ಪುತ್ತೂರು: ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆಯ ಸಹಯೋಗದೊಂದಿಗೆ ಮಾ.3ರಂದು ವೇ ಮೂ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆ ನಡೆಯಿತು. ರಾತ್ರಿ ಸಂಕಲ್ಪ, ಮೂಡಪ್ಪ ಸಮರ್ಪಣೆ ಬಳಿಕ ರಂಗಪೂಜೆ, ಕಲ್ಪೋಕ್ತ ಪೂಜೆ, ಸರ್ವಾಲಂಕಾರ ಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಕ್ಷೇತ್ರದಲ್ಲಿ ಮೂಡಪ್ಪ ಸೇವೆ ಮೂರನೇ ಬಾರಿ ನಡೆದಿದೆ. ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು. ಸಂಜೆ ವೈದಿಕ ಕಾರ್ಯಕ್ರಮ ಆರಂಭ ಆಗುತ್ತಲೇ ಭಕ್ತರು ಆಗಮಿಸುತ್ತಲೇ ಇದ್ದರು. ಸಾವಿರಾರು ಭಕ್ತರು ಈ ಚಾರಿತ್ರಿಕ ಪರ್ವಕ್ಕೆ ಸಾಕ್ಷಿಯಾದರು. ಗಣಪತಿ ಗುಡಿಯೊಳಗಿರುವ ಬಲಮುರಿ ಗಣಪತಿ ವಿಗ್ರಹದ ಸುತ್ತಲೂ ಕಬ್ಬು ದಂಟುಗಳ ಕಣಜ ನಿರ್ಮಿಸಿ ಅಪ್ಪ ಕಜ್ಜಾಯ ತುಂಬಿಸಲಾಯಿತು. ಮೂಡಪ್ಪ ಸೇವೆಯೊಂದಿಗೆ ಶ್ರೀ ಗಣೇಶನಿಗೆ ಮಹಾ ರಂಗಪೂಜೆ ನಡೆಸಲಾಗಿದ್ದು, ರಾತ್ರಿ ಪೂಜೆಯ ಬಳಿಕ ಕವಾಟ ಬಂಧನ ನಡೆಸಲಾಯಿತು. ಮಾ.4ರಂದು ಉಷಃ ಪೂಜೆಯಲ್ಲಿ ಮೂಡಪ್ಪ ಉತ್ಥಾನ ನಡೆಯಲಿದೆ.
ಹಬ್ಬದ ಕಳೆ ತುಂಬಿ ತುಳುಕಿತು:
ದೇವಳದ ಗಣಪತಿ ಗುಡಿಯಲ್ಲಿ ಮೂಡಪ್ಪ ಸೇವೆ ಮೂರನೇ ಬಾರಿ ನಡೆಯುತ್ತಿರುವುದರಿಂದ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಪವಾಡಗಳಿಗೆ ಸಾಕ್ಷಿಯಾದ ಭಕ್ತರು ಮೂಡಪ್ಪ ಸೇವೆ ಸಂದರ್ಭ ಪಾಲ್ಗೊಂಡರು.
ಅಪ್ಪದ ರಾಶಿಯಲ್ಲಿ ಸಂಭ್ರಮಿಸಿದ ಗಣೇಶ:
ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಗಣಪತಿ ವಿಗ್ರಹ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವುದರಿಂದ ಆತನು ದಕ್ಷಿಣಾಮೂರ್ತಿ ಎಂದು ಕರೆಸಿಕೊಂಡಿದ್ದಾನೆ. ಗಣಪತಿ ವಿಗ್ರಹವನ್ನು ಸಂಜೆ ಅಪ್ಪಗಳಿಂದಲೇ ಮುಳುಗಿಸಲಾಯಿತು. ಇದಕ್ಕಾಗಿ 75 ಕೆ.ಜಿ ಅಕ್ಕಿ ಬಳಸಿ ಅಪ್ಪ ತಯಾರಿಸಲಾಗಿತ್ತು. ಸುಮಾರು 16 ಸಾವಿರ ಅಪ್ಪಗಳಿಂದ ಗಣಪತಿಯನ್ನು ಮುಚ್ಚಲಾಯಿತು. ಈ ಅಪ್ಪಗಳನ್ನು ಕಬ್ಬು ದಂಟುಗಳ ಕಣಜದಲ್ಲಿ ತುಂಬಿಸಲಾಯಿತು. ವಿಗ್ರಹದ ಜಿಹ್ವಾಗ್ರದವರೆಗೆ ಅಪ್ಪಗಳಿಂದ ಮುಚ್ಚಲಾಯಿತು.
ಸಭಾ ಕಾರ್ಯಕ್ರಮ:
ಮೂಡಪ್ಪ ಸೇವೆ ನಡೆಯುವ ಸಂದರ್ಭ ಬೋನಂತಾಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಬ್ರಾಹ್ಮಣರು ಒಟ್ಟಿಗೆ ಸೇರಿದಾಗ ದೇಶಕ್ಕೆ ಉತ್ತಮ ಭವಿಷ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಅವರು ಮಾತನಾಡಿ, ವಿಜ್ಞಾನ ಮುಂದಿದ್ದರೂ ಇಸ್ರೋದ ವಿಜ್ಞಾನಿಗಳು ರಾಕೇಟ್ ಹಾರಿಸುವ ಮುನ್ನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಾಕೇಟ್ ಮಾದರಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಯಾಕೆಂದರೆ ಬುದ್ದಿಗೆ ಅದಿದೇವತೆ ಗಣಪತಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮನಸ್ಸು ಮತ್ತು ಬುದ್ದಿ ಎದುರು ಬಂದಾಗ ಬುದ್ದಿ ಹೇಳಿದ ಹಾಗೆ ಕೇಳಬೇಕು ಎಂದ ಅವರು ಬ್ರಾಹ್ಮಣ್ಯ ಎಂಬುದಕ್ಕೆ ತುಂಬಾ ಪಾವಿತ್ರ್ಯತೆ ಇದೆ. ಬ್ರಾಹ್ಮಣರು ಲೋಕಕಲ್ಯಾಣಕ್ಕಾಗಿ ಹುಟ್ಟಿಕೊಂಡವರು. ಯಾವುದೇ ಜಾತಿಯ ವೈಷಮ್ಯಕ್ಕೆ ಹುಟ್ಟಿಕೊಂಡವರಲ್ಲ. ಲೋಕ ಕಲ್ಯಾಣ ಮಾಡಲು ಏನೆಲ್ಲಾ ಮಾಡಬೇಕು ಎಂಬುದಕ್ಕೆ ಸಹಜ ಪ್ರತಿಭೆ, ಸಹಜ ಬುದ್ದಿಯನ್ನು ಮೈಗೂಡಿಸಿಕೊಂಡಿರುವ ಬ್ರಾಹ್ಮಣರು ಒಟ್ಟು ಸೇರಿದರೆ ಸಮಾಜದ ಲೋಕ ಕಲ್ಯಾಣ, ದೇಶಕ್ಕೆ ತುಂಬಾ ಉತ್ತಮ ಭವಿಷ್ಯವು ಸಿಗುತ್ತದೆ ಎಂದರು.
ಮೂಡಪ್ಪ ಸೇವೆಯಿಂದ ಅಮೃತಮಯ:
ವೇ ಮೂ ಅನಂತನಾರಾಯಣ ಭಟ್ ಪರಕ್ಕಜೆ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಓಂಕಾರಕ್ಕೆ ಅಧಿಪತಿಯೇ ಗಣಪತಿ, ನೈವೇದ್ಯವನ್ನೇ ಗಣಪತಿಯನ್ನಾಗಿ ಆರಾಽಸುವುದೇ ಮೂಡಪ್ಪ ಸೇವೆಯ ವಿಶೇಷ, ಮೂಡಪ್ಪ ಸೇವೆಯಿಂದ ಗಣಪತಿ ಅಮೃತಮಯವಾಗುತ್ತಾನೆ. ನಮ್ಮೆಲ್ಲರ ಜೀವನ ಅಮೃತಮಯವಾಗಲು ಸಾಧ್ಯ ಎಂದ ಅವರು ಎಲ್ಲಾ ಸಮಾಜಕ್ಕೂ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.
ಆಚಾರ ವಿಚಾರ ಉಳಿದರೆ ಸಮಾಜ ಉಳಿಯುತ್ತದೆ:
ಶಿವಬ್ರಾಹ್ಮಣ ಸ್ಥಾನಿಕ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ, ಇವತ್ತು ಆಚಾರ ವಿಚಾರಗಳು ನಮ್ಮಿಂದ ದೂರ ಆಗುತ್ತಿದೆ. ಯುವಕರಿಗೆ ಇದನ್ನು ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕು. ಹಾಗಾಗಿ ಇದನ್ನು ಉಳಿಸಿದರೆ ಸಮಾಜ ಬೆಳೆಯುತ್ತದೆ. ಹವ್ಯಕ ಸಮಾಜ ಹಾಕಿಕೊಂಡ ಕಾರ್ಯಕ್ರಮದಲ್ಲಿ ಐದು ವಿಪ್ರಗಳನ್ನು ಒಂದೇ ವೇದಿಕೆಯಲ್ಲಿ ಸೇರಿರುವುದು ಉತ್ತಮ ವಿಚಾರ. ನಾವೆಲ್ಲ ಒಂದೇ ಎಂಬ ಕಾರ್ಯಕ್ರಮ ಇಲ್ಲಿ ತೋರಿಸುವ ಕೆಲಸ ಆಗಿದೆ ಎಂದ ಅವರು ಎ.25ರಂದು ಶಿವ ಬ್ರಾಹ್ಮಣ ಸಂಘ ಕಲ್ಲಾರೆಯ ಶಿವಕೃಪಾ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ಎಲ್ಲರನ್ನು ಆಮಂತ್ರಿಸಿದರು.
ನಮ್ಮಲ್ಲಿ ಒಗ್ಗಟ್ಟು ಬಹಳ ಅಗತ್ಯ:
ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ದಿವಾಕರ ಕೆ.ನಿಡ್ವಣ್ಣಾಯರವರು ಮಾತನಾಡಿ, ಇವತ್ತು ಬ್ರಾಹ್ಮಣ ಸಮಾಜವನ್ನು ತುಳಿಯುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಒಗ್ಗಟ್ಟು ಬಹಳ ಅಗತ್ಯ. ಮುಂದೆ ಇಂತಹ ಉತ್ತಮ ಕಾರ್ಯಕ್ರಮ ಮೂಡಿ ಬರಲಿ ಎಂದು ಹೇಳಿದರು.
ಸಂಪ್ರದಾಯ ಬೇರೆಯಾದರೂ ಹೊರಗೆ ನಾವೆಲ್ಲ ಒಂದೇ:
ಕೂಟ ಮಹಾಜಗತ್ತು ಇದರ ಅಧ್ಯಕ್ಷ ಸದಾಶಿವ ಹೊಳ್ಳ ಅವರು ಮಾತನಾಡಿ, ನಮ್ಮ ಸಮಾಜದ 200 ಮನೆಗಳು ಇಲ್ಲಿ ಇರಬಹುದು. ಆದರೆ ಇಂತಹ ಕಾರ್ಯಕ್ರಮದ ಮೂಲಕ ನಮಗೂ ಶಕ್ತಿ ಬರುತ್ತದೆ. ಇವತ್ತು ಬ್ರಾಹ್ಮನರು ಎಂದಾಗ ಎಲ್ಲದೂ ಒಂದೇ. ನಮ್ಮ ಆಚಾರ ಸಂಪ್ರದಾಯ ಬೇರೆ ಬೇರೆ ಇರಬಹುದು. ಆದರೆ ಅದು ಒಳಗೆ ಮಾತ್ರ ಇಟ್ಟುಕೊಂಡು. ಹೊರಗೆ ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕೆಂದರು.
ಬ್ರಾಹ್ಮಣ ಸಮಾಜ ಸಮಗ್ರ ಹಿಂದೂ ಸಮಾಜದ ಅಭಿವೃದ್ದಿ ಬಯಸುತ್ತಿದೆ:
ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಮಹೇಶ್ ಕಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುರೋಹಿತರು ವೈದಿಕವಾದ ಶ್ರೇಷ್ಠತೆಯಿಂದ ಪುರದ ಹಿತವನ್ನು ಬಯಸುತ್ತಾರೆ. ಅದೇ ರೀತಿ ಬ್ರಾಹ್ಮಣ ಸಮಾಜ ಸಮಗ್ರವಾದ ಹಿಂದೂ ಸಮಾಜದ ಸಂಘಟನೆಯನ್ನು ಮತ್ತು ಅಭಿವೃದ್ಧಿಯನ್ನು ಬಯಸುತ್ತದೆ. ಅಂತಹ ಸಂದೇಶ ಬಲಮುರಿ ಸನ್ನಿಧಾನದಿಂದ ಹೋಗಬೇಕು. ಈ ಸಮಾಜ ಒಂದಾಗುವ ಆದರ್ಶ ಪ್ರಾಯವಾದ ಮುನ್ನುಡಿಯನ್ನು ಈ ವೇದಿಕೆಯಿಂದ ಕೊಡಬೇಕೆಂದು ಇವತ್ತಿನ ಕಾರ್ಯಕ್ರಮ ಆಯೋಜಿತವಾಗಿದೆ. ದೇವರು ಸರ್ವಾಂತರ್ಯಾಮಿ. ಆತನು ಎಲ್ಲರಿಗೂ ಸೇರಿದವ. ಆದರೆ ದೇವರನ್ನು ಆರಾಽಸಲು ಮಾಧ್ಯಮವಾಗಿ ಪುರೋಹಿತರನ್ನು ತೆಗೆದುಕೊಳ್ಳುತ್ತೇವೆಯೋ ಅದೇ ರೀತಿ ಸಮಾಜವನ್ನು ಸಂಘಟಿಸುವ ಪ್ರಯತ್ನದ ಅಂಗವಾಗಿ ಇವತ್ತು ನಾವು ಒಂದಾಗುವ ಕೆಲಸ ಈ ವೇದಿಕೆಯ ಮೂಲಕ ಮಾಡುತ್ತಿದ್ದೇವೆ. ಅದಕ್ಕಾಗಿ ವಿಶೇಷವಾಗಿ ಗಣಪನ ಹಬ್ಬ ಆಯೋಜಿಸಿದ್ದೇವೆ ಎಂದರು. ಹವ್ಯಕ ಸಭಾದ ಅಧ್ಯಕ್ಷ ಶಿವಶಂಕರ ಭಟ್ಟ ಬೋನಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂಡಪ್ಪ ಸೇವಾ ಸಮಿತಿಯ ಪಾಕಶಾಲೆಯ ಸಂಯೋಜಕ ಚಂದ್ರಶೇಖರ್ ಭಟ್, ಮೂಡಪ್ಪ ಸೇವಾ ಸಮಿತಿ ಕಾರ್ಯದರ್ಶಿ ಈಶಾನ್ಯ ಶಂಕರ್ ಭಟ್, ಉಪಾಧ್ಯಕ್ಷ ಸತ್ಯಶಂಕರ ಸಾಮೆತ್ತಡ್ಕ, ಶರಾವತಿ ರವಿನಾರಾಯಣ, ರಾಜಗೋಪಾಲ ಭಟ್, ಗೋಪಾಕೃಷ್ಣ ಅತಿಥಿಗಳನ್ನು ಗೌರವಿಸಿದರು. ವಿ ಜಿ ಭಟ್, ವಿಜಯಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಮೂಡಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಸುರುಡೇಲು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯೋಪಾಸನ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಂಜೆ ರಾಮಾಪರ್ಣ ಭಜನಾ ತಂಡ, ಕಬಕ ವಲಯದಿಂದ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿಯವರಿಂದ ಭಜನಾ ಕಾರ್ಯಕ್ರಮ, ಬಳಿಕ ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಶಾಸೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಇಂದು ಪ್ರತಿಷ್ಠಾವರ್ಧಂತಿ
ಮಾ.4ರಂದು ಬೆಳಿಗ್ಗೆ ಉಷಃ ಪೂಜೆ, ಮೂಡಪ್ಪ ಉತ್ಥಾನ ನಡೆಯಲಿದೆ. ಸಂಜೆ ಗಂಟೆ 4 ರಿಂದ ರಾಮಾರ್ಪಣಾ ಭಜನಾ ತಂಡ ದರ್ಬೆ ವಲಯದಿಂದ ಭಜನೆ, ಗಂಟೆ 4.45 ರಿಂದ ಧಾರ್ಮಿಕ ಶಿಕ್ಷಣ ಕೇಂದ್ರ ಮಹಾಲಿಂಗೇಶ್ವರ ದೇವಸ್ಥಾನದಿಂದ ಮತ್ತು ಹಿಂದೂ ಧಾರ್ಮಿಕ ಶಿಕ್ಷಣ ಮುಂಡಿಯತ್ತಾಯ ಕೇಂದ್ರ ಪಾಂಗಾಳಯಿ ವತಿಯಿಂದ ಭಜನೆ ನಡೆಯಲಿದೆ. ವಿಜಯ ಸರಸ್ವತಿ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಿಯಾಗಲಿದ್ದು, ಆ ಬಳಿಕ ವರ್ಣಕುಟೀರ ತಂಡದಿಂದ ಶ್ಯಾಡೋ ಪ್ಲೇ ಪ್ರದರ್ಶನಗೊಳ್ಳಲಿದೆ. ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ವೈಭವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಲಮುರಿ ಸನ್ನಿಧಾನದಲ್ಲಿ ನಡೆದ ವಿವಾಹ ವಿಚ್ಛೇದನವಾಗಿಲ್ಲ:
ಬಲಮುರಿ ಗಣಪತಿ ಸನ್ನಿಧಾನದಲ್ಲಿರುವ ಸಭಾಭವನದಲ್ಲಿ ಅನೇಕ ವಿವಾಹಗಳು ನಡೆದಿದೆ. ಆದರೆ ಇಲ್ಲಿಯ ತನಕ ಗಣಪತಿಯ ಅನುಗ್ರಹದಿಂದ ಒಂದೇ ಒಂದು ವಿವಾಹ ವಿಚ್ಛೇದನ ಆಗಿಲ್ಲ. ಬಲಮುರಿ ಗಣಪತಿ ವಿದ್ಯೆ ಮತ್ತು ಜ್ಞಾನ ಬುದ್ದಿಗೆ ಶ್ರೇಷ್ಠವುಳ್ಳವನು. ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದಂತೆ ಇಲ್ಲಿ ಪ್ರಾರ್ಥಿಸಿದ ಎಲ್ಲಾ ಕೆಲಸಗಳಿಗೂ ಉತ್ತಮ ಫಲಿತಾಂಶ ಲಭಿಸಿದೆ.
-ಡಾ.ಗಿರಿಧರ ಕಜೆ, ಅಧ್ಯಕ್ಷರು ಅಖಿಲ ಹವ್ಯಕ ಮಹಾಸಭಾ