ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಿಲ್ಲ ಮಾಜಿ ಶಾಸಕರ ಗ್ರಾಮಕ್ಕೂ 86 ಲಕ್ಷ ಕೊಟ್ಟಿದ್ದೇನೆ: ಅಶೋಕ್ ರೈ
ಪುತ್ತೂರು: ನಾನು ಎಲ್ಲರಿಗೂ ಶಾಸಕ, ವೋಟು ಹಾಕಿದವರಿಗೂ ವೋಟು ಹಾಕದವರಿಗೆ ಎಲ್ಲರಿಗೂ ನಾನು ಶಾಸಕನಾಗಿದ್ದೇನೆ, ಶಾಸಕನಾದ ಬಳಿಕ ನಾನು ಯಾವುದೇ ವಿಚಾರದಲ್ಲೂ ರಾಜಕೀಯ ಮಾಡದೆ ರಾಜಧರ್ಮವನ್ನು ಪಾಲಿಸಿದ್ದೇನೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಿಲ್ಲ ಮಾಜಿ ಶಾಸಕರ ಹಿರೆಬಂಡಾಡಿ ಗ್ರಾಮಕ್ಕೂ ಮೊದಲ ಅವಧಿಯಲ್ಲೇ 86 ಲಕ್ಷ ಅನುದಾನವನ್ನು ನೀಡಿದ್ದೇನೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಹಿರೆಬಂಡಾಡಿ ಗ್ರಾಮದ ಉಳೆತ್ತೋಡಿ ಷಣ್ಮುಖಳ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಎಲ್ಲೂ ರಾಜಕೀಯ ಮಾಡದೆ ಸಮಾನ ಪ್ರಮಾಣದಲ್ಲಿ ಅನುದಾನವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಅನುದಾನವು ಬರಲಿದ್ದು ಅದನ್ನೂ ಎಲ್ಲಾ ಗ್ರಾಮಗಳಿಗೂ ಹಂಚಿಕೆ ಮಾಡುತ್ತೇನೆ ಎಂದು ಹೇಳಿದರು.
ಹಿರೆಬಂಡಾಡಿ ಗ್ರಾಮದಲ್ಲಿರುವ ಅನೇಕ ರಸ್ತೆಗಳು ಇಂದಿಗೂ ಕಾಂಕ್ರೀಟ್ ಆಗಿಲ್ಲ ಎಂದು ಇಲ್ಲಿನ ನಾಗರಿಕರು ನನ್ನ ಬಳಿ ಅವಲತ್ತುಕೊಂಡಿದ್ದಾರೆ. ಕೇವಲ ಭರವಸೆ ನೀಡಿದರೆ ಕಾಂಕ್ರೀಟ್ ಆಗುವುದಿಲ್ಲ, ನಾನು ಯಾರಿಗೂ ಭರವಸೆಯನ್ನು ನೀಡುವುದಿಲ್ಲ, ಮತ್ತು ಅನುದಾನ ಬಿಡುಗಡೆಯಾಗದೆ ಗುದ್ದಲಿಪೂಜೆಯನ್ನೂ ಮಾಡುವುದಿಲ್ಲ. ಭರವಸೆ ನೀಡಿ ಜನರಿಗೆ ಮೋಸ ಮಾಡುವ ಪೃವೃತ್ತಿ ಕಾಂಗ್ರೆಸ್‌ನಲ್ಲಿ ಇಲ್ಲ. ಉಳೆತ್ತೋಡಿ ದೇವಸ್ಥಾನಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದೆ ಇದು ಯಾವಾಗಲೋ ಆಗಬೇಕಿತ್ತು ಆಗಿಲ್ಲ ಈ ಬರಿ ಕಾಂಕ್ರೀಟ್‌ಗೆ ಅನುದಾನವನ್ನು ನೀಡುವುದಾಗಿ ಹೇಳಿದರು.
ಮಾಜಿ ಶಾಸಕರು ಹಿರೆಬಂಡಾಡಿಗೆ ಅಷ್ಟೇನು ಅನುದಾನ ನೀಡಿಲ್ಲ: ಸತೀಶ್ ಶೆಟ್ಟಿ ಹೆನ್ನಾಳ
ಮಾಜಿ ಶಾಸಕರ ಗ್ರಾಮವಾದ ಹಿರೆಬಂಡಾಡಿಯಲ್ಲಿ ಅನೇಕ ರಸ್ತೆಗಳು ಕಾಂಕ್ರೀಟ್ ಕಾಣಲಿಲ್ಲ, ಅವರು ಶಾಸಕರಾದರೂ ಸ್ವಗ್ರಾಮದ ಅಭಿವೃದ್ದಿಗೆ ಹೆಚ್ಚೇನು ಅನುದಾನವನ್ನು ನೀಡಿಲ್ಲ, ಅನುದಾನ ನೀಡುವಲ್ಲಿಯೂ ರಾಜಕೀಯ ಮಾಡಿದ್ದರು ಎಂದು ಹಿರೆಬಂಡಾಡಿ ಗ್ರಾಪಂ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಹೇಳಿದರು. ಹಲವು ವರ್ಷಗಳ ಬೇಡಿಕೆಯಾಗಿದ್ದ ಗ್ರಾಮದ ಹಲವಾರು ರಸ್ತೆಗಳಿಗೆ ಶಾಸಕರಾದ ಅಶೋಕ್ ರೈ ಅನುದಾನವನ್ನು ನೀಡಿದ್ದಾರೆ. ಬಿಜೆಪಿ ಕಾಂಗ್ರೆಸ್ ಏರಿಯಾ ಎಂದು ಯಾವುದೇ ರಾಜಕೀಯ ಮಾಡಲಿಲ್ಲ ಅಗತ್ಯ ಇರುವ ಎಲ್ಲಾ ರಸ್ತೆಗಳಿಗೂ ಅನುದಾನ ಹಂಚಿಕೆ ಮಾಡಿ ಎಂದು ನಮಗೆ ಸೂಚನೆಯನ್ನು ನೀಡಿದ್ದಾರೆ. ಅಭಿವೃದ್ದಿಯಲ್ಲಿ ಎಂದೂ ರಾಜಕೀಯ ಮಾಡಬಾರದು ಜನ ಅದನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು. ಪಾಲೆತ್ತಡಿ ಹೆನ್ನಾಳ ರಸ್ತೆಯನ್ನು ವೀಕ್ಷಣೆ ಮಾಡಿದ ಶಾಸಕರು ಈ ರಸ್ತೆಗೆ 20 ಲಕ್ಷ ಅನುದಾನವನ್ನು ನೀಡಿದ್ದಾರೆ. ಹಿರೆಬಂಡಾಡಿ ಗ್ರಾಮಕ್ಕೆ ಇಷ್ಟೊಂದು ಅನುದಾನ ಬರಬಹುದು ಎಂದು ನಾವು ಕನಸಲ್ಲೂ ಗ್ರಹಿಸಿರಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಸಾಂತಿ ತಡ್ಡ, ಉತ್ಸವ ಸಮಿತಿ ಅಧ್ಯಕ್ಷರಾದ ನವೀನ್ ಪಡ್ಪು, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವೀಂದ್ರ ಪಟಾರ್ತಿ , ಗ್ರಾಪಂ ಸದಸ್ಯರಾದ ಗೀತಾ ದಾಸರ ಮೂಲೆ, ಭವಾನಿ ಮುರದ ಮೇಲು, ದೇವಪ್ಪ ಪೂಜಾರಿ ಪಡ್ಪು ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಬಾಲಚಂದ್ರ ತೊಳ್ಪಡಿತ್ತಾಯ ದೇವಿ ದಾಸರೈ, ನಾರಾಯಣ ಕನ್ಯಾನ, ವಿಶ್ವನಾಥ ಕೆಮ್ಮಟೆ, ಗಣೇಶ್ ಮಟಂದೂರು, ಗಂಗಾಧರ ಎಲಿಯ ಹಾಗೂ ವ್ಯವಸ್ಥಾಪನ ಸಮಿತಿ ಎಲ್ಲಾ ಸದಸ್ಯರು ಉತ್ಸವ ಸಮಿತಿಯ ಸದಸ್ಯರು ದೈವಗಳ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.