ಪುತ್ತೂರು: ದ್ವೇಷ, ಅಸೂಯೆ ಇಲ್ಲದ ಜೀವನ ನಮ್ಮದಾದದರೆ ನಮ್ಮ ಬದುಕು ಸಾರ್ಥಕ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.
ಓಲೆಮುಂಡೋವು ದರ್ಗಾ ಶರೀಫ್ ಉರೂಸ್ ಪ್ರಯುಕ್ತ ಹಮ್ಮಿಕೊಂಡಿರುವ ಧಾರ್ಮಿಕ ಮತ ಪ್ರವಚನದ 8ನೇ ದಿನವಾದ ಫೆ.29ರಂದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಲ್ಲಾಹನ ಇಷ್ಟದಾಸರಾದ ಔಲಿಯಾಗಳು ಭೂಲೋಕದ ಸುಖಾಡಂಬರಗಳನ್ನು ತ್ಯಜಿಸಿ ಅಲ್ಲಾಹ ಸಂಪ್ರೀತಿ ಮಾತ್ರ ಉದ್ದೇಶವಿಟ್ಟುಕೊಂಡು ಜೀವನ ನಡೆಸಿದ್ದರು, ಅವರ ಜೀವನದಲ್ಲಿ ಕೆಡುಕು ಎನ್ನುವ ವಿಚಾರಕ್ಕೆ ಆಸ್ಪದವೇ ಇರಲಿಲ್ಲ, ಅಂತಹ ಮಹಾನುಭಾವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿಕೊಂಡು ನಮ್ಮ ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ನಾವು ಕೂಡಾ ಒಳಿತನ್ನು ಮೈಗೂಡುಸಿಕೊಂಡು ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಮುಖ್ಯ ಪ್ರಭಾಷಣ ನಡೆಸಿದ ಅನ್ವರ್ ಅಲಿ ಹುದವಿಯವರು ನಮ್ಮ ಜೀವನ ಕ್ಷಣಿಕ, ಇಲ್ಲಿ ಯಾವುದೂ ಶಾಶ್ವತ ಅಲ್ಲ, ಹಾಗಿರುವಾಗ ನಾವು ಪ್ರವಾಸಿಗಳಂತೆ ಇಲ್ಲಿ ಜೀವನ ನಡೆಸಬೇಕು, ಯಾರಿಗೂ ಅನ್ಯಾಯ ಮಾಡದೇ ಯಾರಿಗೂ ಕೆಡುಕು ಬಯಸದೇ ಪರಿಶುದ್ಧ ಜೀವನ ನಮ್ಮದಾದಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳಲು ಸಾಧ್ಯ ಎಂದು ಹೇಳಿದರು.
ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ದುವಾ ನೆರವೇರಿಸಿದರು.
ಅಬೂಬಕ್ಕರ್ ದಾರಿಮಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.