ಬೆಟ್ಟಂಪಾಡಿ :ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ 2024-25ರ ಕೇಂದ್ರ ಮಧ್ಯಂತರ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮವು ನಡೆಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಟದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸಯ್ಯ. ಕೆ 2024-25 ಮಧ್ಯಂತರ ಬಜೆಟ್ ನ್ನು ವಿಶ್ಲೇಷಣೆ ಮಾಡಿದರು. ಬಜೆಟ್ ನ ಗಾತ್ರ, ಆದಾಯ, ಖರ್ಚು ವೆಚ್ಚ ಮತ್ತು ವಿತ್ತೀಯ ಕೊರತೆ ಹಾಗೂ ವಿವಿಧ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು. ಇದರ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಮಾತನಾಡಿ, ಕೇಂದ್ರ ಬಜೆಟ್ ಕುರಿತು ಪ್ರತಿಯೊಬ್ಬರಿಗೂ ತಿಳಿದಿರಬೇಕು. ವಿದ್ಯಾರ್ಥಿಗಳು ಬಜೆಟ್ ನಂತಹ ವಿಷಯಗಳನ್ನು ತಿಳಿದುಕೊಂಡಾಗ ದೇಶದ ಆಗುಹೋಗುಗಳ ಕುರಿತು ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ಕಾಂತೇಶ್.ಎಸ್ ಕೇಂದ್ರದ ಬಜೆಟ್ ವಿಶ್ಲೇಷಣೆಯ ಮಹತ್ವ ಮತ್ತು ಅಗತ್ಯತೆ ಕುರಿತು ತಿಳಿಸಿ, ಕಾರ್ಯಗಾರದ ಸದುಪಯೋಗ ಪಡೆಯುವಂತೆ ಸೂಚಿಸಿದರು.
ಕಾರ್ಯಗಾರದ ನಂತರ ವಿದ್ಯಾರ್ಥಿಗಳಿಂದ ಬಜೆಟ್ ವಿಶ್ಲೇಷಣೆಯು ನಡೆಯಿತು. ಎಂಟು ವಿದ್ಯಾರ್ಥಿನಿಯರು 2024-25ರ ಕೇಂದ್ರ ಮಧ್ಯಂತರ ಮುಂಗಡ ಪತ್ರದ ಮುಖ್ಯಾಂಶಗಳು, ಆದಾಯ, ತೆರಿಗೆ, ಖರ್ಚು, ಹೊಸ ಯೋಜನೆಗಳು, ಕೋಶೀಯ ಕೊರತೆ ಎಂಬಿವುಗಳ ಕುರಿತು ವಿಚಾರವನ್ನು ಮಂಡಿಸಿದರು. ಇದರೊಂದಿಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ತಿಮ್ಮಯ್ಯ .ಎಲ್.ಎಮ್ ಸ್ವಾಗತಿಸಿ,ಅರ್ಥಶಾಸ್ತ್ರದ ಉಪನ್ಯಾಸಕಿ ಸಂಧ್ಯಾ ಸುವರ್ಣ ವಂದಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ರಮ್ಯಶ್ರೀ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.