ಆಶಾ ಕಾರ್ಯಕರ್ತೆಯಾಗಿ ಸಂಧ್ಯಾರವರನ್ನೇ ಮುಂದುವರಿಸಲು ಗ್ರಾಮಸ್ಥರ ಆಗ್ರಹ
ಪುತ್ತೂರು:ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಸಂಧ್ಯಾರವರನ್ನು ಹುದ್ದೆಯಿಂದ ವಜಾ ಮಾಡಿರುವ ವಿಚಾರ ಬನ್ನೂರು ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಗಿ ಇದರಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯವರು ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕು ಹಾಗೂ ಸಂಧ್ಯಾ ಅವರನ್ನೇ ಆಶಾ ಕಾರ್ಯಕರ್ತೆಯಾಗಿ ಮುಂದುವರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಮಿತಾರವರ ಅಧ್ಯಕ್ಷತೆಯಲ್ಲಿ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಬಳಿ ಸಭೆ ನಡೆಯಿತು.ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥ ತಿಮ್ಮಪ್ಪ ರೈ ಮಾತನಾಡಿ, ಕಳೆದ ಸುಮಾರು 8 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಎಂಬವರು ಈಗ ಬರುತ್ತಿಲ್ಲ.ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.ಕೊರೋನಾ ಸಂದರ್ಭದಲ್ಲಿ ಎಲ್ಲಾ ಮನೆಗಳಿಗೆ ಭೇಟಿ ನೀಡುವ ಮೂಲಕ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದರು.ಮಾನಸಿಕ ಒತ್ತಡದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅವರು ರಾಜೀನಾಮೆ ನೀಡಿರುವುದಾಗಿ ಮಾಹಿತಿಯಿದೆ.ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಚುನಾಯಿತ ಸದಸ್ಯರು ತಿಳಿಸಬೇಕು.ಇಲ್ಲದಿದ್ದರೆ ಪ್ರತಿಭಟನೆ ನಡೆಸಲು ಸಿದ್ದ ಎಂದು ಹೇಳಿದರು.
ಸ್ಪಷ್ಟನೆ ನೀಡಿದ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಮಾತನಾಡಿ, ಆಶಾಕಾರ್ಯಕರ್ತೆಯರ ಆಯ್ಕೆ ಮಾಡುವುದು ಗ್ರಾ.ಪಂ.ಆಗಿದ್ದು ಅವರು ರಾಜೀನಾಮೆಯನ್ನೂ ಗ್ರಾ.ಪಂಗೆ ನೀಡಬೇಕು.ಆದರೆ ಸಂಧ್ಯಾರವರು ಕೆಲಸದ ಒತ್ತಡವಿದೆ, ಕೆಲಸ ಮಾಡಲು ಆಗುತ್ತಿಲ್ಲ.ಅಲ್ಲದೆ ಆರೋಗ್ಯ ಸಮಸ್ಯೆಯಿದೆ ಎಂದು ಉಪ್ಪಿನಂಗಡಿ ಸಮುದಾಯ ಆರೋಗ್ಯಾಧಿಕಾರಿಯವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಪಂಚಾಯತ್‌ಗೆ ರಾಜೀನಾಮೆ ಸಲ್ಲಿಸಿಲ್ಲ.ನಂತರ ರಾಜೀನಾಮೆ ಹಿಂಪಡೆಯುವುದಾಗಿ ಗ್ರಾ,ಪಂಗೆ ಅರ್ಜಿ ಹಾಕಿದ್ದಾರೆ.ಅವರ ರಾಜೀನಾಮೆಯನ್ನು ಪಂಚಾಯತ್ ಅಂಗೀಕರಿಸಿಲ್ಲ.ಅಂಗೀಕರಿಸುವ ಅಧಿಕಾರ ಇಲ್ಲದಿದ್ದರೂ ಉಪ್ಪಿನಂಗಡಿ ಸಮುದಾಯ ಆರೋಗ್ಯಾಧಿಕಾರಿಯವರು ನಮ್ಮ ಅಧಿಕಾರ ಮೊಟಕುಗೊಳಿಸಿ ಅವರೇ ರಾಜೀನಾಮೆ ಅಂಗೀಕರಿಸುವ ಮೂಲಕ ಕರ್ತವ್ಯ ಲೋಪವೆಸಗಿಸಿದ್ದಾರೆ ಹೊರತು ಈ ವಿಚಾರದಲ್ಲಿ ಪಂಚಾಯತ್‌ನಿಂದ ಯಾವುದೇ ಲೋಪವಾಗಿಲ್ಲ ಎಂದರಲ್ಲದೆ, ಗ್ರಾಮಸ್ಥರ ಮನವಿಯಂತೆ ಆಶಾ ಕಾರ್ಯಕರ್ತೆಯಾಗಿ ಸಂಧ್ಯಾರವರನ್ನೇ ಮುಂದುವರಿಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಯವರಿಗೆ ಮನವಿ ಮಾಡಲಾಗಿದೆ ಎಂದು ದಾಖಲೆ ಸಹಿತ ಮಾಹಿತಿ ನೀಡಿದರು.ಹಾಗಾದರೆ ಇದರ ಹಿಂದೆ ಯಾರದ್ದೋ ಕೈವಾಡವಿದೆ.ಈ ಕುರಿತು ಉಪ್ಪಿನಂಗಡಿ ಸಮುದಾಯ ಆರೋಗ್ಯಾಧಿಕಾರಿಯವರೇ ಉತ್ತರ ನೀಡಬೇಕಾಗಿದ್ದು ಅವರು ಗ್ರಾಮ ಸಭೆಗೆ ಆಗಮಿಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಆರೋಗ್ಯಾಧಿಕಾರಿಯವರು ಮಾಡಿದ ಲೋಪದಿಂದಾಗಿ ನಿಷ್ಟಾವಂತ ಕಾರ್ಯಕರ್ತೆಗೆ ಆನ್ಯಾಯವಾಗಿದೆ.ಅವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬಾರದು.ಈ ವಿಚಾರದಲ್ಲಿ ಪಂಚಾಯತ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ದ.ನಿಮ್ಮ ಜೊತೆ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂದು ಗ್ರಾಮಸ್ಥರಾದ ತಿಮ್ಮಪ್ಪ ರೈ, ಸುರೇಂದ್ರ ಮೊದಲಾದವರು ಘೋಷಿಸಿದರು.
ಕರ್ತವ್ಯ ಲೋಪ ಎಸಗಿರುವ ಸಮುದಾಯ ಆರೋಗ್ಯಾಧಿಕಾರಿಯವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಂತೆ ನವೀನ್ ಆಗ್ರಹಿಸಿದರು.ನಿಷ್ಠಾವಂತ ಕಾರ್ಯಕರ್ತೆಯಾಗಿರುವ ಸಂಧ್ಯಾರವರಿಗೆ, ವಜಾಗೊಳಿಸಿದ ಎಲ್ಲಾ ದಿನಗಳ ವೇತನ ನೀಡಬೇಕು.ಅವರನ್ನು ಮರು ನೇಮಕ ಮಾಡದೇ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಮಾರ್ಗದರ್ಶಿ ಅಧಿಕಾರಿ ಶೈಲಜಾ ಭಟ್ ಮಾತನಾಡಿ, ಮಾಹಿತಿಯ ಕೊರತೆಯಿಂದಾಗಿ ಸಂಧ್ಯಾರವರು ಸಮುದಾಯ ಆರೋಗ್ಯಾಧಿಕಾರಿಯವರಿಗೆ ರಾಜೀನಾಮೆ ಸಲ್ಲಿಸಿರಬಹುದು.ಆದರೆ ಅಂಗೀಕರಿಸುವ ಹಕ್ಕು ಮಾತ್ರ ಅವರಿಗಿಲ್ಲ.ಹೀಗಾಗಿ ಗ್ರಾಮಸ್ಥರ ಬೇಡಿಕೆಯಂತೆ ಆಶಾ ಕಾರ್ಯಕರ್ತೆಯಾಗಿ ಸಂಧ್ಯಾ ಅವರನ್ನೇ ಮುಂದುವರಿಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಬಹುದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ವಿ.ಎ ಕಚೇರಿಗೆ ಬೀಗ-ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯ ಎಚ್ಚರಿಕೆ:
ಬನ್ನೂರು ಗ್ರಾಮ ಆಡಳಿತಾಧಿಕಾರಿಯವರ ಕಚೇರಿಗೆ ಕಚೇರಿ ವೇಳೆಯಲ್ಲೂ ನಿರಂತರವಾಗಿ ಬೀಗ ಹಾಕಿರುತ್ತದೆ.ಇದರ ಬಗ್ಗೆ ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು.ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ.ಕಚೇರಿಗೆ ಈಗಲೂ ನಿರಂತರವಾಗಿ ಬೀಗ ಹಾಕಿರುತ್ತದೆ.ಕಚೇರಿ ಸಮಯಲ್ಲಿ ನಿರಂತರವಾಗಿ ಬೀಗ ಹಾಕಿರುವುದಾದರೆ ಗ್ರಾಮಸ್ಥರಿಗೆ ಏನು ಪ್ರಯೋಜನವಿದೆ.ಇದರ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಗ್ರಾ.ಪಂ.ಸದಸ್ಯ ರತ್ನಾಕರ ಪ್ರಭು ಎಚ್ಚರಿಸಿದರು.
ಸದಸ್ಯರ ವಿರುದ್ಧ ಅಸಮಾಧಾನ:
ಪಂಚಾಯತ್‌ನಲ್ಲಿ ಖಾಯಂ ಕಾರ್ಯದರ್ಶಿಯೇ ಇಲ್ಲ.ಜಿಲ್ಲಾ ಪ್ರಶಸ್ತಿ ಪುರಸ್ಕೃತರಾಗಿದ್ದ ಪಿಡಿಒ ಅವರ ವರ್ಗಾವಣೆ ಆಗಿದ್ದು ಯಾಕೆ?,ಎಲ್ಲಾ 13 ಮಂದಿ ಸದಸ್ಯರೂ ಬಿಜೆಪಿ ಬೆಂಬಲಿತರೇ ಆಗಿದ್ದಾರೆ.ಸರಿಯಾದ ವಿರೋಧ ಪಕ್ಷವಿಲ್ಲದೆ ಇಲ್ಲಿ ತೊಂದರೆಯಾಗಿದೆ.ನಿಮ್ಮಿಂದ ಆಗದಿದ್ದರೆ ರಾಜೀನಾಮೆ ನೀಡಿ.ಒಂದೇ ಪಕ್ಷದ ಸದಸ್ಯರಿದ್ದರೂ ಸಾಮಾನ್ಯ ಸಭೆಗೆ ಕೋರಂ ಕೊರತೆಯಾಗಿರುವುದು ಯಾಕೆ?. ಇಷ್ಟು ವರ್ಷಗಳಲ್ಲಿ ಸದಸ್ಯರ ಸಾಧನೆ ಏನು ಎಂದು ಪ್ರಶ್ನಿಸಿ ಗ್ರಾಮಸ್ಥರಾದ ಚಿದಾನಂದ, ಪ್ರಕಾಶ್, ರತ್ನಾಕರ ಪ್ರಭು, ಸುದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು,ಕೆಲವರ ಸ್ವಾರ್ಥದಿಂದಾಗಿ ಹಿನ್ನಡೆಯಾಗಿದೆ.ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಎಲ್ಲರೂ ಸಹಕರಿಸಬೇಕು.ಇದಕ್ಕೆ ನಮ್ಮ ಬೆಂಬಲವಿದೆ.ಗ್ರಾಮದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ಗಮನಕ್ಕೆ ತರುವಂತೆ, ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದವರೇ ಕೊನೆಯಲ್ಲಿ ಸಲಹೆ ನೀಡಿದರು.
ಬೋರ್ ಇಲ್ಲ…ನೀರೂ ಇಲ್ಲ…:
ನಮಗೆ ಕಳೆದ ಆರು ತಿಂಗಳಿನಿಂದ ನೀರು ಬರುತ್ತಿಲ್ಲ.ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದಿದ್ದರೆ ಹೇಗೆ?,ನೀರಿಲ್ಲದೆ ನಾವು ಎಲ್ಲಿಗೆ ಹೋಗಬೇಕು ಎಂದು ಕುಂಬ್ರುಗ ನಿವಾಸಿಗಳು ತಮ್ಮ ಅಳಲನ್ನು ಸಭೆಯಲ್ಲಿ ತಿಳಿಸಿದರು.ಕುಂಬ್ರುಗ ಪರಿಸರದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆಗೆ ಅಂತರ್ಜಲ ಪರಿಶೋಧಕರ ಮೂಲಕ ಜಾಗ ಗುರುತಿಸಿ ಕೊಳವೆ ಬಾವಿ ತೆಗೆಯಲು ಮುಂದಾದರೆ ಅಲ್ಲಿನವರೇ ಆಕ್ಷೇಪ ಮಾಡುತ್ತಿದ್ದಾರೆ.ಜಲ ಜೀವನ ಮಿಷನ್‌ವರು ಬರುವಾಗಲೂ ಆಕ್ಷೇಪ ಮಾಡಿದರೆ ಪಂಚಾಯತ್‌ನಿಂದ ಹೇಗೆ ನೀರು ಪೂರೈಕೆ ಮಾಡಲಿ ಎಂದು ಅಧ್ಯಕ್ಷರು ಹಾಗೂ ಪಿಡಿಓ ಪ್ರಶ್ನಿಸಿದರು. ನಮಗೆ ಬೋರ್ ಇಲ್ಲ, ನೀರೂ ಇಲ್ಲ ಎಂದು ಗ್ರಾಮಸ್ಥರು ಅಳಲನ್ನು ತಿಳಿಸಿದರು.
ಭಿಕ್ಷುಕರ ವಿರುದ್ಧ ಕ್ರಮವಹಿಸಿ:
ಹೊರ ಭಾಗದಿಂದ ಬರುವ ಬಿಕ್ಷುಕರ ವಿರುದ್ಧ ಕ್ರಮಕೈಗೊಳ್ಳಬೇಕು.ಅವರ ಭಿಕ್ಷಾಟನೆ ನೆಪ ಮಾತ್ರ.ಅದರ ಹಿಂದಿರುವ ಉದ್ದೇಶವೇ ಬೇರೆಯಾಗಿರುತ್ತದೆ.ಹೀಗಾಗಿ ಭಿಕ್ಷುಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥ ಚಿದಾನಂದ ಆಗ್ರಹಿಸಿದರು.ಭಿಕ್ಷುಕರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನನ್ನ ಮೇಲೆಯೇ ದಬ್ಬಾಳಿಕೆ ನಡೆಸಿದ್ದಾರೆ ಎಂದು ರತ್ನಾಕರ ಪ್ರಭು ಆರೋಪಿಸಿದರು.
ಉಚಿತ ವಿದ್ಯುತ್‌ನ್ನು 300 ಯೂನಿಟ್‌ಗೆ ಏರಿಕೆ ಮಾಡಿ:
ಎಲ್ಲಾ ಕಡೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಧಿಕವಾಗುತ್ತಿದ್ದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೃಹ ಜ್ಯೋತಿ ಯೋಜನೆಯ ಮೂಲಕ ಮನೆಗಳಿಗೆ ನೀಡಲಾಗುವ 200 ಯೂನಿಟ್‌ವರೆಗಿನ ಉಚಿತ ವಿದ್ಯುತನ್ನು 300 ಯೂನಿಟ್‌ಗೆ ಏರಿಕೆ ಮಾಡುವಂತೆ ಗ್ರಾಮಸ್ಥ ಚಿದಾನಂದ ಆಗ್ರಹಿಸಿದರು.
ಇನ್ವರ್ಟರ್ ಹಾಕಿಸಿಕೊಳ್ಳಿ…!:
ಮೆಸ್ಕಾಂನಿಂದ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥ ನವೀನ್ ಲೋಡ್ ಶೆಡ್ಡಿಂಗ್ ಬಗ್ಗೆ ಪ್ರಶ್ನಿಸಿದರು.ಸದ್ಯ ಗರಿಷ್ಠ ಸಮಯ ಲೋಡ್ ಶೆಡ್ಡಿಂಗ್ ಇರುವುದಾಗಿ ಮೆಸ್ಕಾಂ ಜೂನಿಯರ್ ಇಂಜಿನಿಯರ್ ತಿಳಿಸಿದರು.ಜನರಿಗೆ ಅವಶ್ಯ ಸಮಯದಲ್ಲಿ ಹಾಗೂ ರಾತ್ರಿ ವೇಳೆ ಪವರ್ ಕಟ್ ಮಾಡದಂತೆ ನವೀನ್ ತಿಳಿಸಿದಾಗ ನೀವು ಇನ್ವರ್ಟರ್ ಅಳವಡಿಸಿಕೊಳ್ಳಿ ಎಂದು ಜೂನಿಯರ್ ಇಂಜಿನಿಯರ್ ಉತ್ತರಿಸಿದರು.
ಅಪಾಯಕಾರಿ ವಿದ್ಯುತ್ ಕಂಬ:
ದಾರಂದಕುಕ್ಕು-ಬೆಳ್ಳಿಪ್ಪಾಡಿ ರಸ್ತೆಯಲ್ಲಿ ರಸ್ತೆಯ ಅಂಚಿನಲ್ಲೇ ವಿದ್ಯುತ್ ಕಂಬವೊಂದು ಅಪಾಯ ಆಹ್ವಾನಿಸುತ್ತಿದೆ ಎಂದು ಭಾವಚಿತ್ರ ಸಹಿತ ಸಭೆಯ ಗಮನಕ್ಕೆ ತರಲಾಯಿತು.ಇದರ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.2008ರಲ್ಲಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಕಂಬ ಸ್ಥಳಾಂತರಿಸದೇ ಇದ್ದು ರಸ್ತೆಯ ಅಂಚಿನಲ್ಲೇ ಇದ್ದು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು ಅದನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥ ಚಿದಾನಂದ ಆಗ್ರಹಿಸಿದರು.ಒಂದು ಬಾರಿ ಅಳವಡಿಸಿದ ಕಂಬ ಸ್ಥಳಾಂತರಕ್ಕೆ ಇಲಾಖೆಯಲ್ಲಿ ಅವಕಾಶವಿಲ್ಲ.ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಅವರ ಮೂಲಕವೇ ಸ್ಥಳಾಂತರವಾಗಬೇಕು. ಹಾಗಿದ್ದರೂ ಪ್ರಯತ್ನಿಸಲಾಗುವುದು ಎಂದು ಜೂನಿಯರ್ ಇಂಜಿನಿಯರ್ ತಿಳಿಸಿದರು.
ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ನಂತರ ಸ್ಥಗಿತಗೊಂಡಿದ್ದ ಅಂತ್ಯ ಸಂಸ್ಕಾರ ಪರಿಹಾರ ಮೊತ್ತ ಮರು ಜಾರಿಗೊಳಿಸಬೇಕು. ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಕಜೆ ಅಂಗನವಾಡಿ ಕೇಂದ್ರದ ಹಳೆ ಕಟ್ಟಡ ತೆರವುಗೊಳಿಸಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ಕಿಚಡಿ ಬದಲು ಅನ್ನಸಾರು ನೀಡಬೇಕು.ವರದಿಯ ಪ್ರತಿ ಗ್ರಾಮಸ್ಥರಿಗೂ ನೀಡಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.
ಪ್ರಥಮ ಬಾರಿಗೆ ಬನ್ನೂರು ಗ್ರಾಮದಲ್ಲಿ ಗ್ರಾಮಸಭೆ:
ಬನ್ನೂರು, ಪಡ್ನೂರು ಹಾಗೂ ಚಿಕ್ಕಮುಡ್ನೂರು ಗ್ರಾಮಗಳ ವ್ಯಾಪ್ತಿಯಿರುವ ಬನ್ನೂರು ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಗ್ರಾಮಸ್ಥರ ಬೇಡಿಕೆಯಂತೆ ಪ್ರಥಮ ಬಾರಿಗೆ ಬನ್ನೂರು ಗ್ರಾಮದಲ್ಲಿ ನಡೆದಿದೆ ಎಂದು ಉಪಾಧ್ಯಕ್ಷ ಶೀನಪ್ಪ ಕುಲಾಲ್ ತಿಳಿಸಿದರು.
ಸದಸ್ಯರಾದ ಜಯ ಏಕ, ರಮಣಿ ಡಿ ಗಾಣಿಗ, ಗೀತಾ, ಗಣೇಶ್ ಹೆಗ್ಡೆ, ಗಿರಿಧರ ಪಂಜಿಗುಡ್ಡೆ, ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ್ಟ, ಸುಪ್ರಿತಾ ಪ್ರಭು, ಹರಿಣಾಕ್ಷಿ, ವಿಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪಾಧ್ಯಕ್ಷ ಶೀನಪ್ಪ ಕುಲಾಲ್ ಸ್ವಾಗತಿಸಿದರು. ಪಿಡಿಓ ಚಿತ್ರಾವತಿ ವರದಿ ಮಂಡಿಸಿದರು. ಲೆಕ್ಕಸಹಾಯಕಿ ಜಯಂತಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.