ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ

0

ಎಸ್.ಕೆ.ಜಿ.ಐ. ಸೊಸೈಟಿಯ ವಜ್ರ ಮಹೋತ್ಸವ ಅಂಗವಾಗಿ ಕೊಡುಗೆಯಾಗಿ ನೀಡಿದ ಸ್ಟೈನ್’ಲೆಸ್ ಸ್ಟೀಲ್ ಸಿಂಕ್ ಉದ್ಘಾಟನೆ

ಪುತ್ತೂರು: ಬೊಳುವಾರು ವಿಶ್ವಕರ್ಮ ಸಭಾಭವನಕ್ಕೆ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸ್ಟೈನ್’ಲೆಸ್ ಸ್ಟೀಲ್ ಸಿಂಕ್’ನ ಉದ್ಘಾಟನೆ ಹಾಗೂ ಸ್ಥಳಾಂತರಗೊಂಡ ತುಳಸಿ ಕಟ್ಟೆಯ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 24ರಂದು ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ಸೊಸೈಟಿ ಇಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಈ ವರ್ಷ ವಿಶೇಷವಾಗಿ 60 ಕಾರ್ಯಕ್ರಮ ಮಾಡಬೇಕು ಎಂಬ ಯೋಜನೆ ಇದೆ. ಅದರಲ್ಲಿ ಗ್ರಾಹಕರ ಸಮಾವೇಶ ಏರ್ಪಡಿಸಬೇಕು ಎಂಬ ಆಲೋಚನೆ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರದ್ದು. ಸಾಮಾಜಿಕ ಕಳಕಳಿಯ ಕಾರಣಕ್ಕೆ ಫಾಲ್ಕೆ ಬಾಬುರಾವ್ ಆಚಾರ್ಯ ಅವರು 1964ರಲ್ಲಿ ಸೊಸೈಟಿ ಹುಟ್ಟಿಕೊಂಡಿತು. ಇಂತಹ ಸಂಸ್ಥೆ ಇಂದು ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಇಂದು ವಿಶ್ವಬ್ರಾಹ್ಮಣ ಸೇವಾ ಸಂಘದ ಮನವಿ ಮೇರೆಗೆ ಸ್ಟೈನ್’ಲೆಸ್ ಸ್ಟೀಲ್ ಸಿಂಕ್ ಅನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಕೆ. ಮಾತನಾಡಿ, ಸಮಿತಿ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯುತ್ತಿದ್ದೇವೆ. ಮಾಜಿ ಶಾಸಕ ಸಂಜೀವ ಮಠಂದೂರು ನೀಡಿದ ಅನುದಾನದಲ್ಲಿ ಪಾಕಶಾಲೆ, ಕಚೇರಿ ಮೊದಲಾದ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಇದೀಗ ವಾಸ್ತುಪ್ರಕಾರವಾಗಿ ತುಳಸಿಕಟ್ಟೆಯನ್ನು ಸ್ಥಳಾಂತರಿಸಿ, ಪ್ರತಿಷ್ಠಾಪನೆ ಮಾಡಲಾಗಿದೆ. 1.5 ಲಕ್ಷ ರೂ.ನಲ್ಲಿ ಸ್ಟೈನ್’ಲೆಸ್ ಸ್ಟೀಲ್ ಸಿಂಕ್ ಅನ್ನು ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಕೊಡುಗೆಯಾಗಿ ನೀಡಿದ್ದು, ಇಂದು ಉದ್ಘಾಟನೆಗೊಂಡಿದೆ. ಮುಂದೆ ವೇದಿಕೆ ನವೀಕರಣ, ಪಾರ್ಕಿಂಗ್ ವ್ಯವಸ್ಥೆಗಳು ಆಗಬೇಕಿದೆ ಎಂದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಅಣ್ಣಿ ಆಚಾರ್ಯ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಶಶಿಕಾಂತ ಆಚಾರ್ಯ ಶುಭ ಹಾರೈಸಿದರು.ಸಂಸ್ಥೆಯ ಪರವಾಗಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಅವರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಆನೆಗುಂದಿ ಗುರುಸೇವಾ ಪರಿಷತ್ ಪುತ್ತೂರು ವಲಯ ಅಧ್ಯಕ್ಷ ವಿ. ಪುರುಷೋತ್ತಮ್ ಆಚಾರ್ಯ, ಎಸ್.ಕೆ.ಜಿ.ಐ. ಸೊಸೈಟಿಯ ಪುತ್ತೂರು ಶಾಖಾ ಪ್ರಬಂಧಕಿ ಉಷಾ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ್ ಉಪಸ್ಥಿತರಿದ್ದರು.

ಶ್ರೀನಿವಾಸ ಆಚಾರ್ಯ ಪ್ರಾರ್ಥಿಸಿ, ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ಕಿಶನ್ ಬಿ.ವಿ. ವಂದಿಸಿ, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದರು.

ತುಳಸಿ ಕಟ್ಟೆ ಪ್ರತಿಷ್ಠೆ:
ಸ್ಥಳಾಂತರಗೊಂಡು ಪ್ರತಿಷ್ಠಾಪನೆಗೊಂಡ ತುಳಸಿ ಕಟ್ಟೆಯ ಧಾರ್ಮಿಕ ಕಾರ್ಯಕ್ರಮವನ್ನು ಗೇರುಕಟ್ಟೆ ರಮೇಶ್ ಪುರೋಹಿತ್ ನಡೆಸಿಕೊಟ್ಟರು. ಕೆ. ಕೃಷ್ಣ ಆಚಾರ್ಯ ಹಾಗೂ ಬೇಬಿ ಕೆ. ಆಚಾರ್ಯ ದಂಪತಿ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here