ಮೊಟ್ಟೆತ್ತಡ್ಕ ಕೆಮ್ಮಿಂಜೆ ವಿನಾಯಕ ಸ್ಪೋರ್ಟ್ಸ್ ಕ್ಲಬ್, ವಿನಾಯಕ ಯುವಕ ವೃಂದದಿಂದ ಪುರುಷರ ಕಬಡ್ಡಿ ಪಂದ್ಯಾಟ “ವಿನಾಯಕ ಟ್ರೋಫಿ-2024” ಉದ್ಘಾಟನೆ

0

ಇಲ್ಲಿನ ಯುವಕರು ನಿಯತ್ತಿನಿಂದ, ಶಿಸ್ತುಬದ್ಧವಾಗಿ ಕೆಲಸ ಮಾಡುವವರು-ರವೀಂದ್ರ ಶೆಟ್ಟಿ ನುಳಿಯಾಲು
ಕಬಡ್ಡಿ ಆಟವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ-ಚಂದ್ರಹಾಸ ಶೆಟ್ಟಿ

ಪುತ್ತೂರು: ಇಲ್ಲಿನ ಯುವಕರು ನಿಯತ್ತಿನ ಯುವಕರು ಎಂದು ಯಾವಾಗಲೂ ನಾನು ಹೇಳುತ್ತಿದ್ದೇನೆ. ಯಾವುದೇ ಅಪೇಕ್ಷೆ ಪಡೆಯದೆ ನಿಯತ್ತಿನಿಂದ, ಶಿಸ್ತುಬದ್ಧವಾಗಿ ಕೆಲಸ ಮಾಡುವವರು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಹೇಳಿದರು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಮೊಟ್ಟೆತ್ತಡ್ಕ ಕೆಮ್ಮಿಂಜೆ ವಿನಾಯಕ ಸ್ಪೋರ್ಟ್ಸ್ ಕ್ಲಬ್, ಮೊಟ್ಟೆತ್ತಡ್ಕ ಕೆಮ್ಮಿಂಜೆ ವಿನಾಯಕ ಯುವಕ ವೃಂದದ ಆಶ್ರಯದಲ್ಲಿ ಫೆ.24 ರಂದು ಸಂಜೆ ಕೆಮ್ಮಿಂಜೆ ಮಾತೃಶ್ರಿ ವೇದಿಕೆ ಮೈದಾನದಲ್ಲಿ ನಡೆದ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್, ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಕೆಮ್ಮಿಂಜೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮ್ಯಾಟ್ ಅಂಕಣದ ಹೊನಲು ಬೆಳಕಿನ ಪುರುಷರ ಮುಕ್ತ 55ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ “ವಿನಾಯಕ ಟ್ರೋಫಿ-2024” ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಯುವಕರು ಇದೇ ಮೊದಲಲ್ಲ ಇಲ್ಲಿ ಕಾರ್ಯಕ್ರಮ ಮಾಡೋದು. ಹಿಂದೆ ಗಣೇಶೋತ್ಸವ ಸಂದರ್ಭದಲ್ಲಿ ಇಲ್ಲಿಯೇ ಗಣಪನ ಮೂರ್ತಿ ತಯಾರಿಸಿ ವಿಜ್ರಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಿದವರಾಗಿದ್ದಾರೆ. ಇದೀಗ ಈ ಕ್ಷೇತ್ರದಲ್ಲಿ ಕೊರಗಜ್ಜನ ಸನ್ನಿಧಾನ ನೆಲೆ ನಿಂತು ಪ್ರಸ್ತುತ ಈ ಕ್ಷೇತ್ರವು ಕಾರಣಿಕ ಸ್ಥಳವಾಗಿ ಮಾರ್ಪಟ್ಟಿದೆ. ಈ ಮಣ್ಣಾಪು ಕ್ಷೇತ್ರಕ್ಕೆ ಎಲ್ಲಾ ಭಕ್ತರಿಂದ ಉತ್ತಮ ಪ್ರಶಂಸನೀಯ ಮಾತುಗಳು ವ್ಯಕ್ತವಾಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.

ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಹಾಗೂ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ತೆಂಗಿನಕಾಯಿ ಒಡೆಯುವ ಮೂಲಕ ಕಬಡ್ಡಿ ಅಂಕಣವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಆಟವಾದ ಕಬಡ್ಡಿ ಇಂದು ಪ್ರಗತಿ ಹೊಂದಿದರೂ ಆಟಗಾರರು ಮಾತ್ರ ಸೂಕ್ತ ಸಮಯಕ್ಕೆ ಬಾರದಿರುವುದು ವಿಷಾಧನೀಯ ಸಂಗತಿಯಾಗಿದೆ. ಇಂದು ಕಬಡ್ಡಿ ಆಟವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರೀಡೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು. ಉದ್ಯಮಿ ರಫೀಕ್ ಎಂ.ಕೆ ಸಹಿತ ಮೊಟ್ಟೆತ್ತಡ್ಕ ಕೆಮ್ಮಿಂಜೆ ವಿನಾಯಕ ಸ್ಪೋರ್ಟ್ಸ್ ಕ್ಲಬ್, ಮೊಟ್ಟೆತ್ತಡ್ಕ ಕೆಮ್ಮಿಂಜೆ ವಿನಾಯಕ ಯುವಕ ವೃಂದದ ಸದಸ್ಯರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಗರ್ ಬೆಳ್ಳಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ= ರೂ.7777/-, ದ್ವಿತೀಯ=ರೂ.5555/-, ತೃತೀಯ= ರೂ.3333/-, ಚತುರ್ಥ= ರೂ.2222/- ಹಾಗೂ ವಿನಾಯಕ ಟ್ರೋಫಿ ಜೊತೆಗೆ ಸವ್ಯಸಾಚಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

ಸನ್ಮಾನ
ಈ ಸಂದರ್ಭದಲ್ಲಿ ಬಿ.ಎಫ್.ಸಿಯಲ್ಲಿ 38 ವರ್ಷಗಳ ಸೇವೆ ಸಲ್ಲಿಸಿದ ನಿವೃತ್ತ ಯೋಧ ಸುರೇಶ್ ನಾಕ್‌ರವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here