ಓಟು ಮೋದೀಜೀಯವರಿಗೋ, ರಾಹುಲ್ ಗಾಂಧಿಯವರಿಗೋ, ಪಕ್ಷಕ್ಕೋ, ಅಭ್ಯರ್ಥಿಯ ಸಾಮರ್ಥ್ಯಕ್ಕೋ ಚರ್ಚೆಯಾಗಬೇಕು

0

ಹಿಂದೆ ಇಂದಿರಾಗಾಂಧಿಗೇ, ಕಾಂಗ್ರೆಸ್ ಪಕ್ಷಕ್ಕೇ ಓಟು ಎಂಬ ಕಾಲವಿತ್ತು. ಆಗ ಇಂದಿರಾಗಾಂಧಿ ಎಷ್ಟು ಪ್ರಬಲರಾಗಿದ್ದರು ಎಂದರೆ ಟಿಎಂಎ ಪೈಯಂತಹ ಸಮರ್ಥ ಅಭ್ಯರ್ಥಿಯ ಎದುರು ಆಗ ಹೆಸರಿಲ್ಲದ ಆಸ್ಕರ್ ಫೆರ್ನಾಂಡೀಸ್ ಎಂಬವರನ್ನು ನಿಲ್ಲಿಸಿ ಗೆಲ್ಲಿಸಿದ್ದರು. ಎಷ್ಟೇ ಪ್ರಬಲ ಅಭ್ಯರ್ಥಿಯಾಗಿದ್ದರೂ, ಮಂತ್ರಿಯೇ ಆಗಿದ್ದರೂ ಅವರ ಎದುರು ಜನರ ಪರಿಚಯವಿಲ್ಲದ ಹೊಸಬರನ್ನು ನಿಲ್ಲಿಸಿ ಗೆಲ್ಲಿಸುತ್ತಿದ್ದರು. ಜನ ಇಂದಿರಾಗಾಂಧಿಗೆ ಎಂದೇ ಓಟು ಹಾಕುತ್ತಿದ್ದರು. ಅದರ ಪರಿಣಾಮವಾಗಿ ನಾವು (ಜನತೆ) ಆರಿಸಿದ ಅಭ್ಯರ್ಥಿಗಳು ಜನರ ಕೆಲಸಕ್ಕೆ ಪ್ರಾಮುಖ್ಯತೆ ಕೊಡದೆ ಇಂದಿರಾಗಾಂಧಿಯವರ ಮತ್ತು ಅವರ ಚೇಲಾಗಳ ಹಿಂದೆ, ಸುತ್ತಮುತ್ತ ತಿರುಗುವ ಕೆಲಸ ಮಾಡುತ್ತಿದ್ದರು. ಮೇಲಿನವರನ್ನು ಖುಷಿಪಡಿಸಲು ಹೆಣಗಾಡುತ್ತಿದ್ದರು. ಸ್ಥಳೀಯ ಜನರ ಒಲವಿನ ಬಗ್ಗೆ ಅವರಿಗೆ ಯಾವುದೇ ಚಿಂತೆ ಇರಲಿಲ್ಲ, ಯಾಕೆಂದರೆ ಯಾರು ಏನೇ ವಿರೋಧ ಮಾಡಿದರೂ ಮೇಲಿನವರನ್ನು ಒಲಿಸಿಕೊಂಡು ಕಾಂಗ್ರೆಸ್ ಸೀಟು ದೊರಕಿದರೆ ಸಾಕಿತ್ತು. ಅವರ ಗೆಲುವು ಖಚಿತವಾಗಿತ್ತು.


ಈ ಮೇಲಿನ ಕಾರಣಗಳಿಂದಾಗಿ ಗೆದ್ದ ಹೆಚ್ಚಿನ ಅಭ್ಯರ್ಥಿಗಳಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚಿಂತೆಯೇ ಇರಲಿಲ್ಲ. ತಮ್ಮ ಕ್ಷೇತ್ರಕ್ಕಾಗಿ, ಜನರಿಗಾಗಿ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ಹೋರಾಡುವ ಶಕ್ತಿಯೂ, ಇಚ್ಚಾ ಶಕ್ತಿಯೂ ಅವರಲ್ಲಿ ಇರಲಿಲ್ಲ. ಚುನಾವಣೆಯ ಸಂದರ್ಭಕ್ಕೆ ಮಾತ್ರ ಅವರು ಕ್ಷೇತ್ರಕ್ಕೆ, ಜನರ ಬಳಿ ಬರುತ್ತಾರೆಂಬ ಮಾತು ವಾಡಿಕೆಯಲ್ಲಿತ್ತು. ಪರಿಣಾಮವಾಗಿ ಕಾಂಗ್ರೆಸ್ ಪಕ್ಷ, ನಾಯಕರು ಜನರಿಂದ ದೂರವಾಗಲಾರಂಭಿಸಿದರು. ಇದರಿಂದಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂಧಿಸುವವರು ನಾಯಕರಾಗಲು ಪ್ರಾರಂಭವಾಯಿತು. ದಳ, ಬಿಜೆಪಿ ನಾಯಕರು ಸ್ಥಳೀಯವಾಗಿ ಬೆಳೆಯಲು ಕಾರಣವಾಯಿತು.


ಕಾಂಗ್ರೆಸ್‌ನ ಅದೇ ಪರಿಸ್ಥಿತಿ ಬಿಜೆಪಿಗೆ ಬರಲಾರಂಭಿಸಿದೆ. ಮೋದಿಜೀಯವರ ಹೆಸರಿನಲ್ಲಿ, ಬಿಜೆಪಿ ಹೆಸರಲ್ಲಿ ಮೇಲಿನಿಂದಲೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ, ಓಟು ಕೇಳುತ್ತಿದ್ದಾರೆ. ಮೋದೀಜೀಯವರಿಗೆ, ಬಿಜೆಪಿಗೆ ಮತ, ಸ್ಥಳೀಯ ಅಭ್ಯರ್ಥಿಗಲ್ಲ. ಅದು ಯಾರಾದರೂ ಪರವಾಗಿಲ್ಲ ಎಂದು ಮತದಾರರು ಹೇಳುತ್ತಿದ್ದಾರೆ. ಇಂದಿರಾಗಾಂಧಿಯವರ ಕಾಲದ ಚಿಂತನೆ ಮರುಕಳಿಸುತ್ತಿದೆ. ಅದರ ಪರಿಣಾಮ ಏನಾಗುತ್ತಿದೆ ಎಂದರೆ ಮೋದೀಜೀಯವರ ಹೆಸರಿನಲ್ಲಿ ಗೆದ್ದವರು ಅವರನ್ನು ಪ್ರಶ್ನಿಸುವ, ಎದುರಿಸಿ ಮಾತನಾಡುವ, ಕ್ಷೇತ್ರಕ್ಕಾಗಿ ತಮಗೆ ಬೇಕಾದನ್ನು ಪಡೆಯುವ ಶಕ್ತಿಯನ್ನು, ಧೈರ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ತಮ್ಮ ನಾಯಕರ ಎದುರು, ವಿಧಾನಸೌಧದಲ್ಲಿ ಮತ್ತು ಪಾರ್ಲಿಮೆಂಟ್‌ನಲ್ಲಿ ಧ್ವನಿಯೆತ್ತುವ ಶಕ್ತಿಯೂ ಅವರಲ್ಲಿ ಇರುವುದಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಹರಡಿದೆ.


ಪುತ್ತೂರು ತಾಲೂಕಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯ ಸಮಯದಲ್ಲಿ ಮತ್ತು ಚುನಾವಣೆಯಲ್ಲಿ ಸ್ಥಳೀಯ ಆಯ್ಕೆಯ ಮತ್ತು ಮೇಲಿನಿಂದ ಆಯ್ಕೆಯ ಬಗ್ಗೆ ಗಂಭೀರ ಚಿಂತನೆಯಾಗಿ ಅರುಣ್ ಕುಮಾರ್ ಪುತ್ತಿಲ ಎಂಬವರು ಸ್ಪರ್ಧಿಸಲು ಕಾರಣವಾದದ್ದು ಇದಕ್ಕೆ ಉತ್ತಮ ಉದಾಹರಣೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡು ಬಾರಿ ಅಲ್ಲಿಯ ಸಂಸದರಾಗಿರುವ ಕೇಂದ್ರ ಮಂತ್ರಿಯೂ ಆಗಿರುವ ಶೋಭಾ ಕರಂದ್ಲಾಜೆಯವರ ವಿರುದ್ಧ ಉಡುಪಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಇನ್ನೊಂದು ಉದಾಹರಣೆ.


ಪ್ರಜಾಪ್ರಭುತ್ವದಲ್ಲಿ ಜನತೆ ಆರಿಸುವ ಆಯಾ ಕ್ಷೇತ್ರದ ಪ್ರತಿನಿಧಿ ದೇಶದ, ರಾಜ್ಯದ ಮತ್ತು ಪಕ್ಷದ ಹಿತಾಸಕ್ತಿಯೊಂದಿಗೆ ತನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ಸಂಪೂರ್ಣವಾಗಿ ಸ್ಪಂಧಿಸಬೇಕು. ಆತ ಯಾವ ಪಕ್ಷದ ಸಿದ್ಧಾಂತದ ಅಭ್ಯರ್ಥಿಯಾದರೂ ಪರವಾಗಿಲ್ಲ, ಸ್ವಂತ ಸಾಮರ್ಥ್ಯದ ಬಲದಿಂದ ಜನರ ಒಲವನ್ನು ಗಳಿಸುವ, ಗೆಲ್ಲುವ ಶಕ್ತಿಯಿರುವವನು ಆಗಿರಬೇಕು. ಮೋದೀಜೀಯವರ, ರಾಹುಲ್ ಗಾಂಧಿಯವರ, ಬಿಜೆಪಿ, ಕಾಂಗ್ರೆಸ್ ಪಕ್ಷದ ಹೆಸರಿದ್ದರೆ ಮಾತ್ರ ಗೆಲ್ಲುವವ ಎಂದಾಗಬಾರದು. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯದಂತೆ ಸ್ಥಳೀಯವಾಗಿ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿರಬೇಕು, ರಾಜ್ಯ ಮತ್ತು ದೇಶದ ಚಿಂತನೆ ಉಳ್ಳವನಾಗಿರಬೇಕು ಎಂಬುದೇ ಈ ಲೇಖನದ ಉದ್ದೇಶ.


ಉದಾಹರಣೆ ಒಂದು ಆಸ್ಪತ್ರೆ ಅಥವಾ ಶಾಲೆಯನ್ನು ತೆಗೆದುಕೊಳ್ಳಿ. ಆಸ್ಪತ್ರೆಯ ಮುಖ್ಯಸ್ಥ ಅತ್ಯಂತ ಸಮರ್ಥ ಅಂತರಾಷ್ಟ್ರೀಯ ಮಾನ್ಯತೆ ಇರುವ ವೈದ್ಯರು ಮಾತ್ರವಲ್ಲ, ಅವರ ಆಸ್ಪತ್ರೆ ಅತ್ಯಂತ ವ್ಯವಸ್ಥಿತವಾಗಿದ್ದು ಅಲ್ಲಿ ಎಲ್ಲಾ ಸೌಲಭ್ಯಗಳಿವೆ. ಎಲ್ಲಾ ವಿಧದ ಚಿಕಿತ್ಸೆಗಳು ದೊರಕುತ್ತವೆ ಎಂದು ಇಟ್ಟುಕೊಳ್ಳುವ. ಆ ಮುಖ್ಯ ವೈದ್ಯರಿಗೆ ಆಸ್ಪತ್ರೆಗೆ ಬರುವ ಎಲ್ಲರನ್ನೂ ಚಿಕಿತ್ಸೆ ಮಾಡಲು ಬೇಕಾದ ಸಮಯ ಇರುವುದಿಲ್ಲ, ಸಾಧ್ಯವೂ ಇರುವುದಿಲ್ಲ. ಅದಕ್ಕಾಗಿ ಅವರು ಚಿಕಿತ್ಸೆಗೆ ತಜ್ಞ ವೈದ್ಯರುಗಳನ್ನು ನೇಮಿಸಿ ಚಿಕಿತ್ಸೆ ನೀಡುತ್ತಾರೆ. ಆ ವೈದ್ಯರುಗಳು ಸ್ವಂತ ಬಲದಿಂದ ಚಿಕಿತ್ಸೆ ನೀಡುವ ಶಕ್ತಿ ಉಳ್ಳವರಾಗಿರುತ್ತಾರೆ. ಒಂದು ವೇಳೆ ಮುಖ್ಯಸ್ಥರು ನೇಮಿಸಿದ ವೈದ್ಯರುಗಳು ಸರಿಯಾಗಿ ಚಿಕಿತ್ಸೆ ನೀಡಲು ಸಾಮರ್ಥ್ಯವುಳ್ಳವರು ಆಗದಿದ್ದರೆ ಏನಾಗಬಹುದು? ಮುಖ್ಯಸ್ಥರ ಹೆಸರು ಕೇಳಿ ಅಲ್ಲಿಗೆ ಚಿಕಿತ್ಸೆಗೆ ಬಂದಿದ್ದರೆ ಅಲ್ಲಿಯ ಅರ್ಹತೆ ಇಲ್ಲದ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳ ಪರಿಸ್ಥಿತಿ ಏನಾಗಬಹುದು?
ಅದೇ ರೀತಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ವಿದ್ಯಾಸಂಸ್ಥೆಯ ಮುಖ್ಯಸ್ಥರು ಹೆಸರುವಾಸಿಯಾಗಿದ್ದರೂ ಅವರಿಗೆ ಸಂಸ್ಥೆಯ ಎಲ್ಲಾ ತರಗತಿಗಳನ್ನು, ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವೇ? ಅಲ್ಲಿಯ ಶಿಕ್ಷಕರು ತಜ್ಞರಲ್ಲದಿದ್ದರೆ ಏನಾಗಬಹುದು? ವಿದ್ಯಾಸಂಸ್ಥೆಯ ಮುಖ್ಯಸ್ಥರ ಹೆಸರು ಕೇಳಿ ಅಲ್ಲಿ ವಿದ್ಯಾಭ್ಯಾಸಕ್ಕೆ ಹೋದರೆ ಆ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು?


ತಜ್ಞವೈದ್ಯರಿಲ್ಲದ ಆಸ್ಪತ್ರೆಗೆ ಹೋದ-ತಜ್ಞ ಶಿಕ್ಷಕರಿಲ್ಲದ ಶಾಲೆಗೆ ವಿದ್ಯಾರ್ಥಿ ಕಳುಹಿಸಿದ ಪರಿಸ್ಥಿತಿ ಅಭ್ಯರ್ಥಿ ಆಯ್ಕೆಯಲ್ಲಿ ನಮಗೆ ಬರಬಾರದು:
ಪ್ರಧಾನಿ ಮೋದೀಜೀಯವರು, ರಾಹುಲ್ ಗಾಂಧಿಯವರು ದೇಶದ ಪರಿಸ್ಥಿತಿ ನಿಭಾಯಿಸುವ ನಾಯಕರು, ಸಾಮರ್ಥ್ಯವುಳ್ಳವರು. ಅವರ ಹೆಸರಿನಲ್ಲಿ, ಪಕ್ಷದ ಹೆಸರಿನಲ್ಲಿಯೇ ಇಲ್ಲಿಯ ಅಭ್ಯರ್ಥಿಗಳ ಆಯ್ಕೆ ಎಂದಾದರೆ ಅಭ್ಯರ್ಥಿಗಳು ಸಾಮರ್ಥ್ಯವುಳ್ಳವರು ಆಗದಿದ್ದರೆ ಅಥವಾ ಸ್ಥಳೀಯವಾಗಿ ಜನರ ಆಶೋತ್ತರಗಳಿಗೆ ಸ್ಪಂಧಿಸುವವರಲ್ಲದಿದ್ದರೆ, ವಿಧಾನಸಭೆ, ಲೋಕಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಸಾಮರ್ಥ್ಯ ಇಲ್ಲದವರಾಗಿದ್ದರೆ ಏನಾಗಬಹುದು? ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರ ಹೆಸರು ಹೇಳಿಕೊಂಡು ತಜ್ಞ ವೈದ್ಯರಿಲ್ಲದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋದಂತೆ, ವಿದ್ಯಾಸಂಸ್ಥೆಯ ಮುಖ್ಯಸ್ಥರ ಹೆಸರು ಕೇಳಿಕೊಂಡು ಸರಿಯಾದ ಶಿಕ್ಷಕರಿಲ್ಲದ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳಿಸಿದರೆ ಆಗುವ ಪರಿಸ್ಥಿತಿಯಂತೆ ನಮ್ಮ ಕ್ಷೇತ್ರದ ಜನರ ಪರಿಸ್ಥಿತಿ ಆಗಲಿಕ್ಕಿಲ್ಲವೇ? ನಮ್ಮ ಸಮಸ್ಯೆಗಳಿಗೆ ಆಶೋತ್ತರಗಳಿಗೆ ನಾವು ಮೋದೀಜೀಯವರಲ್ಲಿಗೆ, ರಾಹುಲ್ ಗಾಂಧಿಯವರಲ್ಲಿಗೆ ಹೋಗುವಂತೆ ಆಗಬಾರದು. ದೇಶದ ನಾಯಕರುಗಳಾದ ಅವರಿಗೆ ನಮ್ಮ ಹಾಗೆಯೇ ಎಲ್ಲಾ ಕ್ಷೇತ್ರಗಳ ಜನರ ಸಮಸ್ಯೆಗಳನ್ನು ಕೇಳಲು ಸಾಧ್ಯವೂ ಇಲ್ಲ. ನಮಗೂ ಅವರನ್ನು ತಲುಪಲು ಸಾಧ್ಯವೇ ಇಲ್ಲ. ನಾವು ಅವರನ್ನು ಓಟು ಹಾಕಿ ಗೆಲ್ಲಿಸಿಲ್ಲ. ಅವರು ನಮ್ಮ ನೇರ ಚುನಾಯಿತ ಪ್ರತಿನಿಧಿಗಳಲ್ಲ. ಅದಕ್ಕಾಗಿಯೇ ನಮ್ಮ ನಮ್ಮ ಕ್ಷೇತ್ರಕ್ಕೆ ಪ್ರತ್ಯೇಕ ಪ್ರತಿನಿಧಿಯ ಆಯ್ಕೆ ಇದೆ ಎಂದು ಆಯಾ ಕ್ಷೇತ್ರದ ಮತದಾರರು ಅರ್ಥ ಮಾಡಿಕೊಳ್ಳಬೇಕು.


ಜನತೆ ಯಾವುದೇ ಪಕ್ಷಕ್ಕೆ, ಯಾವುದೇ ವ್ಯಕ್ತಿಗೆ ಓಟು ನೀಡಲಿ. ನಮ್ಮ ಕ್ಷೇತ್ರದ ಅಭ್ಯರ್ಥಿ ವಿಧಾನ ಸಭೆಯಲ್ಲಿ ಮತ್ತು ಪಾರ್ಲಿಮೆಂಟ್‌ನಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವವನು, ರಾಜ್ಯ ದೇಶದ ಹಿತಾಸಕ್ತಿ ಕಾಪಾಡುವವನು ಮತ್ತು ಮುಖ್ಯವಾಗಿ ಜನರ ಆಶೋತ್ತರಗಳಿಗೆ ಸ್ಪಂಧಿಸುವವನು ಆಗಿರಬೇಕು. ಆದರೆ ಸ್ಥಳೀಯ ಅಭ್ಯರ್ಥಿ ದೇಶದ ಅತ್ಯಂತ ದೊಡ್ಡ ಸಮಸ್ಯೆಯಾದ ಲಂಚ, ಭ್ರಷ್ಠಾಚಾರವನ್ನು ನಿರ್ಮೂಲನೆ ಮಾಡುವ ಪ್ರತಿಜ್ಞೆ ಮಾಡುವವನಾಗಿರಲಿ ಎಂಬ ಆಶಯದಿಂದ ಈ ಲೇಖನ ಬರೆದಿದ್ದೇನೆ. ಈ ಉದ್ದೇಶದ ಮತ್ತು ಮಹಾತ್ಮಗಾಂಧಿಯವರ ಗ್ರಾಮಸ್ವರಾಜ್ಯದ ಚಿಂತನೆ, ಪ್ರಚಾರಕ್ಕಾಗಿಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಲು ಇಚ್ಚಿಸುತ್ತೇನೆ.

LEAVE A REPLY

Please enter your comment!
Please enter your name here