ʼಸರಕಾರಿ ಜಾಗ ಕಬಳಿಸುವ ಗತಿಗೇಡು ನನಗೆ ಬಂದಿಲ್ಲʼ – ಇಸಾಕ್ ಸಾಲ್ಮರ ಆರೋಪಕ್ಕೆ ಮಹಮ್ಮದ್ ಆಲಿ ಪ್ರತಿಕ್ರಿಯೆ

0

ಪುತ್ತೂರು: ನಾನು ದೊಡ್ಡ ಜಮೀನ್ದಾರ ಕುಟುಂಬದಿಂದ ಬಂದವನಾಗಿದ್ದೇನೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪಿತ್ರಾರ್ಜಿತ ಆಸ್ತಿಯನ್ನೇ ಬಿಟ್ಟು ಬಂದವನಿಗೆ ಜುಜುಬಿ ಸರಕಾರಿ ಜಾಗವನ್ನು ಕಬಳಿಸುವ ಗತಿಗೇಡು ನನಗೆ ಬಂದಿಲ್ಲ ಎಂದು ನಗರಸಭೆಯ ಮಾಜಿ ಹಿರಿಯ ಸದಸ್ಯ, ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಎಚ್.ಮಹಮ್ಮದ್ ಆಲಿ ಹೇಳಿದ್ದಾರೆ. ಹೆಚ್.ಮಹಮ್ಮದಾಲಿಯವರು, ಬಡ ಜನರಿಗೆ ನೀಡಲಾಗುವ 5 ಮನೆ ನಿವೇಶನಗಳ ದುರುಪಯೋಗ ಹಾಗೂ ಕಂದಾಯ ಇಲಾಖೆಯ ಮತ್ತು ನಗರ ಸಭಾ ಕಾಯ್ದೆಯನ್ನು ಉಲಂಘಿಸಿರುವ ಕುರಿತು ಮಾಜಿ ಪುರಸಭಾ ಸದಸ್ಯ ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಆಲಿಯವರು, ಕಳೆದ 20 ವರ್ಷಗಳಿಂದ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿರುತ್ತಾರೆ. ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ, ರಾಜಕೀಯವಾಗಿ ದುಷ್ಟಕೂಟವೊಂದು ಬಹಳ ಹಿಂದಿನಿಂದಲೇ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಲೇ ಬಂದಿದೆ. ಈಗ ಆ ದುಷ್ಟ ಕೂಟಕ್ಕೆ ಒಂದಿಬ್ಬರು ಹೊಸದಾಗಿ ಸೇರ್ಪಡೆ ಕೊಂಡಿದ್ದಾರೆ. ಅವರಿಗೆ ಎದುರಿಗೆ ಬಂದು ಮಾತಾಡುವ ದಮ್ಮು, ತಾಕತ್ ಎಂಬುದೇ ಇಲ್ಲ, ಅದಕ್ಕೆ ಯಾರ್ಯಾರದ್ದೋ ಮೂಲಕ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿಸಿ, ನನ್ನನ್ನು ಅವಮಾನಿಸುವ ಪ್ರಯತ್ನ ನಡೆಸಿರುತ್ತಾರೆ. ಗಾಜಿನ ಮನೆಯಲ್ಲಿ ಕುಳಿತು ಇನ್ನೊಂದು ಮನೆಗೆ ಕಲ್ಲು ಬಿಸಾಡಿದಂತೆ ಇವರ ಕಥೆಯೂ ಆಗಿದೆ. ಈವರೆಗೂ ನಾನು ಸುಮ್ಮನಿದ್ದೆ ಇನ್ನು ಸುಮ್ಮನಿರುವುದಿಲ್ಲ. ಇವರ ವಿರುದ್ಧ ಖಂಡಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ. ಆರೋಪ ಮಾಡಿದವರು ತಾವು ಮಾಡಿದ ಆರೋಪವನ್ನು ಸಾಬೀತು ಪಡಿಸಲೇಬೇಕು ಅಲ್ಲಿಯವರೆಗೂ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಕಬಳಿಸಿದ್ದೇನೆಂದು ಹೇಳಿರುವ 5 ಮನೆ ನಿವೇಶನಗಳನ್ನು ಹುಡುಕಿಕೊಡಲಿ. ಅದನ್ನು ಬಡವರಿಗೆ ನಾನೇ ನೀಡುತ್ತೇನೆ ಎಂದು ಆಲಿ ಸವಾಲೆಸೆದಿದ್ದಾರೆ.

LEAVE A REPLY

Please enter your comment!
Please enter your name here