದ್ದ, ಕಲ್ಲೇಗ ಟೈಗರ‍್ಸ್ ತಂಡದ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಿವೇಂಜ್ ಮರ್ಡರ್‌ಗೆ ಸಂಚು ರೂಪಿಸಿದ್ದ ಮಾಹಿತಿಯರಿತು ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತ ನಾಲ್ವರು ಆರೋಪಿಗಳನ್ನು ತಲ್ವಾರ್ ಸಮೇತ ಬಂಧಿಸಿ, ಸಂಭಾವ್ಯ ದುಷ್ಕೃತ್ಯವನ್ನು ತಡೆದಿದ್ದಾರೆ. ಆರೋಪಿಗಳು ಸೆರೆಯಾಗುವ ಮೊದಲೇ, ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಯೋರ್ವನ ಸಹೋದರನಾಗಿರುವ ಸ್ಟುಡಿಯೋ ಮಾಲಕನಿಗೆ ಕೊಲೆ ಬೆದರಿಕೆಯೊಡ್ಡಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ತನಗೆ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ದೂರು ನೀಡಿರುವ ಸ್ಟುಡಿಯೋ ಮಾಲಕ ಮನೋಜ್ ಹಾಗೂ ಕಾರಲ್ಲಿ ತಲ್ವಾರ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಆರೋಪಿಗಳಾದ ಬಂಟ್ವಾಳ ಗೋಳ್ತಮಜಲು ನಿವಾಸಿ ಕಿಶೋರ್ ಕಲ್ಲಡ್ಕ (36ವ), ಕಬಕದ ಮನೋಜ್ (23ವ), ಪುತ್ತೂರಿನ ಆಶಿಕ್ (28ವ), ಪಡ್ನೂರು ನಿವಾಸಿ ಸನತ್ ಕುಮಾರ್ (24ವ)ರವರುಗಳ ಪೈಕಿ ಬೆದರಿಕೆ ಕರೆ ಮಾಡಿರುವ ಆರೋಪಿ ಕಿಶೋರ್ ಕಲ್ಲಡ್ಕ ಅವರ ತಾಯಿ, ಮನೆಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದು ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ.ಅವರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತನಗೆ ಬೆದರಿಕೆ ಕರೆ ಬಂದಿರುವುದಾಗಿ ದೂರು ನೀಡಿರುವ ಮನೋಜ್ ಅವರ ಸಹೋದರ ಮನೀಷ್ ಅವರು ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಯಾಗಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಕೊಲೆಯ ವಿಚಾರಕ್ಕೆ ಸಂಬಂಧಿಸಿಯೇ ಮನೋಜ್ ಅವರಿಗೆ ಕೊಲೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪುತ್ತೂರು ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಸತೀಶ್ ಜಿ.ಜೆ. ಸಿಬ್ಬಂದಿಗಳೊಂದಿಗೆ, ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರೊಂದನ್ನು ಪರಿಶೀಲಿಸಿದಾಗ, ಸದ್ರಿ ಕಾರಿನಲ್ಲಿ ಒಂದು ತಲವಾರು ಪತ್ತೆಯಾಗಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಹಾಗೂ ಕಾನೂನು ಕ್ರಮಕ್ಕಾಗಿ ಕಾರಿನಲ್ಲಿದ್ದ ಬಂಟ್ವಾಳ ಗೋಳ್ತಮಜಲು ನಿವಾಸಿ ಕಿಶೋರ್ (36ವ),ಕಬಕ ನಿವಾಸಿ ಮನೋಜ್ (23ವ), ಪುತ್ತೂರು ನಿವಾಸಿ ಆಶಿಕ್ (28ವ) ಮತ್ತು ಪಡ್ನೂರು ನಿವಾಸಿ ಸನತ್ ಕುಮಾರ್ (24ವ)ಎಂಬವರುಗಳನ್ನು ವಶಕ್ಕೆ ಪಡೆದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳನ್ನು ಫೆ.20ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ರಿವೇಂಜ್ ಮರ್ಡರ್‌ಗೆ ಸ್ಕೆಚ್ ?:
ಎರಡೂವರೆ ವರ್ಷದ ಹಿಂದೆ ಸಂಪ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚರಣ್‌ರಾಜ್ ರೈ(29ವ)ಯವರನ್ನು ಪೆರ್ಲಂಪಾಡಿಯಲ್ಲಿ ಉದ್ಘಾಟನೆಯಾಗಲಿದ್ದ ಅವರ ಮೆಡಿಕಲ್ ಶಾಪ್‌ನ ಎದುರೇ ರಸ್ತೆ ಬದಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ರೌಡಿಶೀಟರ್ ಕಿಶೋರ್ ಕುಮಾರ್ ಕಲ್ಲಡ್ಕ ಹಾಗೂ ಇತರರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ರಿವೇಂಜ್ ಮರ್ಡರ್ ಬಳಿಕ ಆರೋಪಿ ಕಿಶೋರ್ ಕುಮಾರ್, ಅಕ್ಷಯ್ ಕೊಲೆ ಪ್ರಕರಣದ ಆರೋಪಿ ಮನೀಷ್ ಸಹೋದರ ಛಾಯಾಗ್ರಾಹಕ ಮನೋಜ್ ಅವರಿಗೆ ಬೆದರಿಕೆ ಕರೆ ಮಾಡಿರುವುದು ಮತ್ತು ಕಿಶೋರ್ ಸಹಿತ ನಾಲ್ವರಿದ್ದ ಕಾರಿನಲ್ಲಿ ತಲ್ವಾರ್ ಪತ್ತೆಯಾಗಿ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿರುವುದು ರಿವೆಂಜ್ ಮರ್ಡರ್‌ನ ಭೀತಿ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here