ಕಡಬ: ಹತ್ತು ದಿನಗಳ ಅವಧಿಗೆ ಆರೋಪಿ ಪೊಲೀಸರ ಕಸ್ಟಡಿಗೆ

0

ಕಡಬ:ಮಾ.4ರ ಬೆಳಿಗ್ಗೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರನ್ನು ಗುರಿಯಾಗಿಸಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯಾಗಿರುವ ಕೇರಳ ಮೂಲದ ಎಂ.ಬಿ.ಎ.ವಿದ್ಯಾರ್ಥಿ ಅಭಿನ್‌ನನ್ನು ಮಾ.5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಆತನನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.


ರೈಲಿನಲ್ಲಿ ಬಂದಿದ್ದ:
ಅಭಿನ್ ಭಾನುವಾರ ತನ್ನ ಹುಟ್ಟೂರು ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದ.ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ನಿವಾಸಿಯಾಗಿರುವ ಅಭಿನ್, ಮಾ.3ರ ಮಧ್ಯಾಹ್ನ ರೈಲಿನ ಮೂಲಕ ನೆಲಂಬೂರುನಿಂದ ಹೊರಟು ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಬೆಳಿಗ್ಗೆಯವರೆಗೆ ಅಲ್ಲಿ ಕಾಲ ಕಳೆದ ಆತ ಬಳಿಕ ಮಂಗಳೂರಿನಿಂದ ಬಸ್ಸು ಹಿಡಿದು ಕಡಬಕ್ಕೆ ಆಗಮಿಸಿದ್ದ.


ಸ್ನೇಹಿತ ಸಹಕರಿಸಿದ್ದನೇ?:
ಬೇಕರಿಯಿಂದ ತೆರಳಿದ ಆರೋಪಿಯು ಕಡಬದಲ್ಲಿ ಪಾಳು ಮನೆಯೊಂದರಲ್ಲಿ ಕಾಲೇಜು ಸಮವಸ್ತ್ರದ ಬಟ್ಟೆಯನ್ನು ಧರಿಸಿದ್ದ.ಇದಕ್ಕೆ ಈತನ ಕಡಬದ ಸ್ನೇಹಿತ ಸಹಕರಿಸಿದ್ದ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಸಂತ್ರಸ್ತೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲೇ ಈತನ ಸ್ನೇಹಿತನೋರ್ವ ವಿದ್ಯಾರ್ಥಿಯಾಗಿದ್ದು ಆತನ ಮೂಲಕ ಅಭಿನ್ ಕಾಲೇಜು ವಿದ್ಯಾರ್ಥಿಯ ಯೂನಿಫಾರ್ಮ್ ಎರವಲು ಪಡೆದಿದ್ದ ಎನ್ನುವ ಆರೋಪ ಕೇಳಿ ಬರುತ್ತಿದೆ.ಮತ್ತೊಂದೆಡೆ,ದುಷ್ಕೃತ್ಯ ಎಸಗಲು ಕೆಲ ಸಮಯದಿಂದ ಸಂಚು ರೂಪಿಸಿದ್ದ ಅಭಿನ್ ಕಡಬ ಪ.ಪೂ.ಕಾಲೇಜು ವಿದ್ಯಾರ್ಥಿಯ ಯೂನಿಫಾರ್ಮ್ ಹೋಲುವ ಬಣ್ಣದ ಬಟ್ಟೆಯನ್ನು ಕೇರಳದಲ್ಲಿಯೇ ಹೊಲಿಸಿ ತಂದಿದ್ದ ಎಂದೂ ಹೇಳಲಾಗುತ್ತಿದೆ.ಇದರಲ್ಲಿ ನಿಜ ಯಾವುದು ಎನ್ನುವ ನಿಟ್ಟಿನಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ.


ಅನುಮಾನ ಬಾರದಂತೆ ವಿದ್ಯಾರ್ಥಿಯಂತೆ ಬಂದಿದ್ದ:
ಸಂತ್ರಸ್ತ ವಿದ್ಯಾರ್ಥಿನಿ ಕಲಿಯುತ್ತಿದ್ದ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ನಡೆಯುತ್ತಿದೆ.ಈ ಕಾಲೇಜು ಸೇರಿದಂತೆ ವಲಯದ ಮೂರು ಕಾಲೇಜಿನ ವಿದ್ಯಾರ್ಥಿಗಳಿಗೂ ಕಡಬ ಸ.ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾಗಿದೆ.ಹೀಗಾಗಿ ಪರೀಕ್ಷೆ ಸಮಯ ಈ ಕಾಲೇಜಿಗೆ ಉಳಿದ ಕಾಲೇಜ್ ವಿದ್ಯಾರ್ಥಿಗಳು ಬರುವ ಕಾರಣ ಅಭಿನ್ ಬಗ್ಗೆ ದಿಢೀರ್ ಅನುಮಾನ ಉಂಟಾಗಲು ಸಾಧ್ಯವಿಲ್ಲ.ಹೀಗಾಗಿ ಯಾರಿಗೂ ಅನುಮಾನ ಬಾರದಂತೆ ಆತ ಪರೀಕ್ಷೆ ನಡೆಯುವ ದಿನದಂದೇ, ವಿದ್ಯಾರ್ಥಿಯ ಸಮವಸ ಧರಿಸಿ ಆಗಮಿಸಿ ಕೃತ್ಯ ಎಸಗಿ ಪರಾರಿಯಾಗಲು ಸಂಚು ರೂಪಿಸಿದ್ದ.ವಿದ್ಯಾರ್ಥಿಗಳು ಇನ್ನೇನು ಪರೀಕ್ಷಾ ಕೇಂದ್ರದ ಒಳಗಡೆ ತೆರಳುವ ಕೊನೆಯ ಕ್ಷಣದಲ್ಲೇ ಕೃತ್ಯ ಎಸಗಲು ಕಾದು ಕುಳಿತಿದ್ದ ಆತ ಯೋಜಿಸಿದಂತೆ ಕೃತ್ಯ ಎಸಗಿ ಪರಾರಿಯಾಗಲೆತ್ನಿಸಿದ್ದನಾದರೂ ವಿದ್ಯಾರ್ಥಿಗಳ ತಂಡವೊಂದು ಆತನನ್ನು ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸುವ ಮೂಲಕ ಪರಾರಿಯಾಗುವ ಆತನ ಪ್ರಯತ್ನವನ್ನು ವಿಫಲಗೊಳಿಸಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.


ಕಡಬದಿಂದಲೇ ಆ್ಯಸಿಡ್ ಖರೀದಿ:
ಬೆಳಿಗ್ಗೆ 7.30ರ ಸುಮಾರಿಗೆ ಕಡಬಕ್ಕೆ ಬಂದಿದ್ದ ಆರೋಪಿ ಅಭಿನ್ ಬಳಿಕ ಕಡಬ ಪೇಟೆಯ ಅಂಗಡಿಯೊಂದರಿಂದಲೇ ಆ್ಯಸಿಡ್ ಖರೀದಿಸಿದ್ದ.ಪೊಲೀಸ್ ವಿಚಾರಣೆ ವೇಳೆ ಆರೋಪಿ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.


ಪ್ರೀತಿ ನಿರಾಕರಣೆ ಕಾರಣ?:
ಆ್ಯಸಿಡ್ ದಾಳಿಯ ಪ್ರಧಾನ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಆರೋಪಿ ಪೀತಿಸುತ್ತಿದ್ದ.ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು.ಆರೋಪಿ ಅಬಿನ್ ಆಕೆಯ ಮನೆಯ ಹತ್ತಿರದ ನಿವಾಸಿ.ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿ ಓದುತ್ತಿದ್ದು ಅವರ ಮುಖಾಂತರ ಅಭಿನ್‌ಗೆ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಬಳಿಕ ಅವರೊಳಗೆ ಸ್ನೇಹ ಸಂಬಂಧ ಬೆಳೆದು ಬಳಿಕ ಪ್ರೇಮಕ್ಕೆ ತಿರುಗಿತ್ತು.ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು.ಇದೇ ಕಾರಣಕ್ಕೆ ಯುವತಿಯು ಆರೋಪಿಯ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದ ಕುಪಿತಗೊಂಡು ಆರೋಪಿ ಆ್ಯಸಿಡ್ ದಾಳಿ ನಡೆಸಿದ್ದಾನೆ ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

ಕಡಬದ ಪಾಳು ಬಿದ್ದ ಮನೆಯಲ್ಲಿ ಬಟ್ಟೆ ಬದಲಿಸಿದ್ದ
ಅಬಿನ್ ಕಾಲೇಜು ಪ್ರವೇಶಿಸುವುದಕ್ಕೆ ಮೊದಲು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ.ತಾನು ಧರಿಸಿದ್ದ ಬಟ್ಟೆಯನ್ನು ಆತ ಕಡಬದ ಪಾಳು ಬಿದ್ದ ಮನೆಯೊಂದರಲ್ಲಿ ಬದಲಿಸಿ ಸಮವಸ ಹಾಕಿಕೊಂಡಿದ್ದ.ಕಪ್ಪು ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿಕೊಂಡು ಮಂಗಳೂರಿನಿಂದ ಬಂದಿದ್ದ ಆತ ತನ್ನಲ್ಲಿದ್ದ ಎರಡು ಮೊಬೈಲ್ ಫೊನ್‌ಗಳನ್ನು ಕಡಬ ಪೇಟೆಯಲ್ಲಿರುವ ಬೇಕರಿಯೊಂದರಲ್ಲಿ ಚಾರ್ಜ್‌ಗಿಟ್ಟಿದ್ದ.ಈ ವೇಳೆಯೂ ಆತ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬೇಕರಿಗೆ ಆತ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಂದಿದ್ದಾನೆ.

LEAVE A REPLY

Please enter your comment!
Please enter your name here