ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಲಯ ಮಟ್ಟದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

0

ಕನ್ನಡವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿಗಿದೆ: ನಟ ಸುಚೇಂದ್ರ ಪ್ರಸಾದ್

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರಕಾಲೇಜು ವಲಯ ಮಟ್ಟದ ಯುವಜನೋತ್ಸವ -2024ಕ್ಕೆ ಮಾರ್ಚ್ 4ರಂದು ಚಾಲನೆ ನೀಡಲಾಯಿತು. ಕನ್ನಡದ ಪ್ರಸಿದ್ದ ನಟ ಮತ್ತು ಸೃಜನಶೀಲ ನಿರ್ದೇಶಕರು ಮತ್ತು ಸಂಸ್ಕಾರ ಭಾರತೀ, ದಕ್ಷಿಣ ಕರ್ನಾಟಕದ ಪ್ರಾಂತ್ಯಧ್ಯಕ್ಷ ಕ. ಸುಚೇಂದ್ರ ಪ್ರಸಾದ್ ಉದ್ಘಾಟಕರಾಗಿ ಆಗಮಿಸಿ ದೀಪ ಬೆಳಗುವ ಮೂಲಕ 2ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ ಚೆಂಡೆ ಬಡಿಯುವ ಮೂಲಕ ಸಾಂಸ್ಕೃತಿಕ ಸ್ಪರ್ಧೆಗಳಿಗೆ ವಿಶೇಷ ರೀತಿಯಲ್ಲಿ ಚಾಲನೆ ನೀಡಿದರು.

ಕನ್ನಡದ ಮಹತ್ವವನ್ನು ತನ್ನ ಮಾತಿನಲ್ಲಿ ಉಲ್ಲೇಖಸಿ, ಕನ್ನಡವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿಗಿದೆ. ಮೊದಲು ನಾವು ಕನ್ನಡದಲ್ಲಿ ಮಾನ್ಯರಾಗೋಣ ಎನ್ನುವ ಕರೆ ನೀಡಿದರು. ಜೊತೆಗೆ ಯುಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ದೇಶ, ಅದರಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನ, ಅದರಿಂದ ನಾವು ಬೆಳೆಸಿಕೊಳ್ಳಬಹುದಾದ ಮೌಲ್ಯಗಳ ಕುರಿತು ವಿವರಿಸಿದ ಅವರು, ನ್ಯಾಯದ ನಿಜ ಅರ್ಥವನ್ನು ವಿಸ್ತರಿಸಿ ಹೇಳಿದರು. ಜೊತೆಗೆ ವಿವೇಕಾನಂದರ ವಿವೇಕದ ಜೊತೆಗಿನ ಆನಂದವನ್ನೂ ತಾನು ಸಮಾಜಕ್ಕೆ ಉಣಬಡಿಸಿ, ಜೀವನದುದ್ದಕ್ಕೂ, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಕಾನೂನು ವಿದ್ಯಾರ್ಥಿಗಳು ಬದುಕಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘವು ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ತಮ್ಮ ವಿದ್ಯಾಸಂಸ್ಥೆಗಳ ಮೂಲಕ ನಿರಂತರವಾಗಿ ನಡೆಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶ್ರೇಷ್ಠ ಗುಣಮಟ್ಟದ ಕಾನೂನು ಶಿಕ್ಷಣವನ್ನು ಜೀವನ ಮೌಲ್ಯಗಳ ಜೊತೆಗೆ ಕಲಿಸಿ, ಸಮಾಜದಲ್ಲಿ ಮೌಲ್ಯಯುತವಾದ ಬದುಕನ್ನು ರೂಪಿಸಿಕೊಳ್ಳುವಂತಹ ಚಾಕಚಕ್ಯತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ನೀಡುತ್ತದೆ. ಸೇವಾ ಮನೋಭಾವದ ಆಡಳಿತ ಮಂಡಳಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಆಧುನಿಕ ಮಾದರಿಯ ಶೈಕ್ಷಣಿಕ ಪರಿಸರವನ್ನು ನಿರ್ಮಿಸಿ, ಆ ಮೂಲಕ ಮೌಲ್ಯಯುತ ಶಿಕ್ಷಣವನ್ನು ನೀಡುವ ಸಾಹಸವನ್ನು ಕಳೆದ 35 ವರ್ಷಗಳಿಂದ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ನಡೆಸುತ್ತ ಬರುತ್ತಿದೆ ಎಂದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ.ಎಂ, ಕಾನೂನು ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ, ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕಿ ಶೈನಿ ವಿಜೇತಾ, ಡಾ. ರೇಖಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಸಂಧ್ಯಾ ಎ ಪಿ ನಿರೂಪಿಸಿ, ಉಪನ್ಯಾಸಕಿ ದಿಶಾ ವಂದಿಸಿದರು.

ವೇದಿಕೆಯ ಮುಂಭಾಗದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖ, ನಿರ್ದೇಶಕ ಡಾ. ಸುಧಾ ಎಸ್ ರಾವ್ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಬೋಧಕ ಮತ್ತು ಬೋಧಕೇತರ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘದವರು ಹಾಗೂ ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.

ವಲಯ ಮಟ್ಟದ ಸಾಂಸ್ಕೃತಿಕ ಉತ್ಸವ-2024:
ನಮ್ಮ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿರುವ ಎರಡು ದಿನದ ಸಾಂಸ್ಕೃತಿಕ ಉತ್ಸವದಲ್ಲಿ ಕಾನೂನು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸಲು ಐದು ಬಗೆಯ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಗೀತ ಸ್ಪರ್ಧಾ ವಿಭಾಗದ ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಸಮೂಹ ಗೀತೆ, ಜಾನಪದ ಗೀತೆ, ನೃತ್ಯ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ನೃತ್ಯ ನಡೆಯಲಿದೆ. ಸಾಹಿತ್ಯದ ಸ್ಪರ್ಧೆಯಲ್ಲಿ ವಾಕ್ ಪಟ್ಟುತ್ವ ಅಥವಾ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ನಡೆಯಲಿದೆ. ರಂಗಪ್ರಯೋಗ ವಿಭಾಗದಲ್ಲಿ ಕಿರುರೂಪಕ(skit), ಮಿಮಿಕ್ರಿ ಹಾಗೂ ಕಲಾ ವಿಭಾಗದಲ್ಲಿ ಸ್ಥಳದಲ್ಲೇ ಬಣ್ಣ ಹಚ್ಚುವ ಸ್ಪರ್ಧೆ(spot Painting), ವ್ಯಂಗ್ಯ ಚಿತ್ರ ಬಿಡಿಸುವುದು ಹಾಗೂ ರಂಗೋಲಿ ಸ್ಪರ್ಧೆ ಇರುತ್ತವೆ. ಇಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ವಿವಿ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಾಂಸ್ಕೃತಿಕ ಉತ್ಸವದಲ್ಲಿ ಮಂಗಳೂರು ವಲಯದ 8 ಕಾಲೇಜುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಈ ಸಾಂಸ್ಕೃತಿಕ ಉತ್ಸವದಲ್ಲಿ ಜಾನಪದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾರ್ಚ್ 5ರಂದು ಮದ್ಯಾಹ್ನ 2.30ಕ್ಕೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here