ಹಿರೇಬಂಡಾಡಿ-ಕುಬಲ: ಜಮೀನು ವಿವಾದ -ಸಹೋದರರ ಘರ್ಷಣೆ, ಇಬ್ಬರು ಆಸ್ಪತ್ರೆಗೆ ದಾಖಲು

0

ಹಿರೇಬಂಡಾಡಿ: ಜಮೀನು ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಘರ್ಷಣೆ ನಡೆದು ಎರಡೂ ಕಡೆಯ ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಿರೇಬಂಡಾಡಿ ಗ್ರಾಮದ ಕುಬಲದಲ್ಲಿ ಫೆ.28ರಂದು ನಡೆದಿದೆ. ಕುಬಲ ನಿವಾಸಿ ದಿ.ಪದ್ಮಯ್ಯ ಗೌಡರ ಪುತ್ರ ಮೋಹನ್‌ದಾಸ್ ಕೆ.ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ದಿ.ಪದ್ಮಯ್ಯ ಗೌಡರವರ ಇನ್ನೊಬ್ಬ ಪುತ್ರ ನೋಣಯ್ಯ ಗೌಡರವರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಪರಸ್ಪರ ಆರೋಪ, ಪ್ರತ್ಯಾರೋಪ ಹೊರಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೋಹನ್ ದಾಸ್ ಕೆ.,ಅವರು ಪೊಲೀಸರಿಗೆ ದೂರು ನೀಡಿ, ಅಣ್ಣ ನೋಣಯ್ಯರವರು ಪ್ರತಿ ದಿನ ಮನೆಯ ಬಳಿ ಜೀಪಿನಲ್ಲಿ ಹೋಗುವಾಗ ಕರ್ಕಶ ಹಾರ್ನ್ ಹಾಕುತ್ತಿರುವುದನ್ನು ಕೇಳುವುದಕ್ಕಾಗಿ ಫೆ.28ರಂದು ಸಂಜೆ ಕುಬಲದಲ್ಲಿರುವ ತನ್ನ ಜಮೀನಿನಲ್ಲಿ ನಿಂತುಕೊಂಡಿದ್ದಾಗ, ಅಣ್ಣ ನೋಣಯ್ಯ ಜೀಪಿನಲ್ಲಿ ಹಾರ್ನ್ ಹಾಕುತ್ತಾ ಬರುತ್ತಿರುವುದನ್ನು ನೋಡಿ, ಯಾಕೆ ಅಣ್ಣ ನೀನು ಈ ತರಹ ಹಾರ್ನ್ ಹಾಕುತ್ತೀಯಾ ಎಂದು ಕೇಳಿರುತ್ತೇನೆ. ಈ ವೇಳೆ ನೋಣಯ್ಯ ಅವರು ಜೀಪನ್ನು ನಿಲ್ಲಿಸಿ ಸ್ಕ್ರೂ ಡ್ರೈವರ್ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಸ್ಕ್ರೂ ಡ್ರೈವರ್‌ನಿಂದ ತಲೆಗೆ ಚುಚ್ಚಿದ್ದಾರೆ. ಈ ವೇಳೆ ಜೋರಾಗಿ ಬೊಬ್ಬೆ ಹಾಕಿದಾಗ ಪತ್ನಿ ಹಾಗೂ ತಮ್ಮ ಬಂದಿದ್ದು, ಆಗ ನೋಣಯ್ಯ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ. ಘಟನೆಯಿಂದಾಗಿ ತಲೆಯಲ್ಲಿ ವಿಪರಿತ ನೋವು ಇದ್ದುದರಿಂದ ಚಿಕಿತ್ಸೆಗಾಗಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ, ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮೋಹನ್‌ದಾಸ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 27/2024 ಕಲಂ: 504,324,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಪ್ರತಿದೂರು:
ಇದೇ ಘಟನೆಗೆ ಸಂಬಂಧಿಸಿ ಜೀಪು ಚಾಲಕ ನೋಣಯ್ಯ ಗೌಡರವರು ಪೊಲೀಸರಿಗೆ ಪ್ರತಿದೂರು ನೀಡಿದ್ದು, ಫೆ.೨೮ರಂದು ಸಂಜೆ ಕೆಲಸ ಮುಗಿಸಿ ಜೀಪಿನಲ್ಲಿ ಕುಬಲದಲ್ಲಿರುವ ತಮ್ಮ ಮೋಹನದಾಸರವರ ಮನೆಯ ಬಳಿಗೆ ತಲುಪಿದಾಗ ಮೋಹನದಾಸ ಎದುರಿನಿಂದ ಜೀಪಿಗೆ ಕಲ್ಲು ಎಸೆಯುತ್ತಿರುವುದನ್ನು ನೋಡಿ ಜೀಪಿನಿಂದ ಕೆಳಗೆ ಇಳಿದಾಗ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಮೋಹನದಾಸ ಮತ್ತು ತಮ್ಮ ಶ್ರೀಧರ ಮತ್ತೆ ಏಕಾಏಕಿ ಕಲ್ಲು ಎಸೆದಿರುವುದರಿಂದ ಕಲ್ಲು ಎಡತೊಡೆಗೆ ತಾಗಿ ಗುದ್ದಿದ ಗಾಯವಾಗಿದೆ. ಈ ವೇಳೆ ಬೊಬ್ಬೆ ಕೇಳಿ ಪತ್ನಿ ಮತ್ತು ತನುಷ್ ಬಂದಾಗ ಮೋಹನದಾಸ ಸ್ಥಳದಿಂದ ತೆರಳಿದ್ದಾರೆ. ರಾತ್ರಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನೋಣಯ್ಯ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 28/2024 ಕಲಂ: 504,324,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here