ಅಣಬೆ ಇದೆಯೆಂದು ಗುಡ್ಡೆಗೆ ಕರೆಸಿ ಮಹಿಳೆಯರಿಬ್ಬರಿಗೆ ಹಲ್ಲೆ-ಚಿನ್ನಾಭರಣ ದರೋಡೆಗೆ ಯತ್ನ-ಆರೋಪಿಗೆ ಜಾಮೀನು

0

ಪುತ್ತೂರು: ಅಣಬೆ ಇದೆಯೆಂದು ಮಹಿಳೆಯರಿಬ್ಬರನ್ನು ತೋಟದ ಗುಡ್ಡೆಗೆ ಕರೆಸಿ ಹಲ್ಲೆ ನಡೆಸಿ ಹಣ,ಚಿನ್ನಾಭರಣ ದರೋಡೆಗೆ ಯತ್ನಿಸಿದ್ದ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ವ್ಯಕ್ತಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪಡುವನ್ನೂರು ಗ್ರಾಮದ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ನೇರೋಳ್ತಡ್ಕ ಎಂಬಲ್ಲಿ 2023ರ ಆ.22ರಂದು ಘಟನೆ ನಡೆದಿತ್ತು.ನೇರೋಳ್ತಡ್ಕ ನಿವಾಸಿ ಸುರೇಖ(58ವ) ಮತ್ತು ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಗೋಳಿತ್ತೊಟ್ಟು ನಿವಾಸಿ ಗಿರಿಜಾ(೫೨ವ)ರವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದ್ದ ಆರೋಪದಲ್ಲಿ ಸುರೇಶ್ ನಾಯ್ಕ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ತಾನು 9 ವರ್ಷಗಳಿಂದ ಚಿಕ್ಕಮ್ಮ ಸುರೇಖಾ ಅವರನ್ನು ನೋಡಿಕೊಂಡು ಅವರೊಟ್ಟಿಗೆ ವಾಸವಾಗಿದ್ದು ಆ.22ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಚಿಕ್ಕಮ್ಮನ ಮೊಬೈಲ್ ಫೋನ್ ಮನೆಯ ಸಿಟೌಟ್‌ನಲ್ಲಿ ರಿಂಗಣಿಸುತ್ತಿತ್ತು.ತಾನು ಕರೆ ಸ್ವೀಕರಿಸಿದಾಗ,ನೆರೆ ಮನೆಯ ಗಂಗಾಧರ ಎಂಬವರು ಮಾಡಿದ ಕರೆಯಾಗಿದ್ದು, ನಿಮ್ಮ ತೋಟದಲ್ಲಿ ಇಬ್ಬರು ಹೆಂಗಸರು ಬಿದ್ದಿದ್ದು ನಾಯಿಗಳು ಬೊಗಳುತ್ತಿವೆ ಎಂದು ಅವರು ತಿಳಿಸಿದ್ದರು.ಕೂಡಲೇ ನಾನು ತೋಟದ ಕಡೆಗೆ ಓಡಿಕೊಂಡು ಹೋಗುತ್ತಿದ್ದ ಸಂದರ್ಭ, ತಮ್ಮ ಮನೆಗೆ ಕೆಲವೊಮ್ಮೆ ಕೆಲಸಕ್ಕೆ ಬರುತ್ತಿದ್ದ ಸುರೇಶ್ ನಾಯ್ಕ ಎಂಬಾತ ಬರುತ್ತಿರುವುದನ್ನು ನೋಡಿದ್ದೆ,ತಾನು ತೋಟಕ್ಕೆ ಹೋಗಿ ನೋಡಿದಾಗ ಚಿಕ್ಕಮ್ಮ ಸುರೇಖಾ ಮತ್ತು ಕೆಲಸದಾಳು ಗಿರಿಜಾರವರ ಕುತ್ತಿಗೆಯನ್ನು ಬೈರಾಸ್‌ನಿಂದ ಬಿಗಿಯಾಗಿ ಕಟ್ಟಲಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.

ಗಿರಿಜಾ ಅವರ ಮುಖಕ್ಕೆ, ಎರಡೂ ಕಣ್ಣಿನ ಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಎಡ ಕಿವಿಯ ಒಡವೆಯನ್ನು ಕಿತ್ತು ಕಿವಿಯು ಹರಿದ ರೀತಿಯಲ್ಲಿ ಹಾಗೂ ಚಿಕ್ಕಮ್ಮನ ಮುಖಕ್ಕೆ, ಎರಡೂ ಕಣ್ಣಿನ ಭಾಗಕ್ಕೆ ಗಾಯವಾಗಿತ್ತು.ಅವರೀರ್ವರನ್ನೂ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಎಚ್ಚರವಾದ ಚಿಕ್ಕಮ್ಮ ಸುರೇಖಾ ಅವರಲ್ಲಿ ಘಟನೆ ಕುರಿತು ವಿಚಾರಿಸಿದಾಗ, ಆರೋಪಿ ಸುರೇಶ್ ನಾಯ್ಕ ಎಂಬಾತ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚುವ ಉzಶದಿಂದ ಈ ಕೃತ್ಯವೆಸಗಿ ಹಣ ಮತ್ತು ಚಿನ್ನಾಭರಣಗಳ ಕುರಿತು ವಿಚಾರಿಸಿ, ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದರುೞ ಎಂದು ಸುರೇಖಾ ಅವರ ಚಿಕ್ಕಮ್ಮನ ಮಗ ರವಿಚಂದ್ರ ಎಂಬವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಚಿನ್ನಾಭರಣ ದರೋಡಗೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.ಮೂಲತ: ಮಡಿಕೇರಿ ನಿವಾಸಿಯಾಗಿದ್ದು ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಆರೋಪಿ ಸುರೇಶ್ ನಾಯ್ಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ಮೋಹಿನಿ ವಾದಿಸಿದ್ದರು.

LEAVE A REPLY

Please enter your comment!
Please enter your name here