ಉಪ್ಪಿನಂಗಡಿ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಮೂವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಫೆ.26ರಂದು ಬೆಳಿಗ್ಗೆ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಸವಣೂರು ಮಾಂತೂರು ನಿವಾಸಿ ನವಾಝ್ (35) ಮತ್ತು ಪ್ರಮೋದ್ ಕೆ ಎಂಬವರನ್ನು ಉಪ್ಪಿನಂಗಡಿ ಠಾಣಾ ಪಿಎಸ್‌ಐ ಅವಿನಾಶ್ ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ ನವಾಝ್ ಮಾಂತೂರು ಮಾದಕದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 27 (ಚಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇನ್ನೊಂದು ಪ್ರಕರಣದಲ್ಲಿ ಫೆ.26ರಂದು ಬೆಳಿಗ್ಗೆ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ಮಾದಕ ದ್ರವ್ಯ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಸವಣೂರು ನಿವಾಸಿ ಪಿ. ಹನೀಫ್ (45) ಹಾಗೂ ಮಹಮ್ಮದ್ ಶಾಫಿ (27) ಎಂಬವರನ್ನು ಪಿಎಸ್‌ಐ ಅವಿನಾಶ್‌ರವರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಅಪಾದಿತರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 27 (ಚಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.